Site icon Vistara News

BMTC Bus: ಮದುವೆ, ಟೂರ್‌ಗೆ ಸಿಗಲಿದೆ ಬಿಎಂಟಿಸಿ ಬಸ್; ಯಾವ ಬಸ್‌ಗೆ ಎಷ್ಟು ಬಾಡಿಗೆ?

BMTC Bus

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್​ಗಳು (BMTC Bus) ಇನ್ನು ಮುಂದೆ ನಿಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಬಾಡಿಗೆಗೆ ದೊರೆಯುತ್ತವೆ. ಇದುವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು (KSRTC Bus) ಬಾಡಿಗೆಗೆ ಪಡೆಯುವ ಅವಕಾಶವಿತ್ತು. ಆದರೆ, ಈಗ ಬಿಎಂಟಿಸಿಯಲ್ಲಿಯೂ ಈ ವ್ಯವಸ್ಥೆಯನ್ನು ನೀಡಲಾಗುತ್ತಿದೆ. ಶೈಕ್ಷಣಿಕ ಪ್ರವಾಸ, ಧಾರ್ಮಿಕ ಅಥವಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು, ಮದುವೆ ಸಮಾರಂಭ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳಿಗಾಗಿ ಬಾಡಿಗೆಗೆ ಪಡೆಯಬಹುದಾಗಿದೆ.

ಸಾಂದರ್ಭಿಕ ಒಪ್ಪಂದದ ಆಧಾರದ ಮೇಲೆ ವಿವಿಧ ಮಾದರಿಯ ಬಸ್​ಗಳನ್ನು ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲಾಗಿದೆ. ಇಲ್ಲಿ ಬಾಡಿಗೆ ಪಡೆಯುವ ಬಸ್‌ನ ಆಧಾರದ ಮೇಲೆ ದರವನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಬಿಎಂಟಿಸಿಯು ದರದ ವಿವರವನ್ನು ಸಹ ಬಿಡುಗಡೆ ಮಾಡಿದೆ.

ಯಾವ ಬಸ್‌ಗಳು ಬಾಡಿಗೆಗೆ ಲಭ್ಯ? ಏನಿದರ ದರ?

ಪುಷ್ಪಕ್‌ ಬಸ್‌: ಬಿಎಂಟಿಸಿ ಪುಷ್ಪಕ್ ಬಸ್ ಒಟ್ಟು 47 ಆಸನಗಳನ್ನು ಹೊಂದಿದೆ. ಈ ಬಸ್‌ 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀ. ವರೆಗೆ ಸಂಚರಿಸಲಿದೆ. ಪ್ರತಿ ಕಿ.ಮೀಗೆ 55 ರೂಪಾಯಿಯಂತೆ 8 ಗಂಟೆಯ ಬಾಡಿಗೆ ದರ 8,250 ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಅದೇ 12 ಗಂಟೆ ಅವಧಿಗೆ ಈ ಪುಷ್ಪಕ್ ಬಸ್ ಅನ್ನು ಬಾಡಿಗೆ ಪಡೆದರೆ ಪ್ರತಿ ಕಿಲೋ ಮೀಟರ್‌ಗೆ 50 ರೂಪಾಯಿಯಂತೆ 10,000 ರೂಪಾಯಿ ಬಾಡಿಗೆಯನ್ನು ನೀಡಬೇಕು. ಈ ಅವಧಿಗೆ ಪುಷ್ಪಕ್‌ ಬಸ್‌ ಕನಿಷ್ಠ 200 ಕಿಲೋ ಮೀಟರ್‌ ಸಂಚರಿಸಲಿದೆ.

ಅದೇ 24 ಗಂಟೆ ಅವಧಿಗೆ ಬೇಕಿದ್ದರೂ ಬಿಎಂಟಿಸಿ ಆಚರಣಾ ವ್ಯಾಪ್ತಿಯಲ್ಲಿ ಬಾಡಿಗೆಗೆ ಲಭ್ಯವಿದೆ. ಇದು ಕನಿಷ್ಠ 250 ಕಿ.ಮೀ ಸಂಚರಿಸಲಿದ್ದು, ಪ್ರತಿ ಕಿ.ಮೀ ದರ 45 ರೂಪಾಯಿಯಂತೆ 11,250 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ. 24 ಗಂಟೆ ಅವಧಿಗೆ ಹೊರ ನಗರಗಳಿಗೆ ಕನಿಷ್ಠ 300 ಕಿ.ಮೀ ವರೆಗೆ ಪ್ರತಿ ಕಿ.ಮೀ ದರ 45 ರೂಪಾಯಿಯಂತೆ 13,500 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ.

ಬಿ.ಎಸ್- 6 ಬಸ್: 41 ಆಸನಗಳಿರುವ ಬಿಎಂಟಿಸಿ ಬಿ.ಎಸ್- 6 ಬಸ್‌ 8 ಗಂಟೆ ಅವಧಿಗೆ ಕನಿಷ್ಠ 150 ಕಿಲೋ ಮೀಟರ್‌ ಸಂಚರಿಸಲಿದೆ. ಪ್ರತಿ ಕಿ.ಮೀಗೆ 60 ರೂಪಾಯಿಯಂತೆ 9,000 ರೂಪಾಯಿ ನಿಗದಿ ಮಾಡಲಾಗಿದೆ. 12 ಗಂಟೆ ಅವಧಿಗೆ ಕನಿಷ್ಠ 200 ಕಿ.ಮೀ ಸಂಚರಿಸಲಿದ್ದು, ಪ್ರತಿ ಕಿ.ಮೀ ದ 55 ರೂಪಾಯಿಯಂತೆ 11,000 ರೂಪಾಯಿ ನಿಗದಿ ಮಾಡಲಾಗಿದೆ.

ಅದೇ 24 ಗಂಟೆ ಅವಧಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಚರಣಾ ವ್ಯಾಪ್ತಿಯಲ್ಲು ಕನಿಷ್ಠ 250 ಕಿ.ಮೀ.ವರೆಗೆ ಸಂಚಾರ ಮಾಡಲಿದೆ. ಇದಕ್ಕೆ ಪ್ರತಿ ಕಿ.ಮೀ ದರವನ್ನು 50 ರೂಪಾಯಿಯಂತೆ ನಿಗದಿ ಮಾಡಲಾಗಿದ್ದು, ಒಟ್ಟು 12,500 ರೂಪಾಯಿ ನಿಗದಿ ಮಾಡಲಾಗಿದೆ.ನಗರದ ಹೊರಗೆ ಸಂಚಾರ ಮಾಡಬೇಕಿದ್ದರೆ 24 ಗಂಟೆ ಅವಧಿಗೆ ಕನಿಷ್ಠ 300 ಕಿ.ಮೀನಲ್ಲಿ ಪ್ರತಿ ಕಿ.ಮೀ ದರ 50 ರೂಪಾಯಿಯಂತೆ 15,000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ.

ಎಲೆಕ್ಟ್ರಿಕ್ ಬಸ್‌ಗಳು: 40 ಆಸನಗಳಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು 25 ಗಂಟೆ ಅವಧಿಗೆ 150 ಕಿ.ಮೀವರೆಗೆ 15,000 ರೂಪಾಯಿ ಬಾಡಿಗೆ ದರ ನಿಗದಿ ಮಾಡಲಾಗಿದೆ. 33 ಆಸನಗಳಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು 120 ಕಿ.ಮೀವರೆಗೆ 13,000 ರೂಪಾಯಿ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: Coronavirus News: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ ಕೊರೊನಾ; ಕಾರ್ಯಕ್ರಮ ಕ್ಯಾನ್ಸಲ್

ಹವಾನಿಯಂತ್ರಿತ ಬಸ್:‌ ಎಸಿ ಬಸ್​ಗಳಿಗೆ 12 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 80 ರೂಪಾಯಿಯಂತೆ 14,000 ರೂ, 24 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 80 ರೂಪಾಯಿಯಂತೆ 20 ಸಾವಿರ ಬಾಡಿಗೆ ನಿಗದಿ ಮಾಡಲಾಗಿದೆ.

Exit mobile version