Site icon Vistara News

Bengaluru Traffic: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಹೊಸ ತಂತ್ರಜ್ಞಾನ; ಸಂಚಾರ ಇಲಾಖೆಯ ಪ್ಲಾನ್

Bengaluru Traffic

ಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆ (Bengaluru Traffic) ನಿರ್ವಹಿಸಲು ಗುಣಾತ್ಮಕ ಸುಧಾರಣೆಗಾಗಿ ಸಾಫ್ಟ್‌ವೇರ್ ಆಧಾರಿತ ವ್ಯವಸ್ಥೆಯನ್ನು (software based system) ಪರಿಚಯಿಸುವ ಪ್ರಸ್ತಾವನೆಯೊಂದಿಗೆ ಸಂಚಾರ ಇಲಾಖೆ (traffic department) ರಾಜ್ಯ ಸರ್ಕಾರವನ್ನು ಸಂಪರ್ಕಿಸಿದೆ. ಉದ್ದೇಶಿತ ಈ ವ್ಯವಸ್ಥೆಯು ರಸ್ತೆಯ ಯಾವುದೇ ಸಂಕೀರ್ಣ ಪರಿಸ್ಥಿತಿಯನ್ನು ಅನುಕರಿಸಲು ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಚಾರ ಪೊಲೀಸರಿಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ.

ಸರ್ಕಾರವು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ ಬೆಂಗಳೂರು ‘ಟ್ರಾಫಿಕ್ ಮೈಕ್ರೋ ಸಿಮ್ಯುಲೇಶನ್ ಮಾಡೆಲಿಂಗ್’ ವ್ಯವಸ್ಥೆಯನ್ನು ಹೊಂದಿರುವ ಭಾರತದ ಮೊದಲ ನಗರವಾಗಲಿದೆ. ಅಧಿಕಾರಿಗಳ ಪ್ರಕಾರ, ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸುಮಾರು 4 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದಕ್ಕಾಗಿ ವಿದೇಶದಿಂದ ನೆರವು ಪಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.

ಕ್ರಿಯಾ ಯೋಜನೆ ಸಲ್ಲಿಕೆ

ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಮಾತನಾಡಿ, ನಾವು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಈ ಕ್ರಿಯಾ ಯೋಜನೆ ಸಲ್ಲಿಸಿದ್ದು, ಹೊಸ ತಂತ್ರಜ್ಞಾನವನ್ನು ಸೇರಿಸುವ ಪ್ರಸ್ತಾವನೆಯು ಅದರಲ್ಲಿ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು.

ಮೈಕ್ರೋ ಸಿಮ್ಯುಲೇಶನ್ ಮಾಡೆಲಿಂಗ್ ವ್ಯವಸ್ಥೆಯು ಸಾಫ್ಟ್‌ವೇರ್ ಮತ್ತು ಕೆಲವು ಐಟಿ ಉಪಕರಣಗಳನ್ನು ಒಳಗೊಂಡಿದೆ. ಇದಕ್ಕೆ ಸುಮಾರು 4 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ನಾವು ಅವುಗಳನ್ನು ವಿದೇಶದಿಂದ ಪಡೆದುಕೊಳ್ಳಬೇಕಾಗುತ್ತದೆ. ಹೊಸ ತಂತ್ರಜ್ಞಾನವನ್ನು ಕಡಿಮೆ ಟ್ರಾಫಿಕ್ ಹೊಂದಿರುವ ದೇಶಗಳು ಅಳವಡಿಸಿಕೊಳ್ಳುತ್ತಿವೆ ಎಂದು ಹೇಳಿದರು.

ಹೊಸ ವ್ಯವಸ್ಥೆಯನ್ನು ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ಸ್ಥಾಪಿಸಲಾಗುವುದು ಮತ್ತು ಯಾವುದೇ ರೀತಿಯ ಟ್ರಾಫಿಕ್ ಪರಿಸ್ಥಿತಿಯನ್ನು ಅನುಕರಿಸಲು ಇದು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.

ಹೇಗೆ ಸಹಾಯ ಮಾಡುತ್ತದೆ?

ಯಾವುದೇ ರಸ್ತೆಯಲ್ಲಿ ಏಕಮುಖ ವ್ಯವಸ್ಥೆಯನ್ನು ಪರಿಚಯಿಸಲು ಯೋಜಿಸಿದರೆ ಅಧಿಕಾರಿಗಳು ಮೈಕ್ರೋ ಸಿಮ್ಯುಲೇಶನ್ ಮಾಡೆಲಿಂಗ್ ವ್ಯವಸ್ಥೆಯ ಮೂಲಕ ಸುತ್ತಮುತ್ತಲಿನ ರಸ್ತೆಗಳ ಮೇಲೆ ಅದರ ಪರಿಣಾಮವನ್ನು ನಿರ್ಣಯಿಸಬಹುದು ಮತ್ತು ಉತ್ತಮ ಕ್ರಮವನ್ನು ಮಾಡಬಹುದು ಎಂದು ಅನುಚೇತ್ ವಿವರಿಸಿದರು.

ಒಮ್ಮೆ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದರೆ, ಯಾವುದೇ ಉದ್ದೇಶಿತ ನಿರ್ಧಾರವನ್ನು ನೇರವಾಗಿ ಅನುಷ್ಠಾನಗೊಳಿಸುವ ಮೊದಲು ಯಾವ ರಸ್ತೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳಬಹುದು ಎಂದರು.

ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

ಇದು ಟ್ರಾಫಿಕ್ ಅನ್ನು ನಿರ್ವಹಿಸುವಲ್ಲಿ ಗುಣಾತ್ಮಕ ಬದಲಾವಣೆಯನ್ನು ತರಬಹುದು. ನಾವು ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ಭಾರಿ ದಟ್ಟಣೆಯನ್ನು ಗಮನಿಸಿದರೆ ಹತ್ತಿರದ ರಸ್ತೆಗಳ ಮೂಲಕ ವಾಹನಗಳನ್ನು ಹೇಗೆ ತಿರುಗಿಸುವುದು ಎಂಬುದನ್ನು ತ್ವರಿತವಾಗಿ ವಿಶ್ಲೇಷಿಸಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಪ್ರತಿದಿನ 3,000 ಹೊಸ ವಾಹನ

2023ರ ಡಿಸೆಂಬರ್ 31ರ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲಿ 1.2 ಕೋಟಿ ವಾಹನಗಳು ನೋಂದಣಿಯಾಗಿವೆ. ಪ್ರತಿದಿನ ಸರಾಸರಿ 3,000 ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Exit mobile version