ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ಗೆ ಸಂಚಾರಿ ಪೊಲೀಸರು (Bengaluru Traffic) ಹೊಸ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಆದರೆ ರಾಜಧಾನಿ ಬೆಂಗಳೂರಲ್ಲಿ ಮನುಷ್ಯರಿಗಿಂತ ವಾಹನಗಳ ಸಂಖ್ಯೆಯೇ ಮೇಲುಗೈ ಸಾಧಿಸಿದೆ. ಹೀಗಾಗಿ ವಾಹನ ದಟ್ಟಣೆಗೆ ಜನ ಬೆಚ್ಚಿ ಬೀಳುವಂತಾಗಿದೆ. ಅಷ್ಟರ ಮಟ್ಟಿಗೆ ವಾಹನ ದಟ್ಟಣೆಯು ಬೆಂಗಳೂರಲ್ಲಿ ಸಮಸ್ಯೆಯನ್ನು ಹುಟ್ಟು ಹಾಕಿದೆ. ಇನ್ನು ರೋಗಿಗಳನ್ನು ಹೊತ್ತೋ, ಅಥವಾ ಕರೆತರಲೋ ಆಂಬ್ಯುಲೆನ್ಸ್ ವಾಹನಗಳು ರಸ್ತೆಗಿಳಿದರೆ ಟ್ರಾಫಿಕ್ ಎಂಬ ಮಾಯಲೋಕದಿಂದ ಹೊರಬರಲು ಗಂಟೆಗಟ್ಟೆಲೆ ಕಾಯಬೇಕು. ಅಷ್ಟರ ಮಟ್ಟಿಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಸದ್ಯ ಆಂಬ್ಯುಲೆನ್ಸ್ ವಾಹನಗಳು (ambulance) ಟ್ರಾಫಿಕ್ನಲ್ಲಿ ಸಿಲುಕದಿರಲು ಟ್ರಾಫಿಕ್ ಪೊಲೀಸರು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದಕ್ಕಾಗಿ ಹೊಸ ಆ್ಯಪ್ವೊಂದು (traffic App) ಸಿದ್ಧವಾಗುತ್ತಿದೆ.
ಸಿಲಿಕಾನ್ ವ್ಯಾಲಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಬೆಂಗಳೂರು (Bengaluru) ತನ್ನ ಸಂಚಾರದಟ್ಟಣೆಗೂ (traffic) ಜಗದ್ವಿಖ್ಯಾತಿ ಪಡೆದಿದೆ. ಪ್ರತಿನಿತ್ಯವೂ ಲಕ್ಷಗಟ್ಟಲೆ ಮಂದಿ ತಮ್ಮ ವೃತ್ತಿ ನಿಮಿತ್ತವಾಗಿ ಬೆಂಗಳೂರಿನಲ್ಲಿ ನಿತ್ಯವೂ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಮಾಡುತ್ತಿದ್ದು, ಈ ಟ್ರಾಫಿಕ್ ಸಮಸ್ಯೆಯಿಂದ ತಮ್ಮ ಮನೆಗಳನ್ನು ಸೇರಿಕೊಳ್ಳಲು ಹರಸಾಹಸ ಪಡುತ್ತಾರೆ. ಮೆಟ್ರೋನಂತಹ ಸಾರ್ವಜನಿಕ ಸೇವೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದರೂ, ಇಂದಿಗೂ ಬೆಂಗಳೂರು ಎಂದರೆ ಟ್ರಾಫಿಕ್ ಜಾಮ್, ಟ್ರಾಫಿಕ್ ಎಂದರೆ ಬೆಂಗಳೂರು ಎಂಬ ಅನ್ವರ್ಥನಾಮ ಮಾತ್ರ ಬದಲಾಗಿಲ್ಲ.
ಆಂಬ್ಯುಲೆನ್ಸ್ ವಾಹನಗಳು ಅದೆಷ್ಟೋ ಜನರ ಪಾಲಿಗೆ ಸಂಜೀವಿನಿ ಇದ್ದಂತೆ. ಚಾಲಕರು ತಮ್ಮ ಪ್ರಾಣವನ್ನು ಲೆಕ್ಕಿಸಿದೆ, ಉಸಿರು ಹೋಗುವ ಜೀವಗಳನ್ನು ಸರಿಯಾದ ಸಮಯದಕ್ಕೆ ಆಸ್ಪತ್ರೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಬೆಂಗಳೂರಿನ ಟ್ರಾಫಿಕ್ ಜಂಜಾಟಕ್ಕೆ ಬೇಸತ್ತು ಹೋಗಿದ್ದಾರೆ. ಇದಕ್ಕೆ ಮುಕ್ತಿ ನೀಡುವ ಸಲುವಾಗಿ ಬೆಂಗಳೂರು ಸಂಚಾರಿ ಪೊಲೀಸರು ಆ್ಯಪ್ವೊಂದನ್ನು ಸಿದ್ಧಪಡಿಸಿಲು ಮುಂದಾಗಿದ್ದಾರೆ. ಆ ಮೂಲಕ ಆಂಬ್ಯುಲೆನ್ಸ್ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಇದನ್ನೂ ಓದಿ: Vidyut Jammwal: ಬೆತ್ತಲಾದ ಖ್ಯಾತ ನಟ; ಗ್ರೀಕ್ ದೇವರಂತೆ ಕಾಣುತ್ತಿದ್ದೀರಿ ಎಂದ ವರ್ಮಾ!
ಸಂಚಾರಿ ಪೊಲೀಸರ ಪ್ಲ್ಯಾನ್ ಏನು?
ಈ ಹಿಂದೆ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ವಾಹನ ಹೊರಡುವ ಮುನ್ನ ಸ್ಥಳೀಯ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಪೊಲೀಸ್ ಸಿಬ್ಬಂದಿ ಟ್ರಾಫಿಕ್ ಅನ್ನು ಕ್ಲಿಯರ್ ಮಾಡಿ ಆಂಬ್ಯುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು. ಆದರೆ ಇದು ಅಂದುಕೊಂಡ ಮಟ್ಟಿಗೆ ಯಶಸ್ವಿಯಾಗಲಿಲ್ಲ. ಇದೀಗ ಮತ್ತೊಮ್ಮೆ ಇದೇ ಪ್ಲ್ಯಾನ್ನೊಂದಿಗೆ ಆ್ಯಪ್ ಮೂಲಕ ಕಾರ್ಯಾಚರಣೆ ನಡೆಸಲು ಇಲಾಖೆ ಮುಂದಾಗಿದೆ.
*ಎಲ್ಲಿಂದ ಎಲ್ಲಿಗೆ ಆಂಬ್ಯುಲೆನ್ಸ್ ಹೋಗಲಿದೆ ಎಂಬುದನ್ನು ಆಸ್ಪತ್ರೆ ಸಿಬ್ಬಂದಿ ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕು.
*ಅಪ್ಲೋಡ್ ಆದ ಮಾಹಿತಿಯನ್ನು ಸಂಚಾರಿ ನಿರ್ವಹಣ ಕೇಂದ್ರ ಸಿಬ್ಬಂದಿ ಪರಿಶೀಲನೆ ಮಾಡುತ್ತಾರೆ.
*ಈ ಮಾಹಿತಿಯನ್ನು ಟ್ರಾಫಿಕ್ ಪೊಲೀಸರಿಗೆ ತಿಳಿಸಿ, 60 ಸೆಕೆಂಡ್ಗೂ ಹೆಚ್ಚು ಕಾಲ ನಿಂತಿದ್ದರೆ ಅಲರ್ಟ್ ಮೆಸೇಜ್ ನೀಡಲಾಗುತ್ತದೆ.
*ಮುಂದಿನ ಸಿಗ್ನಲ್ಗೆ ಮೊದಲೇ ಮಾಹಿತಿ ನೀಡಿ ಟ್ರಾಫಿಕ್ ಕ್ಲಿಯರ್ ಮಾಡಲಾಗುತ್ತದೆ.
*ಜತೆಗೆ ಯಾವ ರಸ್ತೆಯಲ್ಲಿ ಟ್ರಾಫಿಕ್ ಇಲ್ಲ ಎಂಬ ಮಾಹಿತಿಯನ್ನು ಚಾಲಕರಿಗೆ ನೀಡಲಾಗುತ್ತದೆ.
ಬೆಂಗಳೂರಲ್ಲಿ ದಿನವೊಂದಕ್ಕೆ ಅಂದಾಜು ಮೂರು ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ಗಳು ಓಡಾಟ ನಡೆಸುತ್ತೆ. ಆದರೆ ಬಹುತೇಕ ಸಮಯದಲ್ಲಿ ಆಂಬ್ಯುಲೆನ್ಸ್ ವಾಹನಗಳು ಟ್ರಾಫಿಕ್ನಲ್ಲೇ ಸಿಲುಕಿ ಬಿಡುತ್ತೆ. ಅದೆಷ್ಟು ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಲು ಆಗದೆ ಚಿಕಿತ್ಸೆ ಸಿಗದೇ ಹಲವರು ಜೀವ ಕಳೆದುಕೊಂಡಿದ್ದಾರೆ. ಹಿಂದೊಮ್ಮೆ ಆಂಬ್ಯುಲೆನ್ಸ್ಗಳಿಗೆ ಸಿಂಗಲ್ ಲೈನ್ ಮಾಡಲಾಯಿತಾದರೂ ಅದು ವರ್ಕ್ಔಟ್ ಆಗಲಿಲ್ಲ. ಸದ್ಯ ಆ್ಯಪ್ ಮೂಲಕ ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ, ಇದು ಯಾವ ರೀತಿಯಲ್ಲಿ ಉಪಯೋಗಕ್ಕೆ ಬರುತ್ತೆ ಎಂಬುದನ್ನು ಕಾದು ನೋಡಬೇಕು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ