ಬೆಂಗಳೂರು: ಬೆಂಗಳೂರು ಪೊಲೀಸರು ಈಗ ಫುಲ್ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರ ಸಂಚಾರ ಪೊಲೀಸ್ ಮುಖ್ಯಸ್ಥರಾಗಿ ಸಲೀಂ ಅಹ್ಮದ್ ಆಗಮಿಸಿದ ನಂತರ ಕೆಲ ಕ್ರಮ ಕೈಗೊಂಡು ಪೀಕ್ ಅವರ್ ಸಂಚಾರ ದಟ್ಟಣೆಯಲ್ಲಿ ಕಡಿಮೆ ಆಗಿರುವುದರ ಕ್ರೆಡಿಟ್ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಪೀಕ್ ಅವರ್ ಅಂದರೆ ಹೆಚ್ಚು ವಾಹನ ದಟ್ಟಣೆ ಇರುವ ಸಮಯದಲ್ಲಿ ಭಾರೀ ವಾಹನಗಳನ್ನು ನಿರ್ಬಂಧಿಸಿರುವ ಕಾರಣಕ್ಕೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗಿದೆ. ಇದಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಮುಖವಾಗಿ ಗೊರಗುಂಟೆ ಪಾಳ್ಯ, ಹೆಬ್ಬಾಳ ಮುಂತಾದೆಡೆ ಇದರ ಪರಿಣಾಮ ನೇರವಾಗಿ ಜನರಿಗೆ ಗೋಚರವಾಗುತ್ತಿದೆ.
ಈ ಕುರಿತು ಯಶವಂತಪುರ ಸಂಚಾರ ಪೊಲೀಸರು ಮಾಡಿರುವ ಟ್ವೀಟ್ ಗಮನ ಸೆಳೆಯುವಂತಿದೆ.
“ಸಮಯ:ಬೆ-9.40
:ಮಗಾ ಎಲ್ಲಿದಿಯಾ..?
:ಆಗ್ಲೇ ಆಫೀಸ್ಗೆ ಬಂದು 10 ನಿಮಿಷ ಆಯ್ತು..
ಸಮಯ:ಸಂಜೆ-6.30
:ಮಗಾ ಎಲ್ಲಿದಿಯಾ..?
:ಮನೆಗೆ ಬಂದು ಆಗ್ಲೇ 20 ನಿಮಿಷ ಆಯ್ತು..
:ಏನೀವಾಗ ತುಂಬಾ ಬೇಗ ಆಫೀಸ್ಗೆ/ಮನೆಗೆ ಬರ್ತಿದಿರಾ..!!
:ರೋಡ್ ಫ್ರೀ ಇರುತ್ತೆ..ಪೀಕ್ ಅವರ್ ನಲ್ಲಿ HTV ವಾಹನಗಳು ಓಡಾಡ್ತಿಲ್ಲಾ.
“ಸುಗಮ_ಸುರಕ್ಷಿತ ಸಂಚಾರಕ್ಕೆ ನಾವಿದೀವಿ”
ಹೀಗೆ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ. ಇಂತಹ ವಿನೂತನ ಟ್ವೀಟ್‌ಗೆ ಟ್ವಿಟರ್ ಬಳಕೆದಾರರೂ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಯಶವಂತಪುರ ಸಂಚಾರ ಪೊಲೀಸರು ಇಂತಹ ಟ್ವೀಟ್ ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಹೆಚ್ಚಾದಾಗ ಈ ರೀತಿ ಟ್ವೀಟ್ ಮಾಡಿದ್ದರು.
“ಹೆಲೋ ಬೆಂಗಳೂರು.. ಈ ಮಳೆ, ಚಳಿ ನಿಲ್ತಾನೆ ಇಲ್ಲ ರಸ್ತೆ & ಟೈರ್ ಗಳು ನೆಂದಿರುತ್ತೆ…ಸ್ಲಿಪ್ ಆಗ್ಬಹುದು, ಮನೆ/ಡ್ಯೂಟಿ ಗೆ ಬೇಗ ಹೋಗೋದ್ಕಿಂತ, ಹುಷಾರಾಗಿ ಹೋಗಿ.. Is anything else…? ಎಲ್ಲಾ ಜಂಕ್ಷನ್/ರಸ್ತೆಗಳಲ್ಲೂ ನಮ್ಮ ನಂಬಿಕೆಯ ಪೊಲೀಸ್ನೋರು ಇದಾರೆ, No problem.. ರಸ್ತೇಲಿ ನಿಮ್ಗೆ ಯಾವ್ದೇ ತೊಂದ್ರೆ ಆಗೊಲ್ಲಾ..”
ಇದನ್ನೂ ಓದಿ | ಸಂಚಾರ ದಟ್ಟಣೆ ಹೆಚ್ಚಿರುವ 10 ಪ್ರದೇಶಗಳ ಗುರುತು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್