Site icon Vistara News

BJP Vs Congress : ಸಿದ್ದರಾಮಯ್ಯನವರೇ ಯಾವ Angleನಲ್ಲಿ ನೀವು ಸ್ಟ್ರಾಂಗ್‌ ಸಿಎಂ?

BJP Vs Congress Siddaramaiah

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election 2024) ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಸ್ಟ್ರಾಂಗ್‌ ಸಿಎಂ ಬಗ್ಗೆ ಜೋರಾಗಿ ಚರ್ಚೆ (BJP Vs Congress) ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಎತ್ತಿದ ʻರಾಜ್ಯದಲ್ಲಿ ಹಲವು ಸಿಎಂಗಳಿದ್ದಾರೆʼ ಎಂಬ ಮಾತಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿದಾಳಿ ನಡೆಸಿದ್ದರು. ಒಬ್ಬ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲಾಗದ ನೀವೇ ʻವೀಕ್‌ ಪಿಎಂʼ ಎಂದಿದ್ದರು. ನಾನೇ ಸ್ಟ್ರಾಂಗ್‌ ಸಿಎಂ (I am Strong CM) ಎಂದು ಹೇಳಿದ್ದರು ಸಿದ್ದರಾಮಯ್ಯ. ಇದೀಗ ಕರ್ನಾಟಕ ಬಿಜೆಪಿ (BJP Karnataka) ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದು, ಯಾವ ದೃಷ್ಟಿಕೋನದಿಂದ ನೀವು ಸ್ಟ್ರಾಂಗ್‌ ಸಿಎಂ ಎಂದು ಪ್ರಶ್ನಿಸಿದೆ.

ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ನಡೆಯುತ್ತಿರುವ ಯತ್ನ, ಶಾಸಕರೇ ಸಿಎಂ ಕುರ್ಚಿಯ ವ್ಯಾಲಿಡಿಟಿ ಬಗ್ಗೆ ಮಾತನಾಡುತ್ತಿರುವುದು, ಬಹಿರಂಗ ಪತ್ರ ಬರೆದಿರುವುದು, ಮಗನ ಸೂಪರ್‌ ಸಿಎಂ ಕತೆ ಎಲ್ಲವನ್ನೂ ಸೇರಿಸಿ ಕೆಲವು ಪ್ರಶ್ನೆಗಳು, ಕೆಣಕು ಮಾತುಗಳ ಮೂಲಕ ಬಿಜೆಪಿ ಸಿದ್ದರಾಮಯ್ಯ ಅವರ ಕಾಲೆಳೆದಿದೆ. ಅದರ ಜತೆಗೆ ಒಂದು ಚಿತ್ರವನ್ನು ಬಿಡಿಸಿ ಅದರಲ್ಲಿ ರಾಹುಲ್‌ ಗಾಂಧಿ ಸಿದ್ಧರಾಮಯ್ಯ ಅವರನ್ನು ಸೂತ್ರದ ಬೊಂಬೆಯಂತೆ ಆಡಿಸುತ್ತಿರುವುದು, ಮಗ ಯತೀಂದ್ರ ಸಿದ್ದರಾಮಯ್ಯ ಅವರು ಕುರ್ಚಿಯ ಕಾಲು ಹಿಡಿದುಕೊಂಡಿರುವುದನ್ನು ತೋರಿಸಲಾಗಿದೆ.

ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಕಾಲೆಳೆದ ಕರ್ನಾಟಕ ಬಿಜೆಪಿ

➡️ಸಿಎಂ @siddaramaiah ಅವರೇ, ನೀವು ಯಾವ ದೃಷ್ಟಿಕೋನದಿಂದ ಸ್ಟ್ರಾಂಗ್ ಸಿಎಂ..??

➡️ ಪ್ರಮಾಣವಚನ ಸ್ವೀಕರಿಸಿದ ತಿಂಗಳೊಳಗೆ ಶಾಸಕನಿಂದ ನಿಮ್ಮ ಆಡಳಿತದ ವಿರುದ್ಧ ಬಹಿರಂಗ ಪತ್ರ.

➡️ ಮುಖ್ಯಮಂತ್ರಿಯಾಗಿ ಎರಡು ತಿಂಗಳು ತುಂಬುವ ಮುನ್ನವೇ ನಿಮ್ಮ ಕುರ್ಚಿಯ ವ್ಯಾಲಿಡಿಟಿ ಕೇವಲ ಚುನಾವಣೆವರೆಗೂ ಮಾತ್ರ ಎಂಬುದು ನಿಮ್ಮ ಶಾಸಕರಿಂದಲೇ ಬಹಿರಂಗ.

➡️ ಬಿಡಿಗಾಸು ಅನುದಾನ ಬರುತ್ತಿಲ್ಲವೆಂದು ಶಾಸಕ-ಸಚಿವರುಗಳಿಂದ ಪ್ರತಿನಿತ್ಯ ನಿಮಗೆ ಬೈಗುಳದ ಮಂಗಳಾರತಿ.

➡️ ತಾನು ಹೇಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಲ್ಲವೆಂದು ನಿಮ್ಮ ಪುತ್ರ ರತ್ನನೇ ನಿಮಗೆ “ಹಲೋ ಅಪ್ಪಾ” ಎಂದು ಆವಾಜ್.

➡️ ಅಧಿಕಾರ ಸ್ವೀಕರಿಸಿ ಆರು ತಿಂಗಳು ತುಂಬುವ ಮುನ್ನವೇ 692 ರೈತರ ಆತ್ಮಹತ್ಯೆ.

➡️ ನಿಮ್ಮ ಅಮಾಯಕ ಬ್ರದರ್ಸ್‌ಗಳಿಂದ ಎಲ್ಲೆಂದರಲ್ಲಿ ಗಲಭೆ, ಬಾಂಬ್ ಬ್ಲಾಸ್ಟ್.

➡️ ಮಹಿಳೆಯರ ಮೇಲೆ ಹಾಡುಹಗಲೇ ಹಲ್ಲೆ, ಗ್ಯಾಂಗ್ ರೇಪ್.

➡️ ಅಧಿಕಾರಕ್ಕೆ ಬಂದು ಎಂಟು ತಿಂಗಳು ತುಂಬುವ ಒಳಗೆ ಕರ್ನಾಟಕಕ್ಕೆ ಅತಿ ಹೆಚ್ಚು ಸಾಲ ಮಾಡಿರುವ ರಾಜ್ಯ ಎಂಬ ಕಳಂಕ.

ಈಗ ಹೇಳಿ ಇಷ್ಟೆಲ್ಲಾ ಅಪಭ್ರಂಶಗಳ ನಡುವೆಯೂ ನಿಮ್ಮನ್ನು ನೀವು “ಸ್ಟ್ರಾಂಗ್ ಸಿಎಂ” ಎಂದು ಕರೆದುಕೊಂಡರೆ ಅದು ಸ್ವಕುಚಮರ್ಧನವೆ ಹೊರತು ಬೇರೇನೂ ಅಲ್ಲ! ಎಂದಿದೆ ಬಿಜೆಪಿ.

ನೀವು ವೀಕ್‌ ಪಿಎಂ, ನಾನು ಸ್ಟ್ರಾಂಗ್‌ ಸಿಎಂ ಎಂದಿದ್ದ ಸಿದ್ದರಾಮಯ್ಯ

ಶಿವಮೊಗ್ಗದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಎಷ್ಟು ಸಿಎಂಗಳಿದ್ದಾರೆ ಎಂದು ಪ್ರಶ್ನಿಸಿ, ಸಿಎಂ ಇನ್‌ ವೇಟಿಂಗ್‌, ಸೂಪರ್‌ ಸಿಎಂ, ಶ್ಯಾಡೋ ಸಿಎಂ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ (KS Eshwarappa) ವಿರುದ್ಧ ಕ್ರಮವಹಿಸದ ನೀವು ‘ವೀಕ್ ಪಿಎಂ’ ಎಂದು ಹೇಳಿದ್ದಾರೆ.

ಇದನ್ನೂ ಓದಿ : Modi in Shivamogga : ಕರ್ನಾಟಕದಲ್ಲಿ ಎಷ್ಟು ಸಿಎಂಗಳಿದ್ದಾರೆ ಗೊತ್ತಾ? ಇದು ಮೋದಿ ಲೆಕ್ಕ!

ಮೋದಿಗೆ ಸಿದ್ದರಾಮಯ್ಯ ಕೇಳಿದ ʻವೀಕ್‌ʼ ಪ್ರಶ್ನೆಗಳು

“ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರೇ, ಕಾಂಗ್ರೆಸ್ ಪಕ್ಷದಲ್ಲಿ ಸೂಪರ್ ಸಿಎಂ (Super CM), ಶ್ಯಾಡೋ ಸಿಎಂಗಳಿದ್ದಾರೆ (Shadow CM) ಎಂದು ಶಿವಮೊಗ್ಗದ ನಿಮ್ಮ ಪಕ್ಷದ ಸಭೆಯಲ್ಲಿ ನೀವು ಗೇಲಿ ಮಾಡಿದ್ದೀರಿ! ನಮ್ಮಲ್ಲಿ ಸೂಪರ್ ಇಲ್ಲ, ಶ್ಯಾಡೋನೂ ಇಲ್ಲ, ಇರುವುದು ಒಬ್ಬರೇ ಸಿಎಂ ಅದು ‘‘ಸ್ಟ್ರಾಂಗ್ ಸಿಎಂ’’, ನಿಮ್ಮ ಹಾಗೆ ನಾನು ‘‘ವೀಕ್ ಪಿಎಂ’’ ಅಲ್ಲ.

ಮೋದಿಯವರೇ ನಿಮ್ಮನ್ನು ನೀವು 56 ಇಂಚಿನ ಎದೆಯುಳ್ಳವನು ಎಂದು ಬಣ್ಣಿಸಿಕೊಳ್ಳುತ್ತೀರಿ, ನಿಮ್ಮ ಅಭಿಮಾನಿಗಳು ನಿಮ್ಮನ್ನು ವಿಶ್ವಗುರು ಎಂದು ಕೊಂಡಾಡುತ್ತಾರೆ. ಆದರೆ ನೀವೊಬ್ಬ ‘‘ವೀಕ್ ಪಿಎಂ’’ ಎಂದು ಮತ್ತೆ ಮತ್ತೆ ತೋರಿಸಿಕೊಡುತ್ತಿದ್ದೀರಿ.‌

ಬಿ.ಎಸ್. ಯಡಿಯೂರಪ್ಪನವರು (BS Yediyurappa) ಒಂದು ಕಾಲದಲ್ಲಿ ನಿಮ್ಮ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದವರು, ನಿಮ್ಮನ್ನು ಹೀನಾಯವಾಗಿ ನಿಂದಿಸಿದವರು. ಅಂತಹವರ ಕಾಲಿಗೆ ಬಿದ್ದು ಮತ್ತೆ ಪಕ್ಷಕ್ಕೆ ಕರೆತಂದು ಮೆರವಣಿಗೆ ಮಾಡುವ ಮೂಲಕ ನೀವೊಬ್ಬ ‘‘ವೀಕ್ ಪಿಎಂ’’ ಎಂದು ನೀವೇ ತೋರಿಸಿಕೊಟ್ಟಂತಾಗಲಿಲ್ಲವೇ?

ಕರ್ನಾಟಕದಲ್ಲಿ ನಿಮ್ಮ ನಾಯಕತ್ವದ ವಿರುದ್ಧ ಅರ್ಧ ಡಜನ್ ನಾಯಕರು ಬಂಡೆದಿದ್ದಾರೆ. ಟಿಕೆಟ್ ಪಡೆಯಲು ಅಸಮರ್ಥರಾದ ನಿಮ್ಮ ಪಕ್ಷದ ನಾಯಕರು ಹಾದಿ ಬೀದೀಲಿ ಹೊಡೆದಾಡಿಕೊಳ್ಳುತ್ತಿದ್ದಾರೆ, ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ. ನಿಮ್ಮ ಯಾವ ಮನವಿಗೂ ಅವರು ಕಿವಿಕೊಟ್ಟಿಲ್ಲ. ಇವರಲ್ಲಿ ಕೆಲವರು ನಮ್ಮನ್ನೂ ಸಂಪರ್ಕಿಸುತ್ತಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಇದೆಂತಹ ಅಶಿಸ್ತಿನ ತಾಂಡವ. ಇದಕ್ಕೆಲ್ಲ ಕಾರಣ ನೀವೊಬ್ಬ ‘‘ವೀಕ್ ಪಿಎಂ’’ ಆಗಿರುವುದಲ್ಲವೇ?

ಶಿವಮೊಗ್ಗದಲ್ಲಿ ನೀವು ಪಕ್ಷದ ಪ್ರಚಾರ ಸಭೆ ನಡೆಸುತ್ತಿದ್ದಾಗ ಬಂಡುಕೋರ ನಾಯಕ ಈಶ್ವರಪ್ಪನವರು ಕೂಗಳತೆ ದೂರದ ತಮ್ಮ ಮನೆಯಲ್ಲಿದ್ದರೂ ಕ್ಯಾರೇ ಅನ್ನದೆ ಸಭೆಗೆ ಗೈರು ಹಾಜರಾಗಿದ್ದರು. ಇಷ್ಟು ಮಾತ್ರವಲ್ಲ ನಿರಂತರವಾಗಿ ಬಿಜೆಪಿ ನಾಯಕತ್ವದ ವಿರುದ್ಧ ಕಿಡಿಕಾರುತ್ತಿದ್ದರು. ಅವರ ವಿರುದ್ಧ ಕ್ರಮಕೈಗೊಳ್ಳಲಾಗದ ನೀವು ‘‘ವೀಕ್ ಪಿಎಂ’’ ಅಲ್ಲದೆ ಮತ್ತೇನು?

Exit mobile version