Site icon Vistara News

V. Sunil Kumar: ರಾಜ್ಯದಲ್ಲಿ ಅಸಮರ್ಥ ಸಂಪುಟ, ಅಭಿವೃದ್ಧಿ ಶೂನ್ಯ ಸರ್ಕಾರ: ವಿ. ಸುನೀಲ್ ಕುಮಾರ್

V. Sunil Kumar latest statemetn

ಬೆಂಗಳೂರು: ಕಾಂಗ್ರೆಸ್ ಪಕ್ಷದ (Congress Party) ರಾಜ್ಯ ಸರ್ಕಾರದ ಒಂದು ವರ್ಷದ ಅವಧಿಯನ್ನು ಅಸಮರ್ಥ ಸಂಪುಟ, ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ವಿಶ್ಲೇಷಿಸಬಹುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ (V. Sunil Kumar) ತಿಳಿಸಿದರು.

ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ. ರಿಜಾಯ್ಸ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಮುಗಿದು ಸರ್ಕಾರ ರಚನೆಯಾಗಿ ಒಂದು ವರ್ಷ ಮುಗಿಯುತ್ತಿದೆ. ಗೊತ್ತು-ಗುರಿ ಇಲ್ಲದ ಆಡಳಿತವನ್ನು ಕರ್ನಾಟಕದ ಜನತೆ ಕಳೆದ ಒಂದು ವರ್ಷದಲ್ಲಿ ನೋಡಿದ್ದಾರೆ. ಅಭಿವೃದ್ಧಿ ಶೂನ್ಯ ಸರ್ಕಾರ ಇದು ಎಂದು ಟೀಕಿಸಿದರು.

ಇದನ್ನೂ ಓದಿ: Miyazaki Mango: ಧಾರವಾಡಕ್ಕೆ ಬಂತು 2.7 ಲಕ್ಷ ರೂ. ಬೆಲೆಯ ಮಾವು!

ಈ ಒಂದು ವರ್ಷದ ಅವಧಿಯಲ್ಲಿ ಯಾವ ಯೋಜನೆಗೆ ಅನುದಾನ ಕೊಟ್ಟಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಬೇಕು. ಸ್ಥಳೀಯ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಯಾವ ಯೋಜನೆಗಳಿಗೆ, ಎಷ್ಟು ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಕೊಟ್ಟಿದ್ದಾರೆ ಎಂದು ಸರ್ಕಾರ ಬಹಿರಂಗಪಡಿಸಿದರೆ ಸಾಕು ಎಂದು ವ್ಯಂಗ್ಯವಾಗಿ ನುಡಿದರು.

ಇಂಥ ಅಭಿವೃದ್ಧಿ ಶೂನ್ಯ ಆಡಳಿತ, ಸರ್ಕಾರವನ್ನು ಕರ್ನಾಟಕದ ಜನತೆ ಯಾವತ್ತೂ ನೋಡಿರಲಿಲ್ಲ. ವಿಧಾನಸಭಾ ಕ್ಷೇತ್ರಗಳು, ಇಲಾಖೆಗಳಿಗೆ ಒಂದು ರೂಪಾಯಿ ಅನುದಾನವನ್ನೂ ಕೊಡದೆ ಒಂದು ವರ್ಷ ಕಾಲವನ್ನು ಈ ಸರ್ಕಾರ ಕಳೆದಿದೆ. ನಾವೆಲ್ಲ ಶಾಸಕರು ಒಂದು ವರ್ಷದಿಂದ ಒಂದು ಗುದ್ದಲಿ ಪೂಜೆ ಮಾಡಲಾಗಿಲ್ಲ. ಒಂದು ಅನುದಾನ ಬಂದಿದೆ ಎಂದು ಜನರ ಹತ್ತಿರ ಹೋಗಲೂ ಆಗಿಲ್ಲ ಎಂದು ಟೀಕಿಸಿದರು.

ಸರ್ಕಾರಿ ನೌಕರರಿಗೆ ಸಂಬಳ ಸಿಗುತ್ತಿಲ್ಲ

ಜನರು ಕೂಡ ಈ ಸರ್ಕಾರದಿಂದ ಅನುದಾನ ಬರುವುದಿಲ್ಲ ಎಂಬಷ್ಟರ ಮಟ್ಟಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಂಪುಟವನ್ನು ಗಮನಿಸಿದರೆ ಇಡೀ ಸಂಪುಟವೇ ಅಸಮರ್ಥವಾಗಿದೆ. ಸಚಿವರ ಮೇಲೆ ಹಿಡಿತವಿಲ್ಲದೆ ಮುಖ್ಯಮಂತ್ರಿಗಳು ಅಸಮರ್ಥವಾಗಿದ್ದಾರೆ. ಯೋಜನೆ ರೂಪಿಸುವುದರಲ್ಲಿ ಸಿಎಂ ಅಸಮರ್ಥವಾಗಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಸಿಗುತ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಅಸಮರ್ಥ ಮುಖ್ಯಮಂತ್ರಿಯ ಆಡಳಿತವನ್ನು ಕರ್ನಾಟಕದಲ್ಲಿ ನೋಡುತ್ತಿದ್ದೇವೆ ಎಂದು ವಿ. ಸುನೀಲ್ ಕುಮಾರ್ ತಿಳಿಸಿದರು.

ಕಾನೂನು, ಸುವ್ಯವಸ್ಥೆ ನಿಭಾಯಿಸುವುದರಲ್ಲಿ ಗೃಹ ಸಚಿವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಬರ ಪರಿಹಾರದಲ್ಲಿ ಕಂದಾಯ ಸಚಿವರು ಎಷ್ಟು ದೊಡ್ಡ ಪ್ರಮಾಣದಲ್ಲಿ ವೈಫಲ್ಯ ಕಂಡಿದ್ದಾರೆಂದರೆ ಮಂತ್ರಿಮಂಡಲದ ಒಬ್ಬ ಸದಸ್ಯರೂ ಬರ ಪರಿಹಾರದ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ ಎಂದು ಅವರು ಆರೋಪಿಸಿದರು. ಹಣ ಬಿಡುಗಡೆ ಮಾಡಿಲ್ಲ. ಕಂದಾಯ ಸಚಿವರಿಂದ ಗ್ರಾಮೀಣಾಭಿವೃದ್ಧಿ ಸಚಿವರವರೆಗೆ ಎಲ್ಲ ಸಂಪುಟವು ಬರ ಪರಿಹಾರದ ನಿರ್ವಹಣೆಯಲ್ಲಿ ಅಸಮರ್ಥವಾಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ICMR Dietary Guidelines: ಊಟದ ಮೊದಲು, ಊಟದ ನಂತರ ಚಹಾ, ಕಾಫಿ ಕುಡಿದರೆ ಏನಾಗುತ್ತದೆ?

ರೈತರಿಗೆ ಈಗ ಹೊಸ ಸಾಲ ಸಿಗುತ್ತಿಲ್ಲ. ರೈತರ ಸಾಲದ ಬಡ್ಡಿ ಮನ್ನಾ ಮಾಡಿದ್ದಾಗಿ ಘೋಷಣೆ ಮಾಡಿ, 496 ಕೋಟಿ ಅನುದಾನವನ್ನು ಬಿಡುಗಡೆ ಮಾಡದ ಕಾರಣ ಪಿಎಲ್‍ಡಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಲ್ಲಿ ರೈತರಿಗೆ ಮರುಸಾಲ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಅದಕ್ಕೆ ಕೃಷಿ- ಸಹಕಾರಿ ಸಚಿವರು ಇವತ್ತು ಅಸಮರ್ಥವಾಗಿರುವುದೇ ಕಾರಣ ಎಂದರು.

ಈ ಸರ್ಕಾರ ಬಂದ ಬಳಿಕ ಕರ್ನಾಟಕದ ಒಬ್ಬನೇ ಒಬ್ಬ ರೈತನಿಗೆ ಹೊಸ ಪಂಪ್‍ಸೆಟ್ ಸಂಪರ್ಕ ಸಿಗಲಿಲ್ಲ. ರೈತರು ಹಣ ಕಟ್ಟಿದರೂ ಹೊಸ ಸಂಪರ್ಕ ಸಿಕ್ಕಿಲ್ಲ 24 ಗಂಟೆ ವಿದ್ಯುತ್ ನಿರಂತರ ಬಿಡಿ, ಗ್ರಾಮೀಣ ಪ್ರದೇಶದಲ್ಲಿ 10- 12 ಗಂಟೆ ವಿದ್ಯುತ್ ಕೊಡಲಾಗದ ಅಸಮರ್ಥ ಇಂಧನ ಸಚಿವರು ನಮ್ಮ ನಡುವೆ ಇದ್ದಾರೆ ಎಂದು ಟೀಕಿಸಿದರು.

ಶಿಕ್ಷಣದ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ

ಶಿಕ್ಷಣದ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗ್ರೇಸ್ ಮಾರ್ಕ್ ಕೊಟ್ಟಿದ್ದನ್ನು ಗಮನಿಸಿದರೆ ಶಿಕ್ಷಣ ಇಲಾಖೆ ಎಷ್ಟು ಅಸಮರ್ಥ ಎಂಬುದನ್ನು ನಾವು ನೋಡುತ್ತಿದ್ದೇವೆ. ಅಂಗನವಾಡಿಯವರಿಗೆ ಗೌರವಧನ ಹೆಚ್ಚಿಸಿಲ್ಲ; ಅಂಗನವಾಡಿಗಳ ಮೊಟ್ಟೆ ವಿತರಣೆಯಲ್ಲಿ ವ್ಯತ್ಯಾಸವಾಗಿದೆ. ಅಲ್ಲೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಅಸಮರ್ಥರಾಗಿದ್ದಾರೆ ಎಂದು ದೂರಿದರು.

ಬ್ರ್ಯಾಂಡ್ ಬೆಂಗಳೂರು ಇವತ್ತು ದಿಕ್ಕೆಟ್ಟ ಬೆಂಗಳೂರಾಗಿದೆ. ಬೆಂಗಳೂರಿಗೆ ಯಾವ ರೀತಿಯ ಯೋಜನೆ ರೂಪಿಸುವುದರಲ್ಲಿ ನಗರಾಭಿವೃದ್ಧಿ ಸಚಿವರು ಅಸಮರ್ಥರಾಗಿದ್ದಾರೆ. ಇದೊಂದು ಅಸಮರ್ಥ ಸಂಪುಟ, ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಆರೋಪಿಸಿದರು.

ಬೆಲೆ ಹೆಚ್ಚಳ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಪಿಕ್ ಪಾಕೆಟ್ ಕಾಂಗ್ರೆಸ್ ಎಂದು ನಾವು ಈ ಹಿಂದೆ ಹೇಳಿದ್ದೆವು. ಅದನ್ನು ಸರ್ಕಾರ ಸರಿ ಮಾಡಿಕೊಂಡಿಲ್ಲ. ಕರ್ನಾಟಕದಲ್ಲಿ ಆಡಳಿತವನ್ನು ಕೆಲವು ಕುಟುಂಬದ ಸದಸ್ಯರು, ಇವೆಂಟ್ ಮ್ಯಾನೇಜ್‍ಮೆಂಟಿನ ಸದಸ್ಯರು ಸರ್ಕಾರ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಈ ಸರ್ಕಾರ ನಡೆಯುತ್ತಿದೆ ಎಂದು ಅವರು ದೂರಿದರು.

ಈ ಅಸಮರ್ಥ ಸರ್ಕಾರದ ವಿರುದ್ಧ ಬಿಜೆಪಿ ಜನಾಂದೋಲನ ನಡೆಸಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ತಿಳಿಸಿದರು.

ಇದನ್ನೂ ಓದಿ: Google Update: ಕೃತಕ ಬುದ್ಧಿಮತ್ತೆ, ವಂಚನೆ ತಡೆಯಲು ಅಲರ್ಟ್‌; ಗೂಗಲ್‌ ಹೊಸ ಘೋಷಣೆಗಳು ಏನೇನು?

ಈ ವೇಳೆ ರಾಜ್ಯ ಮುಖ್ಯ ವಕ್ತಾರ ಅಶ್ವಥ ನಾರಾಯಣ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ, ಪ್ರಕಾಶ್ ಶೇಷರಾಘವಾಚಾರ್, ಮೋಹನ್ ವಿಶ್ವ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ರಾಜ್ಯ ಮಾಧ್ಯಮ ಸಹ-ಸಂಚಾಲಕ ಪ್ರಶಾಂತ್ ಕೆಡೆಂಜಿ ಉಪಸ್ಥಿತರಿದ್ದರು.

Exit mobile version