ಬೆಂಗಳೂರು: ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಆ್ಯಂಡ್ ಸ್ಟ್ಯಾಂಡ್ಅಪ್ ಮುಂತಾದ ಮಹತ್ವದ ಯೋಜನೆಗಳ ಸಹಾಯದಿಂದ ಶಕ್ತಿಶಾಲಿ ಭಾರತವನ್ನು ಕಟ್ಟಬಹುದಾಗಿದೆ. ಇವೆಲ್ಲವುಗಳ ಒಟ್ಟು ಫಲಿತಾಂಶವೇ “ಆತ್ಮನಿರ್ಭರ ಭಾರತ”ವಾಗಿದೆ. ಶಿಕ್ಷಣದ ಮೂಲಕ (BSRNS Vidyaniketan 2) ಭವಿಷ್ಯದ ಭಾರತವನ್ನು ನಿರ್ಮಾಣ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಯಲಚಗುಪ್ಪೆ ಗ್ರಾಮದಲ್ಲಿ ಬೆಂಗಳೂರು ಬಂಟರ ಸಂಘ ನೂತನವಾಗಿ ನಿರ್ಮಿಸಿದ್ದ ಬಿಎಸ್ಆರ್ಎನ್ಎಸ್ ವಿದ್ಯಾನಿಕೇತನ -2 ಶಾಲಾ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿ, ಮಹಿಳಾ ಸಶಕ್ತೀಕರಣ ಹಾಗೂ ಪರಸ್ಪರ ಸಹಭಾಗಿತ್ವದ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಬಿಎಸ್ಆರ್ಎನ್ಎಸ್ ವಿದ್ಯಾಸಂಸ್ಥೆ ಒಂಬತ್ತು ಎಕರೆ ವಿಸ್ತೀರ್ಣದಲ್ಲಿ ಅತ್ಯುತ್ತಮ ವ್ಯವಸ್ಥೆಯುಳ್ಳ ಶೈಕ್ಷಣಿಕ ಸಂಕೀರ್ಣವನ್ನು ನಿರ್ಮಾಣ ಮಾಡಿದೆ. ನಗರದ ಜಂಜಾಟಗಳಿಂದ ದೂರವಿರುವ ಈ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಅನುಕೂಲಕರ ಪ್ರಶಾಂತ ವಾತಾವರಣವನ್ನು ಸೃಷ್ಟಿಸಿಕೊಟ್ಟಿದೆ. ಇಂಥದ್ದೊಂದು ಪ್ರಯತ್ನ ಮಾಡಿರುವ ಈ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ವಿದ್ಯಾಸಂಸ್ಥೆ ಶಿಕ್ಷಣದ ಜತೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗೂ ಆದ್ಯತೆ ನೀಡುವಂತಾಗಲಿ ಎಂದು ನಾನು ಬಯಸುತ್ತೇನೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಬಲಾಢ್ಯರಾಗುತ್ತಾರೆ. ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ದೇಶದ ಉನ್ನತಿಗೆ ಹೆಚ್ಚಿನ ಮಹತ್ವಪೂರ್ಣ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಗೆಹ್ಲೋಟ್ ಹೇಳಿದರು.
ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಆಧುನಿಕ ಶಿಕ್ಷಣದ ಜತೆ ನಮ್ಮ ಪಾರಂಪರಿಕ ಪ್ರತಿಭೆ-ಕೌಶಲ್ಯಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಹೊಸ ಶಿಕ್ಷಣ ವ್ಯವಸ್ಥೆಯ ಸಹಾಯದಿಂದ ನಮ್ಮ ಶಿಕ್ಷಣ ವ್ಯವಸ್ಥೆಗೆ ಹೊಸ ದಿಶೆ ದೊರಕಲಿದೆ. ಬಂಟರ ಸಂಘದ ಆರ್ಎನ್ಎಸ್ ವಿದ್ಯಾನಿಕೇತನ ಸಂಸ್ಥೆಯೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ ಎಂಬ ನಂಬಿಕೆ ನನಗಿದೆ ಎಂದು ಗೌರವಾನ್ವಿತ ರಾಜ್ಯಪಾಲರು ಭರವಸೆ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಗಳು ದೇಶದ ಪ್ರಗತಿಯ ಮಾಧ್ಯಮ – ಶ್ರೀ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ
ದೇಶದ ಉನ್ನತಿಗೆ ಶಿಕ್ಷಣ ಅತ್ಯಗತ್ಯ- ಶ್ರೀ ಸುಭುದೇಂದ್ರ ತೀರ್ಥರು
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಶಿಕ್ಷಣ ಸಂಸ್ಥೆಗಳು ದೇಶದ ಪ್ರಗತಿಯ ಮಾಧ್ಯಮವಾಗಿದೆ. ಯಾರು ಅಕ್ಷರದಿಂದ ದೂರ ಆಗಿರುತ್ತಾರೆ. ಅವರು ಲೋಕ ಕಂಟಕರಾಗಿ ಜನರನ್ನು ಪೀಡಿಸುತ್ತಾರೆ. ಹೀಗಾಗಿ ದೇಶದ ಉನ್ನತಿಗೆ ಶಿಕ್ಷಣ ಅತ್ಯಗತ್ಯವಾಗಿದೆ ಎಂದರು.
ಈಚೆಗೆ ಶಿಕ್ಷಣ ಸಂಸ್ಥೆಗಳ ಹೆಸರಲ್ಲಿ ಹಣವನ್ನು ಗಳಿಸುವ ಶಿಕ್ಷಣ ಸಂಸ್ಥೆಗಳಿವೆ. ಜತೆಗೆ ಶಿಕ್ಷಣ ಸಂಸ್ಥೆಯನ್ನೇ ಹಿಡನ್ ಅಜೆಂಡಾದಂತೆ ಇಟ್ಟುಕೊಂಡು ಸಮಾಜಕ್ಕೆ ಕಂಟಕವಾಗುವಂತಹ ಸಂಸ್ಥೆಗಳೂ ಇವೆ. ಆದರೆ, ಶಿಕ್ಷಣ ಸಂಸ್ಥೆಗಳು ಜಗತ್ತಿನ ಉನ್ನತಿಗೆ ಉತ್ತಮ ವ್ಯಕ್ತಿತ್ವವನ್ನ ರೂಪಿಸುವಂತೆ ಇರಬೇಕು. ಅಂಥಹ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬೆಂಗಳೂರು ಬಂಟ ಸಂಘದ ಮೊದಲನೇ ಘಟಕ ಬೆಳೆದು ನಿಂತಿದೆ. ಅದರ ಭಾಗವಾಗಿ ಇಂದು ಎರಡನೇ ಘಟಕ ಲೋಕಾರ್ಪಣೆಗೊಂಡಿದೆ. ಶಿಕ್ಷಣ ಸಂಸ್ಥೆ ಬೆಳೆದು ನಿಂತರೆ ಲೋಕಕ್ಕೆ ಉತ್ತಮ ಪೌರರನ್ನು ಕೊಡುಗೆಯಾಗಿ ನೀಡುತ್ತದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಭಾಗದಲ್ಲಿ ಬಂಟ ಸಮುದಾಯದವರು ಕೃಷಿಯನ್ನು ಪ್ರಧಾನವಾಗಿಟ್ಟುಕೊಂಡವರು. ಕೃಷಿ ಕ್ಷೇತ್ರದಿಂದ ದೇಶಕ್ಕೆ ಅನ್ನದಾತರಾಗಿ ಬೆಳೆದಂತಹ ಈ ಸಮುದಾಯ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಹೆಜ್ಜೆ ಇಡುತ್ತಿದೆ. ಅದೇ ರೀತಿ ಈ ಶಿಕ್ಷಣ ಸಂಸ್ಥೆ ರಾಜ್ಯಕ್ಕೆ, ದೇಶಕ್ಕೆ ಅಷ್ಟೇ ಅಲ್ಲದೆ, ಇಡೀ ವಿಶ್ವಕ್ಕೆ ಮಾದರಿಯಾಗಿ ಬೆಳಿಯಲಿ ಎಂದು ಆಶೀರ್ವದಿಸಿದರು.
ಸೇವೆ, ತ್ಯಾಗದ ಮನೋಭಾವನೆಯ ಶಿಕ್ಷಣ ನೀಡಬೇಕು- ಸಿ.ಟಿ. ರವಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಶಿಕ್ಷಣ ಎನ್ನುವುದು ಬದುಕನ್ನು ಬದಲಾಯಿಸುವಂತಹ ಸಾಧನವಾಗಿದೆ. ಬಂಟರ ಸಂಘ ತಾನು ಮಾಡುತ್ತಿರುವ ಹತ್ತಾರು ಕಾರ್ಯಗಳ ನಡುವೆ ಶಿಕ್ಷಣ ಕ್ಷೇತ್ರವನ್ನು ಆದ್ಯತೆಯಾಗಿ ತೆಗೆದುಕೊಂಡು ಸಮಾಜದಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣವನ್ನ ಬಿಟ್ಟು ದೇಶ ಕಟ್ಟೋಕೆ ಸಾಧ್ಯ ಇಲ್ಲ. ದುರ್ದೈವದ ಸಂಗತಿ ಹತ್ತಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸುಸಂಸ್ಕೃತ ಸಭ್ಯ ರಾಷ್ಟ್ರವಾಗಿದ್ದ ಭಾರತವನ್ನು ಪರಕೀಯರ ಆಕ್ರಮಣದಿಂದ ನಮ್ಮ ಸಂಪತ್ತು ಮತ್ತು ಸಭ್ಯತೆಗಳನ್ನು ಕಳೆದುಕೊಂಡಿದ್ದೆವು. ಸಾತಂತ್ರ್ಯದ ನಂತರವೂ ನಮಗೆ ಭಾರತದ ಸೋಲಿನ ಇತಿಹಾಸವನ್ನೇ ಬೋಧನೆ ಮಾಡಲಾಗಿದೆ. ಆದರೆ ಈಗ ಭಾರತ ಬದಲಾಗಿದೆ. ಶಿಕ್ಷಣದ ಮೂಲಕ ಭಾರತವನ್ನು ಮತ್ತೆ ಕಟ್ಟಬೇಕು ಅನ್ನುವಂತಹ ಸಂಕಲ್ಪದೊಂದಿಗೆ ನಾವು ಜಗತ್ತಿನ ಸವಾಲನ್ನು ಎದುರಿಸುವುದಕ್ಕೆ ತಯಾರಾಗಿದ್ದೇವೆ ಎಂದರು.
ಇದನ್ನೂ ಓದಿ | ಗೋವಿಂದ ದೇವಾಲಯ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ಕೋವಿಂದ
ಈ ನಿಟ್ಟಿನಲ್ಲಿ ಬಿಎಸ್ಆರ್ಎನ್ಎಸ್ ವಿದ್ಯಾನಿಕೇತನ ಸಂಸ್ಥೆ ಕೇವಲ ಶಿಕ್ಷಣ ಮಾತ್ರ ಕೊಡುವುದಲ್ಲ. ಶೀಲವಂತ ಮತ್ತು ಚಾರಿತ್ರ್ಯವಂತ ಸಮಾಜವನ್ನ ನಿರ್ಮಾಣ ಮಾಡುವುದಕ್ಕೆ ಬೇಕಾದಂತಹ ಶಿಕ್ಷಣವನ್ನ ನೀಡಬೇಕು. ಕಾರಣ, ಭಾರತೀಯರು ಗೌರವಿಸಿದ್ದು, ಪೂಜಿಸಿದ್ದು ಸಂಪತ್ತನ್ನಲ್ಲ, ಚಾರಿತ್ರ್ಯವಂತರನ್ನು ಎಂಬುದನ್ನು ನಾವು ಮರೆಯಬಾರದು. ಈ ರೀತಿಯ ಮನೋಭಾವೆನೆಯನ್ನು ಬೆಳೆಸುವಂತಹ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಲೋಕಾಯುಕ್ತ ಜಸ್ಟಿಸ್ ಪಿ. ವಿಶ್ವನಾಥ ಶೆಟ್ಟಿ, ಬಿ.ಎಸ್.ಆರ್.ಎನ್.ಎಸ್ ವಿದ್ಯಾನಿಕೇತನದ ಆಡಳಿತ ಮಂಡಳಿ ಚೇರ್ಮನ್ ಕೆ. ಪ್ರಕಾಶ್ ಶೆಟ್ಟಿ, ಗೌರವ ಆತಿಥಿಗಳಾಗಿ ಬೆಂಗಳೂರು ವಿವಿ ಉಪಕುಲಪತಿ ಡಾ. ಜಯಕರ ಶೆಟ್ಟಿ ಎಂ, ಉದ್ಯಮಿ ಶಶಿಕಿರಣ್ ಶೆಟ್ಟಿ, ಹಾಗೂ ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಉಪಸ್ಥಿತರಿದ್ದರು.
ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಕಾರ್ಯದರ್ಶಿ ಮಧುಕರ ಶೆಟ್ಟಿ, ಕೋಶಾಧಿಕಾರಿ ದೀಪಕ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ | ಶಾಲೆಗಳಲ್ಲಿ ಭಗವದ್ಗೀತೆ ಕಲಿಸಲು ಕ್ರಮ; ಸ್ವರ್ಣವಲ್ಲಿಯಲ್ಲಿ ಶಿಕ್ಷಣ ಸಚಿವ ನಾಗೇಶ್ ಹೇಳಿಕೆ