ಬೆಂಗಳೂರು: ಮೂರನೇ ಹಂತದ ಸ್ತನಕ್ಯಾನ್ಸರ್‌ನಿಂದ (Breast cancer) ಬಳಲುತ್ತಿದ್ದ 38 ವರ್ಷದ ಮಹಿಳೆಗೆ ದೇಶದಲ್ಲೇ ಮೊದಲ ಬಾರಿಗೆ ತನ್ನದೇ ದೇಹದ ಮತ್ತೊಂದು ಭಾಗವನ್ನು ಬಳಸಿಕೊಂಡು ರೊಬೋಟ್ ಸಹಾಯದ ಮೂಲಕ ಯಶಸ್ವಿಯಾಗಿ ಸ್ತನವನ್ನು ಪುನರ್ ನಿರ್ಮಿಸಲಾಗಿದೆ. ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಆಂಕೊಲಾಜಿ ಮತ್ತು ರೊಬೊಟಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ ವಿಭಾಗದ ನಿರ್ದೇಶಕ ಡಾ. ಸಂದೀಪ್ ನಾಯಕ್ ಪಿ ಅವರ ವೈದ್ಯ ತಂಡ ಈ ಸಾಧನೆ ಮಾಡಿದೆ.
ಈ ಕುರಿತು ಮಾತನಾಡಿದ ಡಾ. ಸಂದೀಪ್ ನಾಯಕ್ ಪಿ., 38 ವರ್ಷದ ರೇಹಾ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಎಡ ಸ್ತನದ ಕ್ಯಾನ್ಸರ್ ಮೂರನೇ ಹಂತಕ್ಕೆ ತಲುಪಿತ್ತು. ಇವರಿಗೆ ಸಣ್ಣ ಮಗುವಿದ್ದು, ಹಾಲುಣಿಸುತ್ತಿದ್ದರು. ಸ್ತನ ಕ್ಯಾನ್ಸರ್ ಮೂರನೇ ಹಂತ ತಲುಪಿದ್ದರಿಂದ ಹಾಲುಣಿಸುವುದು ಸಹ ಕಷ್ಟಕರವಾಗಿತ್ತು. ಫೋರ್ಟಿಸ್ ಆಸ್ಪತ್ರೆಗೆ ದಾಖಲಾದ ಅವರಿಗೆ ಸ್ತನ ಕ್ಯಾನ್ಸರ್ ಮೂರನೇ ಹಂತಕ್ಕೆ ತಲುಪಿರುವುದು ತಿಳಿದು ಬಂತು. ಕೂಡಲೇ ಅವರಿಗೆ ಕಿಮೊಥೆರಪಿ ಕೋರ್ಸ್ ಪೂರ್ಣಗೊಳಿಸುವಂತೆ ಸಲಹೆ ನೀಡಿದೆವು. ಅದರಂತೆ ಅವರು ಕಿಮೊಥೆರಪಿ ತೆಗೆದುಕೊಂಡರು.
ಆದರೆ, ಅವರಿಗೆ ತಮ್ಮ ಸ್ತನ ಪುನರ್ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರಿಂದ ಅವರಿಗೆ ವಿನೂತನ ಶಸ್ತ್ರಚಿಕಿತ್ಸೆಯಾದ ರೊಬೊಟಿಕ್-ಸಹಾಯದ ನಿಪ್ಪಲ್ ಸ್ಪೇರಿಂಗ್ ಸ್ತನಛೇದನ ಮತ್ತು LD ಫ್ಲಾಪ್ ಪುನರ್ ನಿರ್ಮಾಣದ ಸಲಹೆ ನೀಡಿದೆವು. ಅದರಂತೆ, ಕ್ಯಾನ್ಸರ್ ಪೀಡಿತ ಸ್ತನ ಅಂಗಾಂಶವನ್ನು ತೆಗೆದುಹಾಕಿದ ನಂತರ, ನಾವು ರೋಬೋಟಿಕ್ ನೆರವಿನ LD ಫ್ಲಾಪ್ ಪುನರ್ ನಿರ್ಮಾಣದ ಮೂಲಕ ರೋಗಿಯ ಹಿಂಭಾಗದಿಂದ ತೆಗೆದ ಅಂಗಾಂಶವನ್ನು ಬಳಸಿಕೊಂಡು ಸ್ತನವನ್ನು ಪುನರ್ನಿರ್ಮಿಸಿದ್ದೇವೆ.
ಈ ವಿಧಾನವು ಕನಿಷ್ಠ ಆಕ್ರಮಣಕಾರಿಯಾಗಿದ್ದು, ತ್ವರಿತವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ರೋಬೋಟ್ ಸಹಾಯದಿಂದ ನಡೆಸಿದ ಸ್ತನ ಮರುನಿರ್ಮಾಣ ಶಸ್ತ್ರಚಿಕಿತ್ಸೆಯು ಹೆಚ್ಚು ಪರಿಣಾಮಕಾರಿ. ಅಷ್ಟೇ ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ತಮ್ಮ ದೇಹದ ಭಾಗವನ್ನೇ ಬಳಸಿಕೊಂಡು ಸ್ತನವನ್ನು ನೈಸರ್ಗಿಕವಾಗಿ ರೋಬೋಟ್ ಸಹಾಯದ ಮೂಲಕ ಮರುನಿರ್ಮಾಣದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಕಾರ್ಯ ವಿಧಾನದಲ್ಲಿ ಫೋರ್ಟಿಸ್ ಆಸ್ಪತ್ರೆಯ ಡಾ ಅಮೀನುದ್ದೀನ್ ಖಾನ್ ಮತ್ತು ಡಾ ಭರತ್ ಜಿ ಅವರ ಸಹಕಾರ ಪ್ರಶಂಸನೀಯ. ಪ್ರಸ್ತುತ ರೋಗಿಯು ಆರೋಗ್ಯವಾಗಿದ್ದಾರೆ ಎಂದು ವಿವರಿಸಿದರು.
ಅತ್ಯಾಧುನಿಕ ತಂತ್ರಜ್ಞಾನವಾದ “ಡಾ ವಿನ್ಸಿ ಕ್ಸಿ” ರೋಬೋಟ್ ಮೂಲಕ ಮೂತ್ರಕೋಶ ಶಸ್ತ್ರಚಿಕಿತ್ಸೆ
ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿಯೇ ಮುಂಚೂಣಿಯಲ್ಲಿರುವ “ಡಾ ವಿನ್ಸಿ ಕ್ಸಿ (Da Vinci Xi)” ರೋಬೋಟ್ ಮೂಲಕ ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆಯು ಮೂತ್ರಕೋಶಕ್ಕೆ ಸಂಬಂಧಿಸಿದ 1000 ಸರ್ಜರಿಯನ್ನು ಯಶಸ್ವಿಯಾಗಿ ಪೂರೈಸಿದೆ. ಇದೇ ತಂತ್ರಜ್ಞಾನವನ್ನು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲೂ ಪ್ರಾರಂಭಿಸಲಾಗುತ್ತಿದೆ.
ಈ ಕುರಿತು ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ವಿಭಾಗದ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ, 2018ರಲ್ಲಿ ಮೊದಲ ಬಾರಿಗೆ ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆಯಲ್ಲಿ “ಡಾ ವಿನ್ಸಿ ಕ್ಸಿ” ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು. ಅದಾದ 79 ತಿಂಗಳುಗಳಲ್ಲಿ ಬರೋಬ್ಬರಿ 1 ಸಾವಿರಕ್ಕೂ ಹೆಚ್ಚು ರೊಬೊಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಈ ಅತ್ಯಾಧುನಿಕ ತಂತ್ರಜ್ಞಾನದ ರೋಬೋಟಿಕ್ ಮೂಲಕ ಯುರೋ-ಆಂಕೊಲಾಜಿ, ಯುರೋ-ಗೈನಕಾಲಜಿ, ಮೂತ್ರಶಾಸ್ತ್ರ, ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್ ನಂತಹ ಸಂಕೀರ್ಣ ಕಾರ್ಯವಿಧಾನಗಳ ಶಸ್ತ್ರಚಿಕಿತ್ಸೆಯನ್ನು ಅತಿ ಸುಲಭ ಹಾಗೂ ನಿಖರವಾಗಿ ಮಾಡಲಾಗಿದೆ. ಡಾ ವಿನ್ಸಿ ಕ್ಸಿ ರೋಬೋಟ್ ಮೂಲಕ ನಡೆಸಲಾದ ಶಸ್ತ್ರಚಿಕಿತ್ಸೆಗಳಲ್ಲಿ 92 ರೋಬೋಟಿಕ್ ಕಿಡ್ನಿ ಟ್ರಾನ್ಸ್‌ಪ್ಲಾಂಟ್, 398 ನರ-ಸ್ಪೇರಿಂಗ್ ರೋಬೋಟಿಕ್ ರಾಡಿಕಲ್ ಪ್ರಾಸ್ಟೇಟೆಕ್ಟಮಿ, 282 ರೋಬೋಟಿಕ್ ಕಾಂಪ್ಲೆಕ್ಸ್ ಪಾರ್ಶಿಯಲ್ ನೆಫ್ರೆಕ್ಟಮಿಗಳು ಮತ್ತು 54 ಪೀಡಿಯಾಟ್ರಿಕ್ ರೋಬೋಟಿಕ್ ಕಾರ್ಯವಿಧಾನಗಳು ಸೇರಿವೆ.
ಡಾ ವಿನ್ಸಿ ಎಕ್ಸ್ ಒಂದು ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ರೋಬೋಟ್ ಮೂಲಕ ನಿಖರವಾಗಿ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಯನ್ನೂ ಮಾಡಬಹುದು. ಅಷ್ಟೇ ಅಲ್ಲದೆ, ಈ ಸುಧಾರಿತ ತಂತ್ರಜ್ಞಾನವು ಸುತ್ತಮುತ್ತಲಿನ ಅಂಗಾಂಶಗಳಿಗೆ ಯಾವುದೇ ಹಾನಿ ಮಾಡದೇ ಸುಲಭವಾಗಿ ಶಸ್ತ್ರಚಿಕಿತ್ಸೆಯನ್ನು ಕಡಿಮೆ ಅವಧಿಯಲ್ಲೇ ಮಾಡಬಹುದಾಗಿದೆ ಎಂದು ವಿವರಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ