ಬೆಂಗಳೂರು: ಸಾವಣ್ಣ ಪ್ರಕಾಶನ ಪ್ರಕಟಿಸಿರುವ ರಂಗಸ್ವಾಮಿ ಮೂಕನಹಳ್ಳಿ ಅವರ “ಸಿರಿವಂತಿಕೆಗೆ ಸರಳ ಸೂತ್ರಗಳುʼ ಸೇರಿದಂತೆ 5 ಕೃತಿಗಳು (Book Release) ಬೆಂಗಳೂರಿನಲ್ಲಿ ಭಾನುವಾರ ಅರ್ಥಪೂರ್ಣ ಸಂವಾದದೊಂದಿಗೆ ಬಿಡುಗಡೆಯಾದವು.
ರಂಗಸ್ವಾಮಿ ಮೂಕನಹಳ್ಳಿ ಅವರ ʼಸಿರಿವಂತಿಕೆಗೆ ಸರಳ ಸೂತ್ರಗಳುʼ, ಡಾ. ನಾ. ಸೋಮೇಶ್ವರ ಅವರ “ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು?ʼ, ಜಗದೀಶ ಶರ್ಮಾ ಸಂಪ ಅವರ “ಮಹಾಭಾರತ ಅನ್ವೇಷಣೆʼ ಮತ್ತು ಸತೀಶ್ ವೆಂಕಟಸುಬ್ಬು ಅವರ “ಸೈಬರ್ ಕ್ರೈಂ ತಡೆಗಟ್ಟುವುದು ಹೇಗೆ? (ಕನ್ನಡ ಮತ್ತು ಇಂಗ್ಲಿಷ್) ಬಿಡುಗಡೆಗೊಂಡ ಕೃತಿಗಳು.
ಈ ಕಾರ್ಯಕ್ರಮದಲ್ಲಿ ಲೇಖಕರೊಡನೆ ವಿಶೇಷ ಸಂವಾದವನ್ನು ಏಮ್ ಹೈ ಕನ್ಸಲ್ಟಿಂಗ್ ಸಿಇಒ, ಅಂಕಣಕಾರರು, ಸ್ಟಾರ್ಟಪ್ ಮಾರ್ಗದರ್ಶಕರಾದ ಎನ್. ರವಿಶಂಕರ್ ಅವರು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಎನ್. ರವಿಶಂಕರ್ ಅವರು ನಾಲ್ಕೂ ಪುಸ್ತಕಗಳ ಹೂರಣವನ್ನು ಒಂದಕ್ಕೊಂದು ಬೆಸೆದು, “ಬೇಕು ಮತ್ತು ಸಾಕುʼ ಎಂಬ ಚೌಕಟ್ಟಿನಲ್ಲಿ ಸಂವಾದವನ್ನು ಕುತೂಹಲ ಹುಟ್ಟಿಸುತ್ತ ಮುನ್ನಡೆಸಿದ್ದು ಬೆರಗು ಮೂಡಿಸಿತು. ಈ ಸಂವಾದದಲ್ಲಿ ಲೇಖಕರು ವ್ಯಕ್ತಪಡಿಸಿದ ಅಭಿಮತದ ಸಾರ ಇಲ್ಲಿದೆ.
ರಂಗಸ್ವಾಮಿ ಮೂಕನಹಳ್ಳಿ
- – ಒಂದು ಹಂತದ ನಂತರ ಏನೇ ಸಂಪಾದಿಸಿದರೂ ಅದು ಕೇವಲ ಸಂಖ್ಯೆಯಷ್ಟೇ ಆಗುತ್ತದೆ. ಸಾಕು ಎನ್ನುವುದೇ ಸಿರಿವಂತಿಕೆ, ಬೇಕು ಎನ್ನುವುದೇ ಬಡತನ ಎಂಬ ಸತ್ಯ ನಮಗೆ ತಿಳಿದಿರಬೇಕು. ಎಲ್ಲದಕ್ಕೂ ಒಂದು ಮಿತಿ ಎನ್ನುವುದು ಇರಬೇಕು.
- – ಯಶಸ್ಸಿನ ಸರಳ ಸೂತ್ರಗಳನ್ನು ಕೇವಲ ಓದಿದರೆ ಸಾಲದು. ಅವುಗಳನ್ನು ಪಾಲಿಸಿದರೆ, ಜಾರಿಗೆ ತಂದರೆ ಸಿರಿವಂತಿಕೆ ಕನಸಲ್ಲವೇ ಅಲ್ಲ.
- – ಅತಿಯಾದ ಭಾವುಕತೆ ತೊರೆದು ಸ್ಥಿತಪ್ರಜ್ಞೆಯಿಂದ ಇದ್ದರೆ ಸಿರಿವಂತಿಕೆಯ ದಾರಿ ಸುಗಮ.
ಜಗದೀಶ ಶರ್ಮಾ ಸಂಪ
- – ಬೇಕು ಅನ್ನೋದಕ್ಕೆ ಒಂದು “ಮಿತʼ ಅನ್ನೋದು ಇರಬೇಕು. “ಮಿತʼ ಹಿಡಿತ ತಪ್ಪಿದಾಗ ಮಹಾಭಾರತ ನಡೆಯಿತು. ದುರ್ಯೋಧನ ಮತ್ತು ಯುಧಿಷ್ಠಿರ ಇಬ್ಬರಿಗೂ ಬೇಕಿತ್ತು. ಆದರೆ ಬೇಕು ಎಂಬ ವಿಚಾರದಲ್ಲಿ ಇವರಿಬ್ಬರ ನಡುವೆ ಸಣ್ಣದೊಂದು ಗೆರೆ ಇತ್ತು. ಮಹಾಭಾರತ ಯುದ್ಧದಲ್ಲಿ ಗೆದ್ದು ರಾಜ್ಯಭಾರ ಮಾಡಿದ ಬಳಿಕವೂ ಪಾಂಡವರು 36 ವರ್ಷಗಳ ಬಳಿಕ ಇನ್ನು ಸಾಕು ಎಂದುಕೊಂಡು ಸ್ವರ್ಗಕ್ಕೆ ನಡೆದರು.
- – ವಿವೇಕ ಕಳೆದುಕೊಂಡರೆ ಅಧಪತನ ಖಚಿತ. ರಾವಣ ಮತ್ತು ದುರ್ಯೋಧನರು ವಿವೇಕ ಕಳೆದುಕೊಂಡು ಏನಾದರು ಎನ್ನುವುದು ನಮಗೆಲ್ಲ ಗೊತ್ತೇ ಇದೆ.
ಡಾ. ನಾ. ಸೋಮೇಶ್ವರ
- – ಆಹಾರ ಸೇವನೆ ಮತ್ತು ಜೀವನ ಶೈಲಿಯಲ್ಲೂ ವಿವೇಕ ಅಗತ್ಯ. ಜಾಹೀರಾತಿನಲ್ಲಿ ಹೇಳುವುದನ್ನೆಲ್ಲ ನಂಬದೆ ವಿವೇಕ, ವಿವೇಚನೆ ಬಳಸಬೇಕು. ಉದಾ: ಇಂಥ ಪೇಸ್ಟ್ ಬಳಸಿದರೆ ಹಲ್ಲು ಫಳಫಳ ಹೊಳೆಯುತ್ತದೆ ಎನ್ನುವುದು ಬೊಗಳೆ. ಆ ಪೇಸ್ಟ್ಗಿಂತ ಹಲ್ಲು ಉಜ್ಜುವ ಸಮರ್ಪಕ ಕ್ರಿಯೆ ಮುಖ್ಯ. ಮಾಹಿತಿಯ ಹಿಂದೆ ಬಿದ್ದು ವಿವೇಕ ಕಳೆದುಕೊಳ್ಳಬೇಡಿ.
- – ನಮ್ಮ ಬದುಕು ಬದಲಾಯಿತು. ಆದರೆ ಜೀನ್ ಬದಲಾಗಿಲ್ಲ ಎನ್ನುವುದನ್ನು ಮರೆಯದಿರೋಣ. ಬಯಸಿದ್ದು ತಿನ್ನೋಣ. ಆದರೆ ತಿಂದಿದ್ದನ್ನು ಅಂದೇ ಜೀರ್ಣಿಸಿಕೊಳ್ಳೋಣ.
- – ನಮ್ಮ ದೇಹದಲ್ಲಿ ಲಕ್ಷಾಂತರ ಸೂಕ್ಷ್ಮ ಜೀವಾಣುಗಳಿರುತ್ತವೆ. ಅದಕ್ಕೆ ಬೇಕಾಗಿರುವುದು ನಾರಿನಂಶ ಇರುವ ಆಹಾರ. ಆದರೆ ನಾವು ಪಿಜ್ಜಾ, ಬರ್ಗರ್ನಂಥ ಆಹಾರ ತಿಂದಾಗ ಆ ಜೀವಾಣುಗಳು ದಂಗೆ ಏಳುತ್ತವೆ. ಆಗಲೇ ನಮ್ಮ ಅವಸಾನ ಶುರುವಾಗುತ್ತದೆ.
- – ದಿನಾಲೂ ನಾವು ಒಂದೇ ಆಹಾರ ಸೇವಿಸಬಾರದು. ಬೇರೆ ಬೇರೆ ಧಾನ್ಯ ಸೇವಿಸಬೇಕು. ಅಡುಗೆಗೆ ಬೇರೆ ಬೇರೆ ಎಣ್ಣೆ ಬಳಸಬೇಕು.
- – ಆಹಾರ ಸಂಸ್ಕೃತಿಯನ್ನು ನಾವು ಮರೆಯಬಾರದು. ಊಟ ಮಾಡುವಾಗ ಟಿವಿ ನೋಡಬಾರದು, ಮಾತನಾಡಬಾರದು, ಜಗಳ ಮಾಡಬಾರದು…ಏಕೆಂದರೆ ಆಹಾರ ಸೇವಿಸುವಾಗ ದೇಹದೊಳಗೆ ಗಾಳಿ ಸೇರಬಾರದು. ದೇಹದೊಳಗೆ ಗಾಳಿಯ ಅತಿಯಾದ ಸಂಗ್ರಹವು ಜೀರ್ಣ ಕ್ರಿಯೆಗೆ ತೊಂದರೆಯುಂಟು ಮಾಡುತ್ತದೆ.
- – ಪೆಪ್ಸಿ, ಕೊಕೊ ಕೋಲಾದಂಥ ರೆಡಿಮೇಡ್ ಪಾನೀಯದಿಂದ ಇರ ಇರಿ. ಪಾರಂಪರಿಕ ಪಾನೀಯ ಸೇವಿಸಿ.
ಸತೀಶ್ ವೆಂಕಟಸುಬ್ಬು
- – ನಮ್ಮನ್ನು ಯಾರೂ ಮೋಸ ಮಾಡಲಾರರು ಎಂಬ ಅತಿಯಾದ ಆತ್ಮವಿಶ್ವಾಸವೇ ನಾವು ಮೋಸ ಹೋಗಲು ಕಾರಣ!
- – ಅತಿಯಾಸೆ ಗತಿಗೇಡು ಎಂಬುದು ಸಾರ್ವಕಾಲಿಕ ಸತ್ಯ.
- – ನಾವು ಮೋಸ ಹೋಗಲು ನಮ್ಮ ಅಜ್ಞಾನವೂ ಒಂದು ಕಾರಣ.
ಇದನ್ನೂ ಓದಿ | Pustaka Sante : ವೀರಲೋಕ ಪುಸ್ತಕ ಸಂತೆ ಅದ್ಧೂರಿ ಆರಂಭ, ವೆರಿ ಗುಡ್ ಎಂದು ಬೆನ್ನುತಟ್ಟಿದ ಸಿಎಂ ಸಿದ್ದರಾಮಯ್ಯ
ಸಪ್ನ ಬುಕ್ ಹೌಸ್ನ ದೊಡ್ಡೇಗೌಡ ಅವರು “ಸಾವಣ್ಣ ಪ್ರಕಾಶನದ ಜಮೀಲ್ ಹೃದಯವಂತ. ಅನ್ಯ ಭಾಷಿಕರಾದರೂ ಕನ್ನಡ ಭಾಷೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ” ಎಂದು ಶ್ಲಾಘಿಸಿದರು.
ಖ್ಯಾತ ಲೇಖಕ ಜೋಗಿ ಅವರು ಮಾತನಾಡಿ “ಜಮೀಲ್ ಅವರು ಮರು ಮದ್ರಣದ ಪರಿಣತ. ಜಮೀಲ್ ಅವರ ಪುಸ್ತಕ ಪ್ರೀತಿ; ಪುಸ್ತಕವನ್ನು ಅವರು ಲಾಲಿಸಿ, ಪೋಷಿಸುವ ರೀತಿ ಮೆಚ್ಚುವಂಥದ್ದುʼʼ ಎಂದು ಪ್ರಶಂಸಿಸಿದರು.