ಬೆಂಗಳೂರು: ಕಾವೇರಿ ನೀರಿನ ಬಳಕೆ ಶುಲ್ಕ ವರ್ಷಕ್ಕೊಮ್ಮೆ ಪರಿಷ್ಕರಿಸಲು ಅನುಮತಿ ನೀಡುವಂತೆ ಜಲಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದು ಜಾರಿಗೆ ಬಂದರೆ ನೀರಿನ ದರ ಕೂಡ ವರ್ಷಕ್ಕೊಮ್ಮೆ ಹೆಚ್ಚಳವಾಗಲಿದೆ.
ಪದೇ ಪದೆ ವಿದ್ಯುತ್ ದರ ಹೆಚ್ಚಳ, ನಿರ್ವಹಣಾ ವೆಚ್ಚ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಪ್ರತಿ ವರ್ಷಕ್ಕೊಮ್ಮೆ ನೀರಿನ ದರ ಏರಿಸುವಂತೆ bwssb ಪ್ರಸ್ತಾಪ ಸಲ್ಲಿಸಿದೆ. 2014 ಅಕ್ಟೋಬರ್ 20ರಿಂದ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆಯಾಗಿಲ್ಲ. ಆದರೆ 2014ರಿಂದ 10 ಬಾರಿ ವಿದ್ಯುತ್ ದರ ಪರಿಷ್ಕರಣೆಯಾಗಿದೆ. ವಿದ್ಯುತ್ ದರ ಹೆಚ್ಚುವಂತೆ ನೀರಿನ ಪೂರೈಕೆ ವೆಚ್ಚದಲ್ಲೂ ಹೆಚ್ಚಳವಾಗುತ್ತದೆ. ಇದರಿಂದಾಗಿ ನಷ್ಟ ಹೆಚ್ಚಿದೆ. ಹೀಗಾಗಿ ಪ್ರತಿ ವರ್ಷಕ್ಕೊಮ್ಮೆ ನೀರಿನ ದರ ಏರಿಕೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಸರ್ಕಾರ ಈ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿದರೆ ಬೆಂಗಳೂರು ಬದುಕು ಮತ್ತಷ್ಟು ದುಬಾರಿಯಾಗಲಿದೆ. KERCಯಂತೆ ಜಲಮಂಡಳಿಯೂ ಪ್ರತಿ ವರ್ಷ ಏಪ್ರಿಲ್‌ನಲ್ಲಿ ನೀರಿನ ದರ ಪರಿಷ್ಕರಣೆ ಮಾಡಬಹುದು. ಆದರೆ ಚುನಾವಣೆಯ ಹೊಸ್ತಿಲಲ್ಲಿರುವ ಸರ್ಕಾರ ಈಗ ದರ ಏರಿಸಿ ಮೈಮೇಲೆ ಬರೆ ಎಳೆದುಕೊಳ್ಳಲಾರದು ಎಂದೂ ಊಹಿಸಲಾಗಿದೆ. ದರ ಏರಿಸುವ ಬದಲು ಸೋರಿಕೆಯಾಗುತ್ತಿರುವ ನೀರನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಸಾಕು ಎಂಬುದು ತಜ್ಞರ ಅನಿಸಿಕೆಯಾಗಿದೆ.
ಇದನ್ನೂ ಓದಿ | ನಿರಂತರ ಕುಡಿಯುವ ನೀರು ಪೂರೈಕೆ ಕಾಮಗಾರಿ ಚುರುಕುಗೊಳಿಸಿ, ಅಧಿಕಾರಿಗಳಿಗೆ ಸಿಎಂ ಸೂಚನೆ