ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ (Congress Party) ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ದುರಾಡಳಿತದ ಮೂಲಕ ಶಿಕ್ಷಣ (Education) ಕ್ಷೇತ್ರವನ್ನು ಹಾಳುಗೆಡವಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ (Bengaluru News) ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣ ವ್ಯವಸ್ಥೆಯಡಿ ರಾಜ್ಯ ಪಠ್ಯಕ್ರಮದಲ್ಲಿ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 9 ಲಕ್ಷದಷ್ಟು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಸರ್ಕಾರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಇಲಾಖೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದ ಅವರು, 1 ಕೋಟಿ ಮಕ್ಕಳ ಭವಿಷ್ಯವನ್ನು ಅತಂತ್ರಕ್ಕೆ ತಳ್ಳುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
10ನೇ ತರಗತಿ ಪರೀಕ್ಷೆ ಬರೆದ 9 ಲಕ್ಷದಷ್ಟು ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕದಲ್ಲಿದ್ದಾರೆ. ಕೆಎಸ್‍ಇಎಪಿ ಮೂಲಕ ಪರೀಕ್ಷೆ ನಡೆಸಿದ್ದಾರೆ. ಯಶಸ್ವಿ ಪರೀಕ್ಷೆ ನಡೆಸಿದ್ದಾಗಿ ಹೇಳಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಅತ್ಯಂತ ಕೆಟ್ಟ ಪರೀಕ್ಷೆ ನಡೆದಿದ್ದರೆ ಅದು ಮಧು ಬಂಗಾರಪ್ಪ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂದು ಟೀಕಿಸಿದರು.
ಸೂತ್ರದ ಗೊಂಬೆಯಾಗಿದ್ದ ಶಿಕ್ಷಣ ಸಚಿವರು
ಪಠ್ಯಪುಸ್ತಕದಲ್ಲಿನ ಪಾಠಗಳನ್ನು ಕಿತ್ತು ಹಾಕುವುದಾಗಿ ಹೇಳುವ ಮೂಲಕ ಈ ಸರ್ಕಾರ ಕಾರ್ಯಾರಂಭ ಮಾಡಿದೆ. ಶಿಕ್ಷಣ, ಪಠ್ಯದ ವಿಚಾರ ಶಿಕ್ಷಣ ತಜ್ಞರ ಮಟ್ಟದಲ್ಲಿ, ಇಲಾಖೆ ಮಟ್ಟದಲ್ಲಿ ನಿರ್ಧಾರವಾಗುತ್ತಿತ್ತು. ಆದರೆ, ಕಳೆದ ವರ್ಷ ಅದು ಕ್ಯಾಬಿನೆಟ್‍ನಲ್ಲಿ ನಿರ್ಧಾರವಾಗಿದೆ. ಇವರು ಕನ್ನಡದ 10 ಪಾಠ, ಸಮಾಜ ವಿಜ್ಞಾನದ 10 ಪಾಠಗಳನ್ನು ತೆಗೆದುಹಾಕಿ ಮೊಟ್ಟ ಮೊದಲ ಬಾರಿಗೆ ರಾಜಕೀಯಕರಣಗೊಳಿಸುವ ಕಾರ್ಯಕ್ಕೆ ಈಗಿನ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಕೈ ಹಾಕಿದ್ದರು. ಶಿಕ್ಷಣ ಸಚಿವರು ಸೂತ್ರದ ಗೊಂಬೆಯಾಗಿದ್ದರು ಎಂದು ಅರುಣ್ ಶಹಾಪುರ ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಇವತ್ತು ಇಡೀ ಕರ್ನಾಟಕದಲ್ಲಿ ಚುನಾವಣಾ ಚಾಣಕ್ಯರ ಕಪಿಮುಷ್ಟಿಗೆ ಸಿಲುಕಿದೆ. ಚುನಾವಣಾ ಚಾಣಕ್ಯರೇ ಕಾಂಗ್ರೆಸ್ಸಿನ ನೀತಿ ನಿರೂಪಿಸುತ್ತಿದ್ದಾರೆ. ಪಾಠಗಳು ಯಾವುದೇ ಶಾಲೆಯಲ್ಲಿ ಮಕ್ಕಳ ವರೆಗೆ ತಲುಪಲಿಲ್ಲ. ಎನ್‍ಇಪಿ ಜಾರಿ ಇಲ್ಲ ಎಂಬ ಗೊಂದಲಗಳಿಗೆ ಕೈಹಾಕಿದ್ದರು. ಕೊನೆಗೆ ಪರೀಕ್ಷೆಯು ಪ್ರಹಸನ ಎಂಬಂತೆ ನಡೆದಿದೆ ಎಂದು ತಿಳಿಸಿದರು. 5ನೇ ತರಗತಿ, 8ನೇ ತರಗತಿ, 9ನೇ ತರಗತಿ, 11ನೇ ತರಗತಿ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ವಿಚಾರ ದಿನವೂ ಬೆಳಿಗ್ಗೆ ಪಾಲಕರಿಗೆ ತಲೆನೋವಾಗಿ ಪರಿಗಣಮಿಸಿತ್ತು ಎಂದರು.
ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ
ಈ ಪರೀಕ್ಷೆಗಳ ಬಗ್ಗೆ ಈಗಲೂ ದೃಢ ನಿಲುವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿಲ್ಲ. 10ನೇ ತರಗತಿ ಹಾಗೂ ಪಿಯುಸಿಗೆ 3 ಪರೀಕ್ಷೆ (10- 1,2,3), (ಪಿಯು- 1,2,3) ಮಾಡಲು ಹೊರಟವರು ಮಕ್ಕಳ, ಪಾಲಕರ ಒತ್ತಡ, ಗೊಂದಲವನ್ನು ಯೋಚಿಸಿಲ್ಲ. ಯಾವ ಪರೀಕ್ಷೆ, ಪರೀಕ್ಷೆ ಬರೆದವರು ಯಾರು, ಯಾರಿಂದ ಮೌಲ್ಯಮಾಪನ ಎಂಬ ದೊಡ್ಡ ಗೊಂದಲಕ್ಕೆ ಇದು ಕಾರಣವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇಲಾಖೆಗೂ ಈ ಕುರಿತು ಸ್ಪಷ್ಟತೆ ಇಲ್ಲ. 3 ಪರೀಕ್ಷೆ ಇವರೇನು ಪುಕ್ಕಟೆ ಮಾಡುತ್ತಾರಾ ಎಂದರು.
ಪರೀಕ್ಷೆ ಎಂದರೆ ಸರ್ಕಾರಕ್ಕೆ ಒಂದು ಉದ್ಯಮವೇ?
ಒಂದು ಪರೀಕ್ಷೆಗೆ ರೂ. 410, 2 ಪರೀಕ್ಷೆಗೆ 510, 3 ಆದರೆ 710 ರೂ. ಪಾವತಿಸಬೇಕು. ಪರೀಕ್ಷೆ ಎಂದರೆ ಸರ್ಕಾರಕ್ಕೆ ಒಂದು ಉದ್ಯಮವೇ? ಪ್ರತಿಯೊಂದು 10ನೇ ಪರೀಕ್ಷೆ ನಡೆಯುವ ಕೇಂದ್ರಕ್ಕೆ ವೆಬ್ ಕಾಸ್ಟಿಂಗ್ ಅಳವಡಿಸಲು ಆದೇಶ ಮಾಡಿ ಒತ್ತಡ ಹೇರುವ ಹಾಗೂ ಯಾಕಾದರೂ ಪರೀಕ್ಷಾ ಕೇಂದ್ರ ಮಾಡಿದ್ದೇವೋ ಎಂದು ಯೋಚಿಸುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಿಸಿತ್ತು ಎಂದು ದೂರಿದರು.
ಪರೀಕ್ಷೆ ಸಂದರ್ಭದಲ್ಲಿ ಎಲ್ಲಿ ತಮ್ಮ ನೌಕರಿಗೆ ಕುತ್ತಾಗುವುದೋ ಎಂಬ ಆತಂಕ ಶಿಕ್ಷಕರಲ್ಲಿತ್ತು. ವೆಬ್ ಕಾಸ್ಟಿಂಗ್ ಬಗ್ಗೆ ಯಾವುದೇ ಶಿಕ್ಷಕರಿಗೆ ಪರಿಕಲ್ಪನೆ ಇರಲಿಲ್ಲ. ತರಬೇತಿ, ಮಾಹಿತಿಯೂ ಇರಲಿಲ್ಲ ಎಂದರು.
10ನೇ ತರಗತಿ ಪರೀಕ್ಷೆ ಎಂದರೆ ಮಕ್ಕಳನ್ನು ಭಯದ ವಾತಾವರಣದಲ್ಲಿ ಇಡಲಾಯಿತು. 10ನೇ ತರಗತಿ ಪರೀಕ್ಷೆಯಲ್ಲಿ ನೈಜ ಮೌಲ್ಯಮಾಪನ ಮಾಡಿದ್ದರೆ ಫಲಿತಾಂಶ ಪಾತಾಳಕ್ಕೆ ಕುಸಿಯಲಿದೆ ಎಂಬುದು ಅವರಿಗೆ ಅರ್ಥವಾಯಿತು. ಇಡೀ ರಾಜ್ಯದ ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಡಯಟ್ ಮತ್ತು ಇಲಾಖೆಯನ್ನು ಕತ್ತಲಲ್ಲಿ ಇಡಲಾಯಿತು. ಇವರು ಸ್ಥಾಪಿಸಿದ ಕೆಎಸ್‍ಇಇ ಮೂಲಕ ಉತ್ತೀರ್ಣ ಅಂಕವನ್ನು 35ರಿಂದ 25ಕ್ಕೆ ಇಳಿಸಿದ್ದಾರೆ. ಇದು ಶಿಕ್ಷಣ ಕ್ಷೇತ್ರ ಹಾಳು ಮಾಡಿದ ಈ ಸರ್ಕಾರದ ಸಾಧನೆ ಎಂದು ಟೀಕಿಸಿದರು.
ಇದನ್ನೂ ಓದಿ: Hebbal flyover: ಬಿಡಿಎ ಕಾಮಗಾರಿ; ಹೆಬ್ಬಾಳ ಮೇಲ್ಸೇತುವೆಗೆ ಕೆ.ಆರ್.ಪುರಂನಿಂದ ಬರುವ ವಾಹನಗಳಿಗೆ ನಿರ್ಬಂಧ
ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪಿ. ರಾಜೀವ್, ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ ಇದ್ದರು.