ಬೆಂಗಳೂರು: ಬೌನ್ಸ್ ಸಂಸ್ಥೆಯ ಇ- ಬೈಕ್ ಟ್ಯಾಕ್ಸಿಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಪ್ರಯಾಣಿಕರ ಪ್ರಯಾಣ ದೂರಕ್ಕೆ ಮಿತಿ ವಿಧಿಸಿದೆ. ದರವನ್ನೂ ನಿಗದಿಪಡಿಸಿದೆ.
ಕನಿಷ್ಠ 5 ಕಿ.ಮೀ.ನಿಂದ ಗರಿಷ್ಠ 10 ಕಿ.ಮೀವರೆಗೆ ಸಂಚಾರ ನಡೆಸಲು ಅನುಮತಿ ನೀಡಲಾಗಿದೆ. ಪ್ರತಿ 5 ಕಿ.ಮೀಗೆ 25 ರೂಪಾಯಿ, ಪ್ರತಿ 10 ಕಿ.ಮೀಗೆ 50 ರೂಪಾಯಿ ನಿಗದಿ ಮಾಡಿದೆ.
ಬೌನ್ಸ್ ಕಂಪನಿಯ ಇ-ಬೈಕ್ ಸೇವೆಗೆ ಸಾರಿಗೆ ಇಲಾಖೆ ಹಸಿರು ನಿಶಾನೆ ತೋರಿಸಿದ್ದು, ನಿನ್ನೆ ಈ ಕುರಿತು ಮೀಟಿಂಗ್ ನಡೆಸಿದ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ ಇ- ಬೈಕ್‌ಗೆ ಗ್ರೀನ್ ಸಿಗ್ನಲ್ ನೀಡಿತ್ತು. 2021ರ ಡಿಸೆಂಬರ್‌ನಲ್ಲಿ ಇ- ಬೈಕ್ ಸೇವೆಗೆ ಅನುಮತಿ ಕೋರಿ ಬೌನ್ಸ್ ಅರ್ಜಿ ಸಲ್ಲಿಸಿತ್ತು.
ಇದೀಗ ಮೊದಲ ಹಂತದಲ್ಲಿ 100 ಇ- ಬೈಕ್‌ಗಳನ್ನು ರಸ್ತೆಗಿಳಿಸಲು ಬೌನ್ಸ್ ನಿರ್ಧರಿಸಿದ್ದು, ನಂತರ ಹಂತ ಹಂತವಾಗಿ 1000 ಇ- ಬೈಕುಗಳನ್ನು ಬಿಡಲು ನಿರ್ಧರಿಸಿದೆ. ಈ ಹಿಂದೆ ಕೂಡ ಬೈಕ್ ಸೇವೆ ನೀಡುತ್ತಿದ್ದ ಬೌನ್ಸ್ ಕಂಪನಿ ಕೊರೋನಾ ಸಮಯದಲ್ಲಿ ಸೇವೆಯನ್ನು ಸ್ಥಗಿತಗೊಳಿಸಿತ್ತು.
ಸಾರಿಗೆ ಇಲಾಖೆ ಇ- ಬೈಕ್ ಸಂಚಾರಕ್ಕೆ ಕೆಲವು ಷರತ್ತು ವಿಧಿಸಿದೆ. ಪ್ರಯಾಣಿಕರು ತಲುಪುವ ಸ್ಥಳ 10 ಕಿ.ಮೀ.ಗಿಂತ ಹೆಚ್ಚು ಇರಬಾರದು. ಬೈಕ್ ಸವಾರ ಹಾಗೂ ಹಿಂಬದಿ ಸವಾರ ಹಳದಿ ಹೆಲ್ಮೆಟ್ ಹಾಕಿರಬೇಕು. ಕಂಪನಿ ಪ್ರತಿ ಒಂದು ಇ- ಬೈಕಿಗೆ 5 ಸಾವಿರ ಭದ್ರತಾ ಠೇವಣಿ ಪಾವತಿಸಬೇಕು. ಮೊದಲು 5 ವರ್ಷಕ್ಕೆ ಪರವಾನಿಗೆ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.