Site icon Vistara News

Bengaluru rain : ಬೆಂಗಳೂರಿನ ಪ್ರವಾಹ ತಪ್ಪಿಸಲು 2,800 ಕೋಟಿ ರೂ.ಗಳ ಮಾಸ್ಟರ್ ಪ್ಲಾನ್‌! ಏನು-ಹೇಗೆ?

Bangalore flood situation

#image_title

ಬೆಂಗಳೂರು: ಬೆಂಗಳೂರಿನಲ್ಲಿ ಪ್ರವಾಹದ ಆತಂಕ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಒಂದರ್ಧ ಗಂಟೆ ಜೋರು ಮಳೆ ಬಂದರೂ ಸಾಕಷ್ಟು ಅನಾಹುತ ಆಗುತ್ತಿದೆ. (Bengaluru rain) ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಇತ್ತೀಚೆಗೆ ನಗರದ ಕೆ.ಆರ್‌ ವೃತ್ತದ ಅಂಡರ್‌ ಪಾಸ್‌ನಲ್ಲಿ ಕಾರು ಸಿಲುಕಿ 22 ವರ್ಷ ವಯಸ್ಸಿನ ಯುವತಿ ಮೃತಪಟ್ಟ ಬಳಿಕ ಇಂಥ ಪ್ರಶ್ನೆ ಮೂಡಿದೆ.

ಐಟಿ ನಗರಿ ಬೆಂಗಳೂರಿನಲ್ಲಿ 658 ಕಿ.ಮೀ ಉದ್ದದ ಹೊಸ ಚರಂಡಿಯ ವ್ಯವಸ್ಥೆ ಮಾಡಿದರೆ ಪ್ರವಾಹ ಪರಿಸ್ಥಿತಿ ಬರದಂತೆ ತಡೆಯಬಹುದು. ಇದಕ್ಕೆ 2,800 ಕೋಟಿ ರೂ. ವೆಚ್ಚವಾಗಲಿದೆ ಎಂದು ಪ್ರಾಪರ್ಟಿ ಕನ್ಸಲ್ಟೆನ್ಸಿ ವಲಯದ ನೈಟ್ ಫ್ರಾಂಕ್‌ ಇಂಡಿಯಾದ (‌Knight Frank India) ವರದಿ ತಿಳಿಸಿದೆ. ಬೆಂಗಳೂರಿನಲ್ಲಿ 2000ರಿಂದೀಚೆಗೆ ಟೆಕ್‌ ಕಂಪನಿಗಳ ಸಂಖ್ಯೆ ಹೆಚ್ಚಳದ ಪರಿಣಾಮ ರಿಯಾಲ್ಟಿ ನಿರ್ಮಾಣಗಳು ಗಣನೀಯ ಹೆಚ್ಚಳವಾಗಿದೆ. ಆದರೆ ಸರಿಯಾದ ಚರಂಡಿ ವ್ಯವಸ್ಥೆ ಇದುವರೆಗೆ ನಿರ್ಮಾಣವಾಗಿಲ್ಲ ಎಂದು ನೈಟ್‌ ಫ್ರಾಂಕ್‌ ವರದಿ ತಿಳಿಸಿದೆ.

ಕೆರೆಗಳ ಸುತ್ತಮುತ್ತ ಮತ್ತು ರಾಜಾ ಕಾಲುವೆಗಳ ಮೇಲೆ ರಿಯಾಲ್ಟಿ ಅಭಿವೃದ್ಧಿಯಿಂದಾಗಿ ಮಳೆ ನೀರನ್ನು ಹೀರಿಕೊಳ್ಳುವ ನಗರದ ಸಾಮರ್ಥ್ಯ ಇಳಿದಿದೆ. ಇದರ ಪರಿಣಾಮ 2022ರಲ್ಲಿ ಭಾರಿ ಪ್ರವಾಹ ಸಂಭವಿಸಿದೆ. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಬೆಂಗಳೂರಿನ ಪಾತ್ರ ನಿರ್ಣಾಯಕ. ದೇಶದ ಪ್ರಮುಖ ನಗರಗಳಲ್ಲಿ ಇದು ಒಂದಾಗಿದೆ. ಆದ್ದರಿಂದ ಚರಂಡಿ ವ್ಯವಸ್ಥೆ ಸುಗಮವಾಗಬೇಕು. ಆಗ ನೆರೆ ತಪ್ಪಿಸಬಹುದು ಎಂದು ನೈಟ್‌ ಫ್ರಾಂಕ್‌ ವರದಿ ತಿಳಿಸಿದೆ.

ಬೆಂಗಳೂರಿನಲ್ಲಿ 2002ರಲ್ಲಿ 37% ಇದ್ದ ಬಿಲ್ಟ್‌ ಅಪ್‌ ಪ್ರದೇಶ 2020ರ ವೇಳೆಗೆ 93%ಕ್ಕೆ ಜಿಗಿದಿದೆ. ಬೆಂಗಳೂರು 842 ಕಿಲೋಮೀಟರ್‌ ಪ್ರೈಮರಿ ಮತ್ತು ಸೆಕೆಂಡರಿ ಚರಂಡಿಗಳನ್ನು ಹೊಂದಿದೆ. 2031ರ ವೇಳೆಗೆ ಇನ್ನೂ ಹೆಚ್ಚುವರಿ 658 ಕಿ.ಮೀ ಚರಂಡಿಯ ಅಗತ್ಯ ಇದೆ. ಆಗ ಬೆಂಗಳೂರಿನ ಜನಸಂಖ್ಯೆ 1.8 ಕೋಟಿಗೆ ಏರಿಕೆಯಾಗಬಹುದು ಎಂದು ವರದಿ ತಿಳಿಸಿದೆ.

ಬೆಂಗಳೂರಿನಲ್ಲಿ ಕಳೆದ ಮೇನಲ್ಲಿ 301.1 ಎಂ.ಎಂ ಮಳೆ ಬಿದ್ದಿದೆ. 1957ರ ಮೇನಲ್ಲಿ ಬಿದ್ದಿದ್ದ ದಾಖಲೆಯ 287.1 ಎಂ.ಎಂ ಅನ್ನೂ ಇದು ಅಳಿಸಿದೆ. ಸರಿಯಾದ ಚರಂಡಿ ವ್ಯವಸ್ಥೆಯ ಕೊರತೆಯ ಪರಿಣಾಮ ನಗರದಲ್ಲಿ ಪ್ರವಾಹ ಸಮಸ್ಯೆ ಉಲ್ಬಣಿಸಿದೆ. ತಗ್ಗುಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಶಿವಾನಂದ ಸರ್ಕಲ್‌, ಬನ್ನೇರುಘಟ್ಟ ರಸ್ತೆಯ ಸಾಗರ್‌ ಆಸ್ಪತ್ರೆ ಜಂಕ್ಷನ್‌, ಲಿಂಗರಾಜಪುರಂ ಅಂಡರ್‌ ಪಾಸ್‌, ಚಿಕ್ಕಪೇಟೆ ಮುಖ್ಯರಸ್ತೆ, ಸ್ಯಾಂಕಿ ರಸ್ತೆ, ಕೆಆರ್‌ ಸರ್ಕಲ್‌ ಅಂಡರ್‌ ಪಾಸ್‌, ಓಲ್ಡ್‌ ಮದ್ರಾಸ್‌ ರೋಡ್‌ ಮೊದಲಾದ ಕಡೆ ಚರಂಡಿ ವ್ಯವಸ್ಥೆ ಸುಧಾರಿಸಬೇಕಿದೆ ಎಂದು ವರದಿ ತಿಳಿಸಿದೆ.

ಕರ್ನಾಟಕ ಸರ್ಕಾರ 2023-24ರ ಬಜೆಟ್‌ನಲ್ಲಿ ಚರಂಡಿಗಳ ಸುಧಾರಣೆಗೆ 3,000 ಕೋಟಿ ರೂ. ಮಂಜೂರು ಮಾಡಿದೆ. ವಿಶ್ವಬ್ಯಾಂಕ್‌ ನೆರವು ಇದಕ್ಕೆ ಸಿಗಲಿದೆ ಎಂದು ವರದಿ ತಿಳಿಸಿದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಚರಂಡಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಮಾತ್ರ ನೆರೆಯ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ವಿವರಿಸಿದೆ.

ಇದನ್ನೂ ಓದಿ: Rain News: ಈ 12 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯ ಎಚ್ಚರಿಕೆ

Exit mobile version