Site icon Vistara News

BWSSB : ಬೆಂಗಳೂರಿಗರ ಬಹು ದಿನಗಳ ಕನಸು- ನನಸು; ಅಕ್ಟೋಬರ್ 16ರಂದು ಕಾವೇರಿ ಐದನೇ ಹಂತ ಲೋಕಾರ್ಪಣೆ

bwssb

ಬೆಂಗಳೂರು: ಬೆಂಗಳೂರು ನಗರ ವಿಶಾಲವಾಗಿ ಬೆಳೆಯುತ್ತಿದ್ದು, ನೀರಿನ ಅವಶ್ಯಕತೆ ಸಹ ಗಮನಾರ್ಹ ಮಟ್ಟದಲ್ಲಿ ಹೆಚ್ಚಾಗಿದೆ. ಸದ್ಯ ನೀರಿನ ಪೂರೈಕೆ ಹೊಣೆ ಹೊತ್ತಿರುವ ಬಿಡಬ್ಲ್ಯೂಎಸ್‌ಎಸ್‌ಬಿ( BWSSB) ನಾನಾ ಯೋಜನೆಗಳ ಮೂಲಕ ಕೆಲಸ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಮತ್ತೊಂದು ಯೋಜನೆ ನೀಡುವ ಮೂಲಕ ಬೆಂಗಳೂರು ಮಂದಿಗೆ ಒಂದೊಳ್ಳೆ ಸಿಹಿ ಸುದ್ದಿ ನೀಡಿದೆ.

ಬೆಂಗಳೂರಿನ ಕೆಲವು ಭಾಗಗಳ ಜನತೆ ಕಾವೇರಿ ನೀರಿಗಾಗಿ ಕಾಯುತ್ತಾ ಕೂರುವಂತಾಗಿತ್ತು. ಹಲವಾರು ಸರ್ಕಾರಗಳು ಬದಲಾದರೂ ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗಿತ್ತು. ಅದಕ್ಕೀಗ ಬ್ರೇಕ್ ಬೀಳಲಿದ್ದು, ಉದ್ಘಾಟನೆ ಭಾಗ್ಯ ಹತ್ತಿರ ಬಂದಿದೆ. ಬಹು ನಿರೀಕ್ಷಿತ ಕಾವೇರಿ ಐದನೇ ಹಂತದ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 16 ರಂದು ಉದ್ಘಾಟನೆ ಮಾಡಲಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ (ಟಿ. ಕೆ. ಹಳ್ಳಿ ) ಯಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆವರಣದಲ್ಲಿ ಅಕ್ಟೋಬರ್ 16 ರ ಬುಧವಾರ ಬೆಳಗ್ಗೆ 10.30 ಗಂಟೆಗೆ ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

775 ಎಂ. ಎಲ್. ಡಿ ಹೆಚ್ಚುವರಿ ನೀರು ಪೂರೈಕೆ, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಸರಬರಾಜು, ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಬೊಮ್ಮನಹಳ್ಳಿ ವಲಯದ ಮನೆ ಮನೆಗೂ ಕಾವೇರಿ ನೀರು ಪೂರೈಕೆಯಾಗಲಿದೆ. ಇದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದ 50 ಲಕ್ಷ ಫಲಾನುಭವಿಗಳಿಗೆ ಉಪಯೋಗವಾಗಲಿದೆ.

ಕಾವೇರಿ 5ನೇ ಹಂತದ ಯೋಜನೆಯಿಂದಲೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಬೆಂಗಳೂರಿನಲ್ಲಿ 4 ಲಕ್ಷ ನೀರಿನ ಸಂಪರ್ಕ ಗುರಿಯನ್ನು ಇಟ್ಟುಕೊಂಡಿದೆ. ಈ ಯೋಜನೆಗೆ 4336 ಕೋಟಿ ರೂ. ವೆಚ್ಚ ಮಾಡಲಾಗಿದೆ. ಒಟ್ಟಾರೆ ನಗರದ ನಿವಾಸಿಗಳ ಬಹು ದಿನಗಳ ಬೇಡಿಕೆ ಕೊನೆಗೂ ಸಾಕಾರ ಆಗುತ್ತಿದ್ದು, ಕಾವೇರಿ ಕೃಪೆ ಸಿಗಲಿದೆ.

Exit mobile version