Site icon Vistara News

ಪೆಟ್ರೋಲ್‌ ಬಂಕ್‌ಗಳ ಮುಂದೆ ಬಿಎಂಟಿಸಿ ಬಸ್‌ಗಳ ಸರತಿ: ನಷ್ಟ ತಪ್ಪಿಸಲು ಉಪಾಯ

Demand for implementation of 6th Pay Commission Transport employees call for protest from March 1

Demand for implementation of 6th Pay Commission Transport employees call for protest from March 1

ಬೆಂಗಳೂರು: ಬೆಂಗಳೂರಿಗರ ಜೀವನಾಡಿ ಆಗಿರುವ ಬಿಎಂಟಿಸಿ ಬಸ್‌ ಅಕ್ಷರಶಃ ಮುಳುಗುವ ಹಡಗಿನಂತೆ ಆಗಿದೆ. ನಷ್ಟದಿಂದ ಹೊರ ಬರಲೂ ಆಗದೇ, ಲಾಭದತ್ತ ಸಾಗಲೂ ಆಗದೇ ಸಂಕಷ್ಟವನ್ನು ಎದುರಿಸುತ್ತಿದೆ. ಕೋವಿಡ್‌ ಸಮಯದಲ್ಲಿ ಉಂಟಾದ ಮತ್ತಷ್ಟು ನಷ್ಟವನ್ನು ಭರಿಸಿಕೊಳ್ಳಲು ಸಂಸ್ಥೆ ಹೆಣಗಾಡುತ್ತಿದೆ. ನಷ್ಟವನ್ನು ಸ್ವಲ್ಪಮಟ್ಟಿಗಾದರೂ ತಗ್ಗಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಹೊಸ ಉಪಾಯ ಕಂಡುಕೊಂಡಿದ್ದು, ಡೀಸೆಲ್‌ಗಾಗಿ ಬಿಎಂಟಿಸಿ ಬಸ್‌ಗಳು ಖಾಸಗಿ ಪೆಟ್ರೋಲ್‌ ಬಂಕ್‌ ಕಡೆ ಮುಖ ಮಾಡಿವೆ.

ಇದನ್ನೂ ಓದಿ | ಮಂಗಳೂರು ಬಜ್ಪೆ ಏರ್‌ಪೋರ್ಟ್‌ಗೆ ಬಿಎಂಟಿಸಿ ಮಾದರಿ ಬಸ್‌ ಸೌಕರ್ಯ

ಸಾಮಾನ್ಯವಾಗಿ ಖಾಸಗಿ ಪೆಟ್ರೋಲ್‌ ಬಂಕ್‌ಗಳಲ್ಲಿ ಸರ್ಕಾರಿ ಸ್ವಾಮ್ಯದ ಬಿಎಂಟಿಸಿ ಬಸ್‌ಗಳು ಕಾಣುವುದಿಲ್ಲ. ಏಕೆಂದರೆ ತನ್ನೆಲ್ಲ ಬಸ್ಸುಗಳಿಗೆ ಬಿಎಂಟಿಸಿಯು ತೈಲ ಉತ್ಪಾದನಾ ಕಂಪನಿಗಳಿಂದ ನೇರವಾಗಿ ಇಂಧನ ಖರೀದಿಸುತ್ತದೆ. ತನ್ನದೇ ಡಿಪೋಗಳಲ್ಲಿ ಬಂಕ್‌ಗಳನ್ನು ಸ್ಥಾಪಿಸಿ ಅಲ್ಲಿಂದಲೇ ಭರ್ತಿ ಮಾಡಲಾಗುತ್ತದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇಂಧನ ದರ ಹೆಚ್ಚಿರುತ್ತದೆ, ಸಗಟು ದರದಲ್ಲಿ ನೇರವಾಗಿ ಖರೀದಿ ಮಾಡುವುದರಿಂದ ಕಡಿಮೆ ದರಕ್ಕೆ ಡೀಸೆಲ್‌ ದೊರಕುತ್ತದೆ ಎನ್ನುವುದು ಒಂದು ಕಾರಣವಾದರೆ, ಡೀಸೆಲ್‌ ಖರೀದಿಯಲ್ಲಿ ಪಾರದರ್ಶಕತೆ ಇರಲಿ ಎನ್ನುವುದು ಮತ್ತೊಂದು ಕಾರಣ. ಆದರೆ ಇದೀಗ ಪರಿಸ್ಥಿತಿ ತಲೆಕೆಳಕಾಗಿದೆ. ಚಿಲ್ಲರೆ ಮಾರುಕಟ್ಟೆಗಿಂತಲೂ ಸಗಟು ಖರೀದಿ ದರದಲ್ಲಿಯೇ ಹೆಚ್ಚಳವಾಗಿದೆ. ಈ ಕಾರಣಕ್ಕಾಗಿ ಖಾಸಗಿ ಪೆಟ್ರೋಲ್‌ ಬಂಕ್‌ಗಳಲ್ಲೇ ಡೀಸೆಲ್‌ ಭರ್ತಿ ಮಾಡಿಸಿಕೊಳ್ಳಲು ಬಿಎಂಟಿಸಿ ಬಸ್‌ಗಳು ಮುಂದಾಗಿವೆ.

ಬಿಎಂಟಿಸಿ ಬಂಕ್‌ಗಳಲ್ಲಿ ಇಂಧನ ಪೂರೈಕೆ ಆಗದ ಕಾರಣಕ್ಕೆ, ಬಿಎಂಟಿಸಿಯಲ್ಲಿ ಇಂಧನ ಖಾಲಿಯಾಗಿದೆ ಎಂಬ ಸುದ್ದಿ ಭಾನುವಾರ ಸಂಜೆಯಿಂದಲೇ ಹರಿದಾಡಿತ್ತು. ಇದಕ್ಕೆ ಪುಷ್ಠಿ ನೀಡುವಂತೆ, ಬಿಎಂಟಿಸಿ ಬಸ್‌ಗಳು ಖಾಸಗಿ ಬಂಕ್‌ಗಳ ಮುಂದೆ ನಿಂತಿರುವ ದೃಶ್ಯ ಕಂಡು ಬಂದಿತ್ತು. ಈ ವಿಚಾರ ಚರ್ಚೆಯಾಗುತ್ತಿರುವಂತೆಯೇ ಎಚ್ಚೆತ್ತ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಎಂಡಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತ್ಯವತಿ, ನಿಗಮಕ್ಕೆ ಇಂಧನವನ್ನು ಟೆಂಡರ್ ಮೂಲಕ ಬಲ್ಕ್ ರೂಪದಲ್ಲಿ ಪಡೆಯುತ್ತಿದ್ದೇವೆ. ಬಲ್ಕ್‌ನಲ್ಲಿ ಲೀಟರ್‌ಗೆ 119 ರೂ. ತಗಲುತ್ತಿದೆ. ಆದರೆ ಹೊರಗಿನ ಪೆಟ್ರೋಲ್‌ ಬಂಕ್‌ಗಳಲ್ಲಿ 86 ರಿಂದ 89 ರೂ. ಇದೆ. ಇದರ ಹೋಲಿಕೆಯಲ್ಲಿ ನಿಮಗಕ್ಕೆ ಪ್ರತಿ ಲೀಟರ್‌ ಮೇಲೆ 30 ರೂ. ನಷ್ಟ ಉಂಟಾಗುತ್ತಿದೆ. ಹೀಗಾಗಿ ಬಿಎಂಟಿಸಿ ಬಸ್‌ಗಳು ಖಾಸಗಿ ಬಂಕ್‌ಗಳಲ್ಲಿ ಇಂಧನ ಭರ್ತಿ ಮಾಡಿಸಿಕೊಳ್ಳುತ್ತಿವೆ. ಇದರಿಂದ ಪ್ರತಿ ತಿಂಗಳು 50-60 ಲಕ್ಷ ರೂ. ಉಳಿತಾಯವಾಗಲಿದೆ ಎಂದಿದ್ದಾರೆ.

ನಿಗಮದಲ್ಲಿ ಇಂಧನ ಕೊರತೆ ಇದೆಯೇ ಎಂಬ ಕುರಿತು ಪ್ರತಿಕ್ರಿಯಿಸಿದ ಸತ್ಯವತಿ, ಒಂದು ದಿನಕ್ಕೆ 2 ಲಕ್ಷದ 40 ಸಾವಿರ ಲೀಟರ್ ಇಂಧನದ ಅಗತ್ಯವಿದೆ. ಸದ್ಯ ಐದಾರು ದಿನಗಳಿಗೆ ಆಗುವಷ್ಟು ಇಂಧನ ಸ್ಟಾಕ್ ಇದೆ. ಸದ್ಯಕ್ಕಂತೂ ಬಸ್ ಸಂಚಾರದಲ್ಲಿ ವ್ಯತ್ಯಯವಿಲ್ಲ. ಬಸ್ ಅವಲಂಬಿಸಿರುವ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದರು.

ಕೇಂದ್ರಕ್ಕೆ ಪತ್ರ ಬರೆದ ಬಿಎಂಟಿಸಿ

ಡೀಸೆಲ್ ಸಮಸ್ಯೆ ಬಗ್ಗೆ ಈಗಾಗಲೇ ಪೆಟ್ರೋಲಿಯಂ‌ ಸಚಿವರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿರುವ ಸತ್ಯವತಿ, ನಿಗಮದ ನಷ್ಟವನ್ನು ಕಡಿಮೆ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಎಚ್‌ಪಿಸಿ ಕಂಪನಿಗೆ ಮಾರ್ಚ್ ತಿಂಗಳ 75 ಕೋಟಿ ರೂ. ಬಾಕಿ ನೀಡಬೇಕಿದೆ. ನಿಗಮಕ್ಕೆ 746 ಕೋಟಿ ರೂ. ಸಾಲ ಇದೆ. ಕೊರೊನಾ ಸಮಯದಲ್ಲಿ ಸಾಕಷ್ಟು ಸಮಸ್ಯೆ ಆಗಿತ್ತು ಎಂದು ಹೇಳಿದರು.

ಇದನ್ನೂ ಓದಿ | ಶಾಲಾ-ಕಾಲೇಜು ಆಯ್ತು ಇದೀಗ ಬಿಎಂಟಿಸಿಗೂ ಬಂತು ಧರ್ಮ ದಂಗಲ್

Exit mobile version