ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮೇಲೆ ಲೋಕಾಯುಕ್ತ ದಾಳಿ ವಿಚಾರ ಹಾಗೂ ಕಾಂಗ್ರೆಸ್ ನಾಯಕರ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನ್ನು ವಿರೋಧಿಸಿ ಸೋಮವಾರ ಎರಡು ಪಕ್ಷಗಳು ರಾಜ್ಯ ಬಿಜೆಪಿ ಕಚೇರಿ(BJP Karnataka) ಮುತ್ತಿಗೆ ಯತ್ನ ನಡೆಸಿದವು.
ಮೊದಲಿಗೆ, ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವನ್ನು ಮುಂದಾಗಿಸಿಕೊಂಡು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರೆಸ್) ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಮುತ್ತಿಗೆ ಪ್ರಯತ್ನ ಮಾಡಲಾಯಿತು.
ಏಕಾಏಕಿ ಪಕ್ಷದ ಕಚೇರಿ ಬಳಿ ಆಗಮಿಸಿದ ಕಾರ್ಯಕರ್ತರು, ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಆಗ್ರಹಿಸಿದರು. ಕೆಲಕಾಲ ಪ್ರತಿಭಟನೆ ನಂತರ ಎಲ್ಲರನ್ನೂ ಪೊಲೀಸರು ಬಂದಿಸಿ ಕರೆದೊಯ್ದರು.
ಇದನ್ನೂ ಓದಿ: Lokayukta Raid : ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ವಿರೂಪಾಕ್ಷಪ್ಪ ಮಾಡಾಳ್, ನಾಳೆಗೆ ಲಿಸ್ಟಿಂಗ್
ಕೆಲಹೊತ್ತಿನ ನಂತರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಲಾಯಿತು. ಅರೆ ಹುಚ್ಚ ನಳಿನ್ ಕುಮಾರ್ ಕಟೀಲ್ ಎಂದು ಘೋಷಣೆ ಕೂಗುತ್ತಿದ್ದವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಎರಡೂ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದ ಸುತ್ತ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ.
ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಮಾರ್ಚ್ 9ರಂದು ರಾಜ್ಯ ಬಂದ್‌ಗೆ ಕರೆ ನೀಡಿದೆ ಬೆಳಗ್ಗೆ 9ರಿಂದ 11.30ರವರೆಗೆ ಉದ್ಯಮಿಗಳು ಬಂದ್ ಮಾಡಿ ಸಹಕರಿಸಬೇಕು ಎಂದು ಕಾಂಗ್ರೆಸ್ ವಿನಂತಿಸಿದೆ.
ಶಾಲೆ ಕಾಲೇಜು, ಆಸ್ಪತ್ರೆಗೆ ತೊಂದರೆಯಾಗದಂತೆ, ಸಾರ್ವಜನಿಕರಿಗೆ ಅಡಚಣೆಯಿಲ್ಲದಂತೆ ಬಂದ್‌ಗೆ ಸಹಕಾರವನ್ನು ಪಡೆಬೇಕು ಎಂದು ಎಲ್ಲ ಜಿಲ್ಲಾ ಘಟಕಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ.