Site icon Vistara News

BY Vijayendra: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಶಸ್ತಿ, ಮೋದಿ ಕಲ್ಪನೆಗೆ ದೊರೆತ ಪುರಸ್ಕಾರ: ವಿಜಯೇಂದ್ರ

Bangalore airport Vijayendra

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International airport Bangalore) ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದೆಂಬ ಗೌರವಕ್ಕೆ ಭಾಜನವಾಗಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹರ್ಷ ವ್ಯಕ್ತಪಡಿಸಿದ್ದಾರೆ ಮತ್ತು ಇದು ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಗೆ ಸಿಕ್ಕ ಪುರಸ್ಕಾರ ಎಂದು ಸಂಭ್ರಮಿಸಿದ್ದಾರೆ.

ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ 2023 ಪ್ರಿಕ್ಸ್ ವರ್ಸೇಲ್ಸ್‌ (UNESCO’s 2023 Prix Versailles) ಜಗತ್ತಿನ ಅತಿ ಸುಂದರ ವಿನ್ಯಾಸ ಮತ್ತು ವಾಸ್ತುಶಿಲ್ಪವನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತದೆ. ಪ್ರಸಿದ್ಧ ಫ್ಯಾಷನ್ ಡಿಸೈನರ್ ಎಲೀ ಸಾಬ್ ಅವರ ಅಧ್ಯಕ್ಷತೆಯ ಪ್ರಿಕ್ಸ್ ವರ್ಸೈಲ್ಸ್ 2023ರ ವರ್ಲ್ಡ್ ಜಡ್ಜಲ್‌ ಪ್ಯಾನೆಲ್‌ ಟಿ2ವನ್ನು ಜಗತ್ತಿನ ಸುಂದರ ವಾಸ್ತು ವಿನ್ಯಾಸಗಳಲ್ಲಿ ಒಂದು ಎಂದು ಗುರುತಿಸಿದೆ. ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದು ಎಂಬ ಪ್ರಶಸ್ತಿ ಜತೆಗೆ ‘ಇಂಟೀರಿಯರ್‌ 2023ರ ವಿಶ್ವ ವಿಶೇಷ ಪ್ರಶಸ್ತಿ’ಗೂ ಭಾಜನವಾಗಿದೆ.

ಮೋದಿ ಅವರ ಮೂಲಸೌಕರ್ಯ ಕಲ್ಪನೆಯ ಸಾಕಾರ ಎಂದ ವಿಜಯೇಂದ್ರ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಶಸ್ತಿ ಸಿಕ್ಕ ಸಂಭ್ರಮವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಿ.ವೈ ವಿಜಯೇಂದ್ರ ಅವರು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2, ಜಗತ್ತಿನ ಅತಿ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದು ಎಂಬ ಗೌರವಕ್ಕೆ ಪಾತ್ರವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಮೂಲ ಸೌಕರ್ಯ ಅಭಿವೃದ್ಧಿಯ ಭವಿಷ್ಯದ ಪರಿಕಲ್ಪನೆ ಮತ್ತು ಅದರ ಪ್ರಾಮಾಣಿಕ ಕಾರ್ಯಾನುಷ್ಠಾನವನ್ನು ಸೋದಾಹರಣವಾಗಿ ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ 2 ನಿಜಾರ್ಥದಲ್ಲಿ ಒಳಾಂಗಣ ಅಲಂಕಾರದಲ್ಲಿ ಒಂದು ವಿಸ್ಮಯ. ಈ ವಿಸ್ಮಯಕ್ಕಾಗಿಯೇ ಅದು ಯುನೆಸ್ಕೋದ ಪ್ರಿಕ್ಸ್‌ ವರ್ಸೆಲ್ಲಿಸ್‌ ಪ್ರಶಸ್ತಿಯನ್ನು ಪಡೆದಿದೆ. ಇದು ನಮ್ಮ ಸಾಂಸ್ಕೃತಿಕ ಪರಂಪರೆಯ ಭವ್ಯತೆಯನ್ನು ಎತ್ತಿ ಹಿಡಿಯುತ್ತದೆ. ಆಧುನಿಕ ಮೂಲಸೌಕರ್ಯ ಮತ್ತು ಹಸಿರ ಚೆಲುವಿನ ಸೊಗಸಾದ ಅನುಸಂಧಾನವಾಗಿ, ಸೌಂದರ್ಯದ ಖನಿಯಾಗಿ ತಲೆ ಎತ್ತಿ ನಿಂತಿದೆ.

ಟರ್ಮಿನಲ್‌ 2 ಕೇವಲ ಒಂದು ವಿಮಾನ ನಿಲ್ದಾಣವಲ್ಲ. ಅದು ವಾಸ್ತುಶಿಲ್ಪದ ಚಾತುರ್ಯ, ಸಾಂಸ್ಕೃತಿಕ ವೈಭವದ ಜಾಗತಿಕ ಸಂಕೇತ. ಮತ್ತು ಇದು ಭಾರತವನ್ನು ವಿಶ್ವಗುರುವಾಗಿ ರೂಪಿಸುವ ನಿಟ್ಟಿನಲ್ಲಿ ಬಿಜೆಪಿ ಅನುಸರಿಸುತ್ತಿರುವ ಪರಿವರ್ತನೀಯ ಆಡಳಿತದ ಒಂದು ನಿದರ್ಶನ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: Bangalore Airport : ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ಸುಂದರ ಏರ್‌ಪೋರ್ಟ್ ಗರಿ

ನ್ಯಾಷನಲ್‌ ಜಿಯೋಗ್ರಫಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ 2 ವೈಭವ ಜಗತ್ತಿನ ಶ್ರೇಷ್ಠ ವಾಹಿನಿಗಳಲ್ಲಿ ಒಂದಾದ ನ್ಯಾಷನಲ್‌ ಜಿಯೋಗ್ರಫಿ ಚಾನೆಲ್‌ನಲ್ಲಿ ‌ ಕೂಡಾ ಬಿತ್ತರಗೊಂಡಿದೆ. ಇಲ್ಲಿನ ಪರಿಸರಸ್ನೇಹಿ ವ್ಯವಸ್ಥೆ, ಹಸಿರ ವೈಭವವನ್ನು ಹಿನ್ನೆಲೆಯಾಗಿಟ್ಟುಕೊಂಡು ಡಿಸೆಂಬರ್‌ 21ರಂದು ಕಾರ್ಯಕ್ರಮವೊಂದು ಪ್ರಸಾರವಾಗಿದೆ.

Exit mobile version