Site icon Vistara News

ʼದಲಿತ ವಿರೋಧಿ ಕಾಂಗ್ರೆಸ್‌ʼ: ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದಂದು ದಾಳಿ ನಡೆಸಿದ ಬಿಜೆಪಿ

bjp-blames-congress-on-ambedkar-parinirvana-day

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನದಂದು ಕಾಂಗ್ರೆಸ್‌ ನಾಯಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರೆ ಇತ್ತ ಕಾಂಗ್ರೆಸ್‌ ವಿರುದ್ಧವೇ ಬಿಜೆಪಿ ದಾಳಿ ನಡೆಸಿದೆ. ದಲಿತ ವಿರೋಧಿ ಕಾಂಗ್ರೆಸ್‌ ಎಂದು ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಬರಹವನ್ನು ರಾಜ್ಯ ಬಿಜೆಪಿ ಪ್ರಕಟಿಸಿದೆ.

ದಲಿತ ಮತಗಳನ್ನು ತನ್ನತ್ತ ಸೆಳೆಯಲು ಎಲ್ಲ ಕಸರತ್ತನ್ನೂ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್‌ ಪಕ್ಷವೇ ಅಂಬೇಡ್ಕರ್‌ ಅವರಿಗೆ ಅನ್ಯಾಯ ಮಾಡಿದ್ದು ಎಂಬುದಾಗಿ ಪ್ರಕಟಣೆ ಹೊರಡಿಸಿದೆ.

ಬಾಬಾ ಸಾಹೇಬರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯದ ಇತಿಹಾಸ ಎಂದು ಹೇಳಿರುವ ಬಿಜೆಪಿ, ಅಂಬೇಡ್ಕರ್‌ ಅವರನ್ನು ಚುನಾವಣೆಗಳಲ್ಲಿ ಸೋಲಿಸಿದರು, ಅಂಬೇಡ್ಕರ್‌ ಅಂತ್ಯಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದರು, ಅಂಬೇಡ್ಕರ್‌ ಅವರನ್ನು ಬಿಟ್ಟು, ತಮಗೆ ತಾವೇ ಭಾರತ ರತ್ನ ಘೋಷಿಸಿಕೊಂಡರು, ತುರ್ತುಪರಿಸ್ಥಿತಿ ಹೇರಿ ಸಂವಿಧಾನದ ಆಶಯಕ್ಕೆ ಕೊಳ್ಳಿ ಇಟ್ಟರು ಎಂದು ತಿಳಿಸಿದೆ.

ಮುಂಬಯಿ ನಾರ್ಥ್ ಸೆಂಟ್ರಲ್‌ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಂಬೇಡ್ಕರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಕುತಂತ್ರದಿಂದ ಸೋಲಿಸಿದ್ದು ಇದೇ ಕಾಂಗ್ರೆಸ್. ‌ಆದರೆ ಈಗ ತನ್ನ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅದೇ‌ ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿದೆ.

ಕಾಂಗ್ರೆಸ್ ಸಂವಿಧಾನ ವಿರೋಧಿ ಎಂಬ ಕಾರಣಕ್ಕೇ ಅಂಬೇಡ್ಕರ್ ಕಾಂಗ್ರೆಸ್‌ನ್ನು‌ ತ್ಯಜಿಸಿದ್ದು. “ಕಾಂಗ್ರೆಸ್‌ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ” ಎಂಬ ಅಂಬೇಡ್ಕರ್ ಮಾತು ಇಲ್ಲಿ ಉಲ್ಲೇಖಾರ್ಹ. ನಮ್ಮನ್ನೇ ಬಿಟ್ಟ ನಿಮಗೆ ಸೋಲೇ ಖಚಿತ ಎಂದು ಸಂವಿಧಾನ ಶಿಲ್ಪಿಯ ವಿರುದ್ಧ ಕಾಂಗ್ರೆಸ್ ಕುತಂತ್ರ ಮಾಡಿತ್ತು.

ನೆಹರೂ ಸಮಾಧಿಗೆ 52 ಎಕರೆಗೂ ಹೆಚ್ಚು ಜಾಗ ಕೊಟ್ಟ ಕಾಂಗ್ರೆಸ್‌ಗೆ ಡಾ. ಅಂಬೇಡ್ಕರ್ ಅವರ ಶವಸಂಸ್ಕಾರಕ್ಕೂ 6 ಅಡಿ ಜಾಗವನ್ನು ದೆಹಲಿಯಲ್ಲಿ ಬೇಕಂತಲೇ ಕೊಡಲಿಲ್ಲ. ದೇಶದ ಬಡವರಿಗೆ ಬದುಕುವ ಹಕ್ಕು ಕೊಟ್ಟ ಅಂಬೇಡ್ಕರರಿಗೆ ಕಾಂಗ್ರೆಸ್ ಅಂತಿಮ ಸಂಸ್ಕಾರವನ್ನು ಗೌರವದಿಂದ ನಡೆಸಲೂ ಬಿಡದೆ ಅವಮಾನಿಸಿದ್ದನ್ನು ಜನ ಮರೆತಿಲ್ಲ.

ಸಂವಿಧಾನ ಶಿಲ್ಪಿ ಅಂಬೇಡ್ಕರರಿಗೆ ಭಾರತ ರತ್ನ ನೀಡಲು ಕಾಂಗ್ರೆಸ್‌ ಹಿಂದೆ ಮುಂದೆ ನೋಡಿತ್ತು, ಆದರೆ ಅದಾಗಲೇ ನೆಹರೂ, ಇಂದಿರಾ ಗಾಂಧಿ ತಮಗೆ ತಾವೇ ಭಾರತ ರತ್ನಕ್ಕೆ ಕೊರಳೊಡ್ಡಿದ್ದರು! ಇಂಥ ಸಮಯದಲ್ಲೂ ಸಂವಿಧಾನ ಕೊಟ್ಟವರ ನೆನಪೂ ಆಗದ ಕಾಂಗ್ರೆಸ್‌ಗೆ ಈಗ ಅಂಬೇಡ್ಕರ್ ಜಪ ಕೇವಲ ಆಷಾಡಭೂತಿತನ ಅಷ್ಟೇ.

ಅಂಬೇಡ್ಕರ್ ಕರ್ನಾಟಕದಲ್ಲಿ ಭೇಟಿ ನೀಡಿದ 10 ಪ್ರಮುಖ ಸ್ಥಳಗಳ ಅಭಿವೃದ್ಧಿಗೆ 70 ವರ್ಷಗಳಲ್ಲಿ ಕಾಂಗ್ರೆಸ್ ಮುಂದಾಗಲಿಲ್ಲ, ಬಿಜೆಪಿ ಬರಬೇಕಾಯಿತು‌. ಅತೀ ಹೆಚ್ಚು ದಲಿತರ ಗೆಲ್ಲಿಸಿ ಕೇಂದ್ರ ಸಂಪುಟದಲ್ಲಿರಿಸಿದ್ದು ಬಿಜೆಪಿ. 70 ವರ್ಷ ದಲಿತರ ಮೀಸಲು ಹೆಚ್ಚಳ ಮಾಡಲಿಲ್ಲ, ಬಿಜೆಪಿಯೇ ಬಂದು ಮೀಸಲು ಕೊಡಬೇಕಾಯ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರ ವಿಧಿ ತೆಗೆಯಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂದೇ ಹೇಳಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅವರ ಆಶಯವನ್ನು ಗೌರವಿಸದೇ ಆರ್ಟಿಕಲ್ 370 ರ ವಿಧಿಯನ್ನು 70 ವರ್ಷ ಮುಂದುವರಿಸಿದರು. ಬಾಬಾ ಸಾಹೇಬರ ಆ ಆಶಯವನ್ನು ನನಸು ಮಾಡಿದ್ದು ಮೋದಿ ಸರ್ಕಾರ.

ಮೋದಿ‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರರಿಗೆ ಸಂಬಂಧಿಸಿದ ಪ್ರಮುಖ 5 ಸ್ಥಳಗಳನ್ನು ಪಂಚತೀರ್ಥ ಎಂಬ ಹೆಸರಿನಲ್ಲಿ ಅಭಿವೃದ್ಧಿ ಮಾಡಿದೆ. ಅರ್ಥಪೂರ್ಣವಾದ ಸಂವಿಧಾನ ದಿನಾಚರಣೆ ಜಾರಿಗೆ ತಂದಿದೆ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ | ಅಂಬೇಡ್ಕರ್​ ಮಹಾ ಪರಿನಿರ್ವಾಣ ದಿನ; ಸಂಸತ್​ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ

Exit mobile version