ಬೆಂಗಳೂರು: ನಗರದ ಶಾಲೆಗಳಿಗೆ ಬರುತ್ತಿದ್ದ ಬಾಂಬ್ ಬೆದರಿಕೆ ಇ-ಮೇಲ್ (Fake E-mail) ಇದೀಗ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೂ (Visvesvaraya Museum) ಬಂದಿದೆ. ಮ್ಯೂಸಿಯಂನಲ್ಲಿ ಬಾಂಬ್ (Bomb Threat) ಇಡಲಾಗಿದೆ. ಈಗಾಗಲೇ ಹಲವು ಸ್ಫೋಟಕಗಳನ್ನು ಮ್ಯೂಸಿಯಂ ಸುತ್ತಮುತ್ತ ಬಚ್ಚಿಡಲಾಗಿದೆ. ಬೆಳಗ್ಗೆ ಎಲ್ಲವನ್ನೂ ಒಮ್ಮೆಲೆ ಸ್ಫೋಟಿಸಲಾಗುತ್ತದೆ ಎಂಬ ಬೆದರಿಕೆ ಸಂದೇಶ ರವಾನೆ ಆಗಿದೆ.
Morgue999lol ಎಂಬ ಇ-ಮೇಲ್ ಐಡಿ ಮೂಲಕ ಮ್ಯೂಸಿಯಂನ ಆಡಳಿತ ಮಂಡಳಿಗೆ ಬಂದಿದೆ. ಉಗ್ರ ಸಂಘಟನೆಯೊಂದರ ಹೆಸರು ಉಲ್ಲೇಖಿಸಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. Terrorizers 111 ಎಂಬ ಉಗ್ರ ಸಂಘಟನೆಯ ಹೆಸರು ಉಲ್ಲೇಖಿಸಿದ್ದಾರೆ. ಇದರಿಂದ ಭೀತಿಗೊಂಡ ಮ್ಯೂಸಿಯಂ ಆಡಳಿತ ಮಂಡಳಿ ಕೂಡಲೇ ಪಕ್ಕದಲ್ಲಿರುವ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮ್ಯೂಸಿಯಂಗೆ ಡಾಗ್ ಸ್ಕ್ವಾಡ್ ಸಮೇತ ಭೇಟಿ ನೀಡಿರುವ ಪೊಲೀಸರ ತಂಡ ಪರಿಶೀಲನೆ ನಡೆಸಿದೆ. ಪರಿಶೀಲನೆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂದಿದೆ. ಹುಸಿ ಬಾಂಬ್ ಇ- ಮೇಲ್ ಬೆದರಿಕೆ ಕೇಸ್ ಇದಾಗಿದ್ದು, ಸಾಕಷ್ಟು ಮ್ಯೂಸಿಯಂಗಳಿಗೂ ಸಿಸಿ ಮಾಡಿ ಬೆದರಿಕೆ ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ನಮ್ಮ ಟೆರರಿಸ್ಟ್ ಗ್ರೂಪ್ ಹೆಸರನ್ನು ಮಾಧ್ಯಮದವರಿಗೆ ನೀಡಿ, ಇಲ್ಲವಾದಲ್ಲಿ ಇನ್ನು ಬೇರೆ ರೀತಿಯ ಅನಾಹುತಗಳು ನಡೆಯಲಿದೆ ಎಂದು ಬೆದರಿಕೆಯನ್ನು ಹಾಕಿದ್ದಾರೆ.
ಸದ್ಯ ಇ-ಮೇಲ್ ಐಡಿ ಹಿಂದೆ ಬಿದ್ದಿರುವ ಪೊಲೀಸರು, ಹುಸಿ ಬಾಂಬ್ ಸಂದೇಶ ರವಾನಿಸಿರುವ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ರಾಜಭವನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿ ಆಂಧ್ರದಲ್ಲಿ ಬಂಧನ
ಈ ಹಿಂದೆ ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಇಂಟರ್ನೆಟ್ನಲ್ಲಿ ರಾಜಭವನ ನಂಬರ್ ಸರ್ಚ್ ಮಾಡಿ ಬೆದರಿಕೆ ಕರೆ ಮಾಡಿದ್ದ ಆರೋಪಿಯು, ಆಂಧ್ರದ ಚಿತ್ತೂರಿನಲ್ಲಿ ಪೊಲೀಸರಿಗೆ ಸಿಕ್ಕಿದ್ದ.
ಕೋಲಾರ ಮೂಲದ ಬಾಸ್ಕರ್ ಬಂಧಿತ ಆರೋಪಿ. ವೃತ್ತಿಯಲ್ಲಿ ರೈತನಾಗಿರುವ ಭಾಸ್ಕರ್ ಸೋಮವಾರ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ. ನಂತರ ವಾಪಸ್ಸು ಕೋಲಾರಕ್ಕೆ ತೆರಳುವ ವೇಳೆ ರಾಜಭವನಕ್ಕೆ ಹುಸಿ ಬಾಂಬ್ ಬೆದರಿಕೆ ಮಾಡಿದ್ದ. ಘಟನೆ ಸಂಬಂಧ ವಿಧಾನ ಸೌಧ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಗೂಗಲ್ ಮುಖಾಂತರ ರಾಜಭವನ ನಂಬರ್ ತೆಗೆದುಕೊಂಡಿದ್ದ ಭಾಸ್ಕರ್, ನಂತರ ಕರೆ ಮಾಡಿ ಮೆಜೆಸ್ಟಿಕ್ ತಲುಪಿದ್ದ. ಅಲ್ಲಿಂದ ಆಂಧ್ರದ ಕಾಣಿಪಾಕಂ ದೇವಾಲಯ ತಲುಪಿದ್ದ. ಲೊಕೇಶನ್ ಆಧರಿಸಿ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆಂಧ್ರದ ಚಿತ್ತೂರಿನಲ್ಲಿ ಆತನನ್ನು ಬಂಧಿಸಿದ್ದರು.
ಬೆದರಿಕೆ ಕರೆ ಮಾಡಿದ ನಂತರ ಅಲರ್ಟ್ ಆಗಿದ್ದ ವಿಧಾನ ಸೌಧ ಪೊಲೀಸರು ಒಂದು ತಂಡ ರಚಿಸಿ ಆರೋಪಿಯ ಬೆನ್ನು ಬಿದ್ದಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಕೆಡಿಸಿಕೊಂಡಿದ್ದ ಕೇಂದ್ರ ಸೆಕ್ಯೂರಿಟಿ ಏಜನ್ಸಿಗಳು, ವಿಧಾನ ಸೌಧ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದವು. ಕೊನೆಗೂ ಆರೋಪಿಯನ್ನು ಬಂಧಿಸಿ ಕೇಂದ್ರದ ತನಿಖಾ ಸಂಸ್ಥೆಗಳಿಗೆ ಪೊಲೀಸರು ಮಾಹಿತಿ ನೀಡಿದ್ದರು.
ತನಿಖೆಯಲ್ಲಿ ಮನಸ್ಸಿಗೆ ತೋಚಿದಕ್ಕೆ ಕರೆ ಮಾಡಿದ್ದೇನೆ ಎಂದು ಆರೋಪಿ ಹೇಳಿದ್ದಾನೆ. ಬಿ.ಕಾಂ ವ್ಯಾಸಂಗ ಮಾಡಿ ರೈತನಾಗಿದ್ದ ಭಾಸ್ಕರ್, ಸೋಮವಾರ ಹೊಸ ಸಿಮ್ ಖರೀದಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಬೆದರಿಕೆ ಕರೆ ಮಾಡಲೆಂದೇ ಹೊಸ ಸಿಮ್ ಖರೀದಿ ಮಾಡಿದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.