ಬೆಂಗಳೂರು: ಯಲಹಂಕದ ಕೆಪಿಟಿಸಿಎಲ್ ಘಟಕದ ಪವರ್ ಪ್ಲಾಂಟ್ (KPTCL Power plant) ವಿರುದ್ಧ ಪುಟ್ಟೇನಹಳ್ಳಿ ಅನಂತಪುರ ಗೇಟ್ ನಿವಾಸಿಗಳು ಪ್ರತಿಭಟನೆ (Bengaluru News) ನಡೆಸಿದ್ದಾರೆ. ಭಯಾನಕ ಶಬ್ಧಕ್ಕೆ ಅನಂತಪುರ ಗೇಟ್ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಕಳೆದ 2020ರಲ್ಲಿ ಪವರ್ ಪ್ಲಾಂಟ್ ಘಟಕದಲ್ಲಿ ಸ್ಫೋಟಗೊಂಡು ಸುಮಾರು ಜನರಿಗೆ ಹಾನಿ ಸಂಭವಿಸಿತ್ತು. ಜನಾಕ್ರೋಶ ಎದುರಾದ ಕಾರಣಕ್ಕೆ ಅಧಿಕಾರಿಗಳು ಘಟಕವನ್ನು ಬಂದ್ ಮಾಡಿದ್ದರು. ಆದರೆ ಇದೀಗ ಮತ್ತೆ ನಿನ್ನೆ ಗುರುವಾರದಿಂದ ಪ್ಲಾಂಟ್ ಪುನಾರಂಭವಾಗಿದೆ. ಇದು ಅಲ್ಲಿನ ಜನರ ನಿದ್ದೆಗೆಡಿಸಿದೆ.
ಕೆಪಿಟಿಸಿಎಲ್ ಘಟಕದಿಂದ ಶಬ್ಧ ಮಾಲಿನ್ಯ ಹೆಚ್ಚಾಗುತ್ತಿದ್ದು ಜತೆಗೆ ದಟ್ಟ ಹೊಗೆಯಿಂದ ನಮಗೆ ತೊಂದರೆ ಆಗುತ್ತಿದೆ. ಮಕ್ಕಳಿಗೆ ಬೋರ್ಡ್ ಎಕ್ಸಾಂಗೆ ತಯಾರಿ ನಡೆಯುತ್ತಿದೆ. ಜತೆಗೆ ಮನೆಯಲ್ಲಿ ಹಿರಿ ಜೀವಗಳು ಇದ್ದಾರೆ. ಘಟಕದಿಂದ ಬರುವ ಶಬ್ಧದಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ ಎಂದು ಅಳಲನ್ನು ತೊಡಿಕೊಂಡಿದ್ದಾರೆ.
ಗುರುವಾರ ರಾತ್ರಿಯಿಂದಲೇ ಕೆಪಿಟಿಸಿಎಲ್ ಘಟಕದ ಮುಂದೆ ನೂರಕ್ಕೂ ಹೆಚ್ಚು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ವಿದ್ಯುತ್ ಉತ್ಪಾದನೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಮಾರ್ಚ್ 9ರಂದು ಬೃಹತ್ ಪ್ರತಿಭಟನೆ ಸಜ್ಜು
ಅಂದಹಾಗೇ ಡೀಸೆಲ್ ಬಳಸಿ ವಿದ್ಯುತ್ ಉತ್ಪಾದಿಸುವ ಯಲಹಂಕ ಕೆಪಿಟಿಸಿಎಲ್ ಘಟಕ ಇದಾಗಿದ್ದು, ಹಿಂದೆ ಕೂಡ ಇಲ್ಲಿ ದುರಂತಗಳು ಸಂಭವಿಸಿವೆ. ಈ ಸಂಬಂಧ ಸ್ಥಳೀಯರು ಕೋರ್ಟ್ ಮೆಟ್ಟಿಲೆರಿದ್ದರು. ಬಂದ್ ಆಗಿದ್ದ ಘಟಕ ಈಗ ರೀ ಓಪನ್ ಆಗಿದ್ದಕ್ಕೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಟ್ರಯಲ್ ಆರಂಭಿಸಿ ವಿದ್ಯುತ್ ಉತ್ಪಾದನೆಗೆ ಕೆಪಿಟಿಸಿಎಲ್ ಸಿದ್ಧತೆ ನಡೆಸುತ್ತಿದೆ. ಇತ್ತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಮಾರ್ಚ್ 9ರ ಭಾನುವಾರ ಮತ್ತೆ ಬೃಹತ್ ಪ್ರತಿಭಟನೆಗೆ ಸ್ಥಳೀಯ ಅಪಾರ್ಟ್ಮೆಂಟ್ ನಿವಾಸಿಗಳು ನಿರ್ಧರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ