ಬೆಂಗಳೂರು: ನಗರದಲ್ಲಿ ರಾತ್ರಿಯಿಂದ ಸುರಿದ ಮಳೆಯಿಂದಾಗಿ ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ನೀರು ನುಗ್ಗಿದ್ದು, ಬಡಾವಣೆಗಳೆಲ್ಲವೂ (Bengaluru Rain News) ಜಲಾವೃತಗೊಂಡಿದೆ. ನಗರದ ರಸ್ತೆಗಳೆಲ್ಲವೂ ನದಿಯಂತಾಗಿದ್ದು ಜನರು ಓಡಾಡಲು ತೆಪ್ಪವನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇಶದೆಲ್ಲೆಡೆ ಬೆಂಗಳೂರಿನ ಅವ್ಯವಸ್ಥೆಯ ಚರ್ಚೆ ನಡೆಯುತ್ತಿದೆ.
ಪ್ರಮುಖವಾಗಿ ಬೆಳ್ಳಂದೂರು, ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್, ಹೊರ ವರ್ತುಲ ರಸ್ತೆ ಮತ್ತು ಬಿಇಎಂಎಲ್ ಲೇಔಟ್ ಹಾಗೂ ಮಾರತ್‌ಹಳ್ಳಿ ಹೆಚ್ಚು ಮಳೆ ಬಾಧಿತ ಪ್ರದೇಶಗಳಾಗಿವೆ. ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ರಾಜಧಾನಿಯ ಚಿತ್ರಣವೇ ಬದಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಳೆ ಅವಾಂತರವನ್ನು ಹಂಚಿಕೊಂಡಿದ್ದಾರೆ.
ಮಾರತ್ತಹಳ್ಳಿಯ ಸ್ಪೈಸ್ ಗಾರ್ಡನ್ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳು ತೇಲುತ್ತಿರುವುದು ಕಂಡುಬಂದಿದೆ. ಸ್ಪೈಸ್ ಗಾರ್ಡನ್‌ನಿಂದ ವೈಟ್ ಫೀಲ್ಡ್‌ವರೆಗಿನ ರಸ್ತೆಯು ಜಲಾವೃತಗೊಂಡಿದ್ದರಿಂದ ರಸ್ತೆ ಸಂಚಾರ ನಿರ್ಬಂಧಿಸಲಾಗಿತ್ತು.
ಔಟರ್ ರಿಂಗ್ ರೋಡ್‌ನಲ್ಲಿ ಸಂಚಾರಕ್ಕೆ ಅಡ್ಡಿ
ರಸ್ತೆ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಪ್ರಮುಖವಾಗಿ ಹೊರ ವರ್ತುಲ ರಸ್ತೆಯಲ್ಲಿ (ಔಟರ್ ರಿಂಗ್ ರೋಡ್) ಸಂಚಾರದ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ಬೆಂಗಳೂರಿನ ಹೊರವಲಯದಲ್ಲಿರುವ ಟೆಕ್ ಪಾರ್ಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯುದ್ದಕ್ಕೂ ವಾಹನಗಳು ನಿಂತಲ್ಲೇ ನಿಲ್ಲುವಂತಾಯಿತು.
ನೀರಿನಲ್ಲಿ ಮುಳುಗಡೆಯಾದ ವಿಪ್ರೋ ಕಂಪೆನಿ, ರೈಂಬೋ ಲೇಔಟ್
ಸರ್ಜಾಪುರ ರಸ್ತೆಯ ರೈನ್‌ಬೋ ಲೇಔಟ್, ವಿಪ್ರೋ ಕಂಪನಿ ಸೇರಿ ಸುಮಾರು 100ಕ್ಕೂ ಮನೆಗಳು ಮುಳುಗಡೆಯಾಗಿವೆ. ಮನೆಗಳ ಮುಂದೆ ನಿಂತಿದ್ದ ವಾಹನಗಳು ಸಂಪೂರ್ಣ ಜಲವೃತಗೊಂಡಿದ್ದು, ಜನರು ತತ್ತರಿಸಿ ಹೋಗಿದ್ದಾರೆ.
ಲಹರಿ ವೇಲು ಮನೆಗೂ ನುಗ್ಗಿದ ಮಳೆ ನೀರು
ಡಾಲರ್ಸ್ ಕಾಲೊನಿಯಲ್ಲಿರುವ ಲಹರಿ ಮ್ಯೂಸಿಕ್ ಮಾಲೀಕ ಲಹರಿ ವೇಲು ಅವರ ಮನೆಗೆ ಮಳೆ ನೀರು ನುಗ್ಗಿತ್ತು. ಪಾರ್ಕಿಂಗ್ ಏರಿಯಾದಲ್ಲಿ ನಾಲ್ಕೈದು ಅಡಿ ನೀರು ನಿಂತು ಅವಾಂತರವೇ ಸೃಷ್ಟಿಯಾಗಿತ್ತು. ಮಳೆ ಬಂದಾಗಲ್ಲೆಲ್ಲ ಇದೇ ರೀತಿ ಸಮಸ್ಯೆ ಆಗಲಿದೆ ಎಂದು ಸಿಬ್ಬಂದಿಗಳು ಅಳಲು ತೋಡಿಕೊಂಡರು.
ಮನೆಯಲ್ಲಿಯೇ ಜನರು ದಿಗ್ಭಂಧನ
ಸಿ.ವಿ.ರಾಮನ್ ಕ್ಷೇತ್ರದ ಹೆಚ್ಎಎಲ್ ಎರಡನೇ ಹಂತದ ಕೋಡಿಹಳ್ಳಿಯ 17 ಹಾಗೂ 18 ಮುಖ್ಯ ರಸ್ತೆ ನೀರಿನಿಂದ ಮುಳುಗಡೆಯಾಗಿತ್ತು. ಪರಿಣಾಮ ಮನೆಯಲ್ಲಿಯೇ ಜನರಿಗೆ ದಿಗ್ಬಂಧನ ಹಾಕಲಾಗಿತ್ತು. ಇದೇ ಪರಿಸ್ಥಿತಿ ಇಂದಿರಾನಗರ, ದೊಮ್ಮಲೂರಿನಲ್ಲಿ ನಿರ್ಮಾಣವಾಗಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳು ಮುಳುಗಿ ಹೋಗಿತ್ತು.
ಮದುವೆ ಮನೆ ಮುಳುಗಡೆ
ಇಂದಿರಾ ನಗರದ ಎಂಟನೇ ಬ್ಲಾಕ್‌ನಲ್ಲಿ ಮದುವೆ ಮನೆಯೊಂದು ಮಳೆಯಿಂದ ಜಲಾವೃತಗೊಂಡಿತ್ತು. ಮದುವೆಗೆಂದು ಸಿಂಗಾರಗೊಂಡಿದ ಮನೆ ರಾತ್ರಿ ಸುರಿದ ಮಳೆಯಿಂದ ಮುಳುಗಡೆಯಾಗಿತ್ತು. ಮಳೆ ನೀರು ಮನೆಗೆ ನುಗ್ಗಿದ ಕಾರಣ ಕಲ್ಯಾಣ ಮಂಟಪದಲ್ಲಿಯೇ ನವವಧು-ವರರನ್ನು ಇರುವಂತಾಯ್ತು.
ಮಳೆ ನೀರಿನಲ್ಲಿ ಮುಳುಗಿ ಹೋಗುತ್ತಿದ್ದ ವ್ಯಕ್ತಿ
ಮಾರತ್ತಹಳ್ಳಿಯ ಮಳೆ ನೀರಿನಲ್ಲಿ ವ್ಯಕ್ತಿಯೊಬ್ಬ ಮುಳುಗಿ ಹೋಗುತ್ತಿದ್ದವರನ್ನು ತಕ್ಷಣಕ್ಕೆ ನೆರವಿಗೆ ಧಾವಿಸಿ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಂಡಿಯಲ್ಲಿ ಸಿಲುಕಿದ್ದ ಬಿಎಂಟಿಸಿ ಬಸ್ಸು
ಸಾರ್ವಜನಿಕರಿಂದಲೇ ಬಿಎಂಟಿಸಿ ಬಸ್ ಸಂರಕ್ಷಿಸಲಾಯಿತು. ವೈಟ್ ಫೀಲ್ಡ್ ಮುಖ್ಯ ರಸ್ತೆಯಲ್ಲಿ ಮೊಣಕಾಲು ಎತ್ತರಕ್ಕೆ ನೀರು ನಿಂತ ಪರಿಣಾಮ ಬಿಎಂಟಿಸಿ ಚಾಲಕ ಬಸ್ ಚಾಲಾಯಿಸಿದ್ದಾರೆ. ಈ ವೇಳೆ ಬಸ್ಸಿನ ಚಕ್ರವೂ ದೊಡ್ಡ ಗುಂಡಿಗೆ ಸಿಲುಕಿಗೊಂಡಿತ್ತು. ಹೊರ ಬರಲು ಆಗದೇ ರಸ್ತೆ ಮಧ್ಯೆಯೇ ಸಿಲುಕಿಕೊಂಡಿತ್ತು. ಬಳಿಕ ನೆರವಿಗೆ ಬಂದ ಸಾರ್ವಜನಿಕರು ಬಸ್ಸಿಗೆ ಹಗ್ಗ ಕಟ್ಟಿ ನೀರಿನಲ್ಲಿ ಸಿಲುಕಿದ್ದ ಬಿಎಂಟಿಸಿ ಬಸ್ ಅನ್ನು ಹೊರಗೆಳೆದರು.
ಇದನ್ನೂ ಓದಿ | Cauvery Water | ಮಳೆ ನೀರಲ್ಲಿ ಮುಳುಗಿದ ಯಂತ್ರಾಗಾರಗಳು: ಇನ್ನೆರಡು ದಿನ ಬೆಂಗಳೂರಿಗೆ ಕಾವೇರಿ ನೀರಿಲ್ಲ