ಬೆಂಗಳೂರು: ನಾನು ರಾಮ ಮಂದಿರ (Rama Mandir) ಕರ ಸೇವಕನಾಗಿ (Ayodhya Karasevaka) ಹೋರಾಟದಲ್ಲಿ ಭಾಗಿಯಾಗಿದ್ದೆ. ನನ್ನ ಮೇಲೂ ಹಲವಾರು ಕ್ರಿಮಿನಲ್ ಕೇಸ್‌ಗಳಿವೆ. ಹಾಗಿದ್ದರೆ ನಾನು ಕೂಡಾ ಕ್ರಿಮಿನಲಾ? – ಹೀಗೆಂದು ಪ್ರಶ್ನೆ ಮಾಡಿದ್ದಾರೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ (MLA Sunil Kumar).
ಗುರುವಾರ ರಾಜ್ಯಾದ್ಯಂತ ಆರಂಭಗೊಂಡಿರುವ ʻʻನಾನೊಬ್ಬ ಕರಸೇವಕ ನನ್ನನ್ನೂ ಬಂಧಿಸಿʼ ಎಂಬ ಅಭಿಯಾನದಲ್ಲಿ ಭಾಗಿಯಾಗಿ (BJP Protest) ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆ ಎದುರು ಬೋರ್ಡ್ ಹಿಡಿದುಕೊಂಡು ಮೌನ ಪ್ರತಿಭಟನೆ ನಡೆಸಿದ ಅವರು ಬಳಿಕ ಮಾತನಾಡಿ, ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ರಾಜ್ಯಾದ್ಯಂತ ಮುಂದುವರಿಯಲಿದೆ ಎಂದು ಹೇಳಿದರು.
ʻʻಕರ ಸೇವೆಯಲ್ಲಿ ಭಾಗಿಯಾದವರು ಇವತ್ತಿಗೂ ಇದ್ದಾರೆ. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲೇ ಸರ್ಕಾರ ರಾಮ ಭಕ್ತರನ್ನು ಭಯಪಡಿಸುವ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಅವರು ರಾಮ ಭಕ್ತರನ್ನು ಕ್ರಿಮಿನಲ್‌ಗಳಿಗೆ ಹೋಲಿಕೆ ಮಾಡುತ್ತಿದ್ದಾರೆ.ʼʼ ಎಂದು ಆಪಾದಿಸಿದ ಅವರು, ʻʻನಾನು ರಾಮ ಮಂದಿರ ಕಾರ್ಯಾಚರಣೆಯಲ್ಲಿ ಕರ ಸೇವಕನಾಗಿ ಹೋರಾಟದಲ್ಲಿ ಭಾಗಿಯಾಗಿದ್ದೆ. ನನ್ನ ಮೇಲೂ ಹತ್ತಾರು ಕೇಸ್‌ಗಳಿವೆ. ಹಾಗಿದ್ದರೆ ನಾನು ಕೂಡಾ ಕ್ರಿಮಿನಲಾ? ಕ್ರಿಮಿನಲ್ ಆಗಿದ್ದರೆ ನನ್ನನ್ನೂ ಬಂಧಿಸಿʼʼ ಎಂದು ಅವರು ಸವಾಲು ಹಾಕಿದರು.
ʻʻಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡೋರು ಕಾಂಗ್ರೆಸ್ ಪಾಲಿಗೆ ಅಮಾಯಕರಂತೆ. ಆದರೆ, ರಾಮ ಭಕ್ತರು ಕ್ರಿಮಿನಲ್‌ಗಳಂತೆ. ರಾಜ್ಯದ ಹಿಂದೂಗಳ ಪಾಲಿಗೆ ಈ ಸರ್ಕಾರ ಸತ್ತು ಹೋಗಿರುವ ತರ ಕಾಣಿಸುತ್ತಿದೆ. ಕೇವಲ ಅಲ್ಪಸಂಖ್ಯಾತರನ್ನು ವೈಭವೀಕರಿಸುವುದರಲ್ಲಿ, ತುಷ್ಟೀಕರಣ ಮಾಡುವುದರಲ್ಲಿ ನಿರತವಾಗಿದೆʼʼ ಎಂದು ಹೇಳಿದ ಸುನಿಲ್ ಕುಮಾರ್ ಅವರು, ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ, ಮುಂದುವರಿಸುತ್ತೇವೆ ಎಂದರು.
ʻʻಸಿದ್ದರಾಮಯ್ಯ ಸರ್ಕಾರ ರಾಮ ವಿರೋಧಿ ಸರ್ಕಾರ. ಕರ ಸೇವಕರನ್ನು ಬಂಧಿಸಿ ಹಿಂದೂ ಕಾರ್ಯಕರ್ತರ ಬೆದರಿಸುವ ಕೆಲಸ ಮಾಡುತ್ತಿದೆ. ನಮ್ಮನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ. ನಾವು ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲʼʼ ಎಂದು ಹೇಳಿದರು.
ಈ ಅಭಿಯಾನ ಮುಂದುವರೆಯಲಿದೆ. ರಾಮಭಕ್ತರನ್ನು ಬೆದರಿಸುವ ಕಾರ್ಯವನ್ನು ಸರಕಾರ ಕೈಬಿಡಬೇಕು. ಮಂದಿರ ನಿರ್ಮಾಣ ಕಾರ್ಯದಲ್ಲಿ ಸರಕಾರವೂ ಸಹಕರಿಸಬೇಕು ಎಂದು ಆಗ್ರಹಿಸಿದರು. ನಾನು ಕೂಡ ಹತ್ತಾರು ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಹೋರಾಟದಲ್ಲಿ ಭಾಗವಹಿಸಿದಾಗ ಪೊಲೀಸರು ಕೇಸುಗಳನ್ನು ಹಾಕಿಯೇ ಹಾಕುತ್ತಾರೆ. ಹಾಗಿದ್ದರೆ ನಾನೂ ಕೂಡ ಕ್ರಿಮಿನಲ್ಲಾ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಮರುಪ್ರಶ್ನೆ ಹಾಕಿದರು.
ರಾಜಕಾರಣಿಗಳೆಲ್ಲರೂ ಒಂದಲ್ಲ ಒಂದು ಹೋರಾಟದಲ್ಲಿ ಪಾಲ್ಗೊಂಡವರು. ಕೇಸು ಹಾಕಿದ ತಕ್ಷಣ ಕ್ರಿಮಿನಲ್ ಎನ್ನುವುದಾದರೆ ಎಲ್ಲ ರಾಜಕಾರಣಿಗಳೂ ಕೂಡ ಕ್ರಿಮಿನಲ್ ಆಗುತ್ತಾರೆ. ನನ್ನ ಮೇಲೆ 27 ಕೇಸಿತ್ತು. ಹಾಗಿದ್ದರೆ ನಾನು ಕೂಡ ಕ್ರಿಮಿನಲ್ಲಾ ಎಂದು ಕೇಳಿದರು. ಇದನ್ನು ಇವತ್ತು ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ನಾನೂ ರಾಮ ಭಕ್ತ ನನ್ನನ್ನೂ ಬಂಧಿಸಿ: ಬಿಜೆಪಿ ಪೋಸ್ಟರ್
ಈ ನಡುವೆ ಬಿಜೆಪಿಯು ನಾನೂ ರಾಮ ಭಕ್ತ ನನ್ನನ್ನೂ ಬಂಧಿಸಿ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿರುವ ಈ ಪೋಸ್ಟರನ್ನು ಕಾರ್ಯಕರ್ತರು ಡಿಪಿಯಾಗಿ ಬಳಸುವಂತೆ ಬಿಜೆಪಿ ಮನವಿ ಮಾಡಿದೆ. ರಾಜ್ಯದ ನಾನಾ ಕಡೆಗಳಲ್ಲಿ ನಾನೂ ಕರಸೇವಕ ನನ್ನನ್ನೂ ಬಂಧಿಸಿ ಎಂಬ ಪ್ರತಿಭಟನೆ ನಡೆಯುತ್ತಿದೆ.