Site icon Vistara News

Bengaluru News : ಕುಡಿತ ತಂದ ಆಪತ್ತು; ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು

Labourer dies after falling from building

ಬೆಂಗಳೂರು: ರಾತ್ರಿ ಗೆಳೆಯರೊಂದಿಗೆ ಪಾರ್ಟಿ ಮಾಡಿ (Night Party) ಕಂಠಪೂರ್ತಿ ಕುಡಿದು ಆತ ಟೈಟಾಗಿದ್ದ.‌ ಅದೇ ನಶೆಯಲ್ಲಿ ನಿರ್ಮಾಣ ಹಂತದ ಕಟ್ಟಡವನ್ನೇರಿದ್ದ. ಕಟ್ಟಡದ ಮೇಲೆ ಮಲಗಿದ್ದ ಕಾರ್ಮಿಕನಿಗೆ ಮಧ್ಯರಾತ್ರಿ ಎಚ್ಚರವಾಗಿತ್ತು. ಅದೇ ನಶೆಯಲ್ಲಿ ತೂರಾಡಿಕೊಂಡು ಆಯಾತಪ್ಪಿ ಕಟ್ಟಡದಿಂದ ಬಿದ್ದು (Bengaluru News) ಸಾವನ್ನಪ್ಪಿದ್ದಾನೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಈ ದುರ್ಘಟನೆ ನಡೆದಿದೆ. ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಅಮಿತ್ ಚಾಂಗ್ (32) ಎಂಬ ಕಾರ್ಮಿಕ ಮೃತಪಟ್ಟಿದ್ದಾನೆ. ನಿನ್ನೆ ಭಾನುವಾರ ಆಗಿದ್ದರಿಂದ ಅಮಿತ್ ಚಾಂಗ್ ರಾತ್ರಿ ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದ. ಪಾರ್ಟಿ ಬಳಿಕ ಕಟ್ಟಡದ ಮೇಲೆ ಮಲಗಿದ್ದ. ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಎದ್ದಾಗ ಆಯಾತಪ್ಪಿ ಕಟ್ಟಡದಿಂದ ಬಿದ್ದಿದ್ದಾನೆ.

ಮೇಲಿಂದ ಬಿದ್ದ ರಭಸಕ್ಕೆ ಅಮಿತ್‌ ತಲೆಗೆ ತೀವ್ರ ಪೆಟ್ಟಾಗಿತ್ತು. ರಕ್ತಸ್ರಾವದಿಂದ ಸ್ಥಳದಲ್ಲಿ ಮೃತಪಟ್ಟಿದ್ದ. ಮುಂಜಾನೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ಮೂವರ ಸಾವಿಗೆ ಕಾರಣವಾಯಿತು ಯಶ್ ಬರ್ತ್‌ಡೇ ಬ್ಯಾನರ್‌

ಗದಗ: ಗದಗದಲ್ಲಿ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ, ನಟ ಯಶ್‌ (Yash) ಅವರ ಬರ್ತ್‌ಡೇ ಬ್ಯಾನರ್ (Birthday banner) ಕಟ್ಟುವಾಗ ಮೂರು ಯುವಕರು ಸಾವಿಗೀಡಾಗಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಯಶ್‌ ಅವರ ಜನ್ಮದಿನಕ್ಕೆ ಶುಭಾಶಯ ಕೋರುವ ಬ್ಯಾನರ್‌ ಅನ್ನು ಹಸಿ ನೀಲಗಿರಿ ಕಟ್ಟಿಗೆಗೆ ಕಟ್ಟಿ ಮೇಲೆತ್ತುವಾಗ ವಿದ್ಯುತ್ ತಂತಿ ತಗುಲಿ ಕರೆಂಟ್‌ ಶಾಕ್‌ ಹೊಡೆದು ಅವಘಡ ಸಂಭವಿಸಿದೆ.

ಹನಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಮೃತ ಯುವಕರು. ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಎಲ್ಲರೂ ಸೂರಣಗಿ ಗ್ರಾಮದವರು ಎಂದು ತಿಳಿದು ಬಂದಿದೆ.

ಕಲುಷಿತ ನೀರು ಸೇವನೆಗೆ ಮೊದಲ ಬಲಿ

ವಿಜಯನಗರ: ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 30ಕ್ಕೂ ಅಧಿಕ ಜನ ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದರು. ಈ ಪೈಕಿ ವೃದ್ಧೆಯೊಬ್ಬರು ಮೃತಪಟ್ಟಿರುವುದು ಕಂಡುಬಂದಿದೆ.

ಕಾರಿಗನೂರಿನ RBSSN ಕ್ಯಾಂಪ್ ನಿವಾಸಿ ಸೀತಮ್ಮ (66) ಮೃತ ವೃದ್ಧೆ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದರಿಂದ ಗ್ರಾಮದ 30ಕ್ಕೂ ಹೆಚ್ಚು ಮಂದಿಯನ್ನು ಶನಿವಾರ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಸೀತಮ್ಮ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಭಾನುವಾರ ಸಂಜೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಟ್ಯಾಂಕರ್‌ ಕ್ಲೀನ್‌ ಮಾಡದೆ ಪೂರೈಕೆ ಮಾಡಿದ್ದರಿಂದ ಗ್ರಾಮಕ್ಕೆ ಪಾಚಿ ಮಿಶ್ರಿತ ಕುಡಿಯುವ ನೀರು ಸರಬರಾಜು ಆಗಿತ್ತು. ಅನಿವಾರ್ಯತೆಯಿಂದ ಆ ನೀರನ್ನೇ ಕುಡಿದ ಹಿನ್ನೆಲೆಯಲ್ಲಿ 30ಕ್ಕೂ ಅಧಿಕ ಜನಕ್ಕೆ ವಾಂತಿ, ಭೇದಿಯಾಗಿ ಅಸ್ವಸ್ಥರಾಗಿದ್ದರು. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಧ್ಯಾಹ್ನ ಶಾಸಕ ಗವಿಯಪ್ಪ, ಡಿಸಿ ದಿವಾಕರ್ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version