ಬೆಂಗಳೂರು: ಬಿಜೆಪಿಗೆ ಕುಖ್ಯಾತ ರೌಡಿಶೀಟರ್‌ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ
ಈಗಾಗಲೇ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಪಕ್ಷಕ್ಕೆ ಯಾವುದೇ ರೌಡಿಶೀಟರ್ ಅನ್ನು ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ. ಕಾಂಗ್ರೆಸ್‌ನವರು ಸುಖಾಸುಮ್ಮನೆ ವಿವಾದ ಇಲ್ಲದಿದ್ದರೂ ವಿವಾದ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪಕ್ಷ ಸಂಘಟನಾ ಸಭೆ ಬಳಿಕ ಮಾತನಾಡಿ, ಬಿಜೆಪಿಗೆ ಫೈಟರ್ ರವಿ ಸೇರ್ಪಡೆ ಬಗ್ಗೆ ಬಿಜೆಪಿ ರಾಜ್ಯ ಅಧ್ಯಕ್ಷರೇ ಮಾತನಾಡುತ್ತಾರೆ. ಕಾಂಗ್ರೆಸ್‌ಗೆ ನಮ್ಮ ವಿರುದ್ಧ ಯಾವುದೇ ಅಜೆಂಡಾ ಸಿಗುತ್ತಿಲ್ಲ. ಕೈ ನಾಯಕರ ಆರೋಪಗಳಲ್ಲಿ ಧಮ್ ಇಲ್ಲ, ರಾಹುಲ್ ಗಾಂಧಿ ಹೋದ ಕಡೆಯೆಲ್ಲ ಕಾಂಗ್ರೆಸ್ ಸೋಲುತ್ತಿದೆ. ಚಾಮರಾಜನಗರಕ್ಕೆ ರಾಹುಲ್ ಬಂದು ಹೋದಮೇಲೆ ಅಲ್ಲಿನ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಇಲ್ಲಿನ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಯಾತ್ರೆಯಲ್ಲಿ ಲಕ್ಷ ಲಕ್ಷ ಜನ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್.ಜಿ.ವಿ ಭಾಗವಹಿಸಿದ್ದರು.
ಅಭ್ಯರ್ಥಿಗಳ ಆಯ್ಕೆಗೆ ಗುಜರಾತ್ ಮಾಡೆಲ್?
ಗುಜರಾತ್‌ನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಲವು ಹಾಲಿ ಶಾಸಕರನ್ನು ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಟ್ಟು ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಈ ಗುಜರಾತ್ ಮಾದರಿಯನ್ನು ರಾಜ್ಯ ಬಿಜೆಪಿಯಲ್ಲೂ ಅನುಸರಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಅರುಣ್ ಸಿಂಗ್, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೇಂದ್ರೀಯ ಚುನಾವಣಾ ಸಮಿತಿ ನಿರ್ಧರಿಸಲಿದೆ. ನಮ್ಮ ಕಾರ್ಯಕರ್ತರಲ್ಲಿ ಗೆಲ್ಲುವ ವಿಶ್ವಾಸ ಮೂಡಿದೆ. ಜನರಲ್ಲೂ ಬಿಜೆಪಿ ಪರ ಒಲವು ಇದೆ, ಮತ್ತೆ ಬಿಜೆಪಿ ಗೆಲ್ಲಿಸಲು ಜನ ನಿರ್ಧರಿಸಿದ್ದಾರೆ ಎಂದರು.
ಇದನ್ನೂ ಓದಿ | JDS Pancharatna | ಸರ್ಕಾರಿ ವೈದ್ಯರಿಗೆ ಭಯ-ಭಕ್ತಿ ಇರಲಿ, ನೆಟ್ಟಗೆ ಕೆಲಸ ಮಾಡಲು ಆರೋಗ್ಯ ಸಚಿವರು ಸೂಚಿಸಬೇಕು: ಎಚ್‌ಡಿಕೆ