Site icon Vistara News

BY Vijayendra : ಜ.22ರ ಬಳಿಕ ರಾಜ್ಯದ 30 ಸಾವಿರ ಭಕ್ತರ ರಾಮ ದರ್ಶನಕ್ಕೆ ಬಿಜೆಪಿ ವ್ಯವಸ್ಥೆ

BY Vijayendra Selfie with Rama

ಬೆಂಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ (Ayodhya Rama Mandir) ಲೋಕಾರ್ಪಣೆಯ ಬಳಿಕ ಮುಂದಿನ 60 ದಿನಗಳ ಕಾಲ ರಾಜ್ಯದ ರಾಮ ಭಕ್ತರ ಅಯೋಧ್ಯಾ ಭೇಟಿ, ರಾಮ ದರ್ಶನಕ್ಕೆ ಬಿಜೆಪಿ ವ್ಯವಸ್ಥೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಪ್ರಕಟಿಸಿದರು. ಸುಮಾರು 30 ಸಾವಿರ ಭಕ್ತರು ಇದರಲ್ಲಿ ರಾಮ ದರ್ಶನ (Rama Darshana) ಮಾಡಲಿದ್ದಾರೆ.

ಜ. 22ರಂದು ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದ ಬಳಿಕ 60 ದಿನಗಳ ಕಾಲ ಕರ್ನಾಟಕದ ರಾಮ ಭಕ್ತರು ದರ್ಶನಕ್ಕೆ ತೆರಳಲಿದ್ದಾರೆ. ಅದಕ್ಕಾಗಿ ಪಕ್ಷದ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಜನವರಿ 30ರಿಂದ ಫೆಬ್ರವರಿ ವರೆಗೂ 30 ಸಾವಿರ ಭಕ್ತರು ರಾಜ್ಯದಿಂದ ಅಲ್ಲಿಗೆ ಹೋಗಲಿದ್ದಾರೆ.

ಈಗಾಗಲೇ ರೈಲುಗಳನ್ನು ಬುಕ್‌ ಮಾಡಲಾಗಿದೆ. ಜಗದೀಶ್ ಹೀರೇಮನಿ ಅವರು ಯಾತ್ರೆಯ ಮೇಲ್ವಿಚಾರಣೆ ವಹಿಸಲಿದ್ದಾರೆ. ಭಕ್ತರು ತಮ್ಮದೇ ಖರ್ಚಿನಲ್ಲಿ ಅಲ್ಲಿಗೆ ಹೋಗಲಿದ್ದಾರೆ. ಆದರೆ, ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ. ರಾಜ್ಯದಿಂದ 25 ವಿಶೇಷ ರೈಲು ಮಾಡಿದ್ದು, ಪ್ರತಿಯೊಂದರಲ್ಲೂ 1,200 ಜನರಂತೆ 30 ಸಾವಿರ ಮಂದಿ ಪ್ರಯಾಣ ಮಾಡಲಿದ್ದಾರೆ. ಒಬ್ಬರಿಗೆ 3000 ರೂ. ಖರ್ಚು ಬೀಳಲಿದೆ ಎಂದರು.

ರಾಮಭಕ್ತರಿಗೆ ವಿಶೇಷ ಕಾರ್ಡ್ ನೀಡಿದ್ದು, ಕ್ಯೂ ಆರ್ ಕೋಡ್ ಕೊಡಲಾಗಿದೆ. ಅದರ ಅನುಸಾರ ಅವರಿಗೆ ನಿಗದಿ ಪಡಿಸಿದ ದಿನ, ನಿಗದಿಪಡಿಸಿದ ರೈಲಿನಲ್ಲಿ ಅವರು ಪ್ರಯಾಣಿಸಬೇಕಾಗಿದೆ. ಅವರಿಗೆ ಬೇಕಾದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಅಯೋಧ್ಯೆಯಲ್ಲಿ ಸುಮಾರು 48 ಭೋಜನಾ ಶಾಲೆ ಇದ್ದು, ಕರ್ನಾಟಕದವರಿಗೆ ಎರಡು ಭೋಜನಾ ಶಾಲೆ ಮೀಸಲಿಡಲಾಗಿದೆ ಎಂದು ಬಿ.ವೈ ವಿಜಯೇಂದ್ರ ಅವರು ತಿಳಿಸಿದರು.

ಅಯೋಧ್ಯೆ ಹೋರಾಟ, ರಾಮ ಮಂದಿರ ನಿರ್ಮಾಣದಲ್ಲಿ ಕನ್ನಡಿಗರ ಕೊಡುಗೆ ಅಪಾರ

ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ವಿಚಾರದಲ್ಲಿ ಕೇವಲ ಭಾರತ ಅಲ್ಲ, ಜಗತ್ತಿನ ಅನೇಕ ದೇಶಗಳಲ್ಲಿ ಉತ್ಸಾಹ ಕಾಣುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಅತಿ ಹೆಚ್ಚು ಕಾತರವಿದೆ. ಪ್ರಭು ಶ್ರೀರಾಮ ಚಂದ್ರ ಹಾಗೂ ಕರ್ನಾಟಕದ ಸಂಬಂಧ ನಿನ್ನೆ ಮೊನೆಯದಲ್ಲ. ಸೀತಾಮಾತೆ ಅಪಹರಣ ಬಳಿಕ, ಶ್ರೀರಾಮ, ಲಕ್ಷ್ಮಣನ ಜೊತೆ ಪ್ರಯಾಣ ಬೆಳೆಸಿದ ಕುರುಹು ಇದೆ. ಹಂಪಿ ಸಮೀಪದ ಕಿಷ್ಕಿಂದೆಗೆ ಬಂದಿದ್ದು, ರಾಮಾಂಜನೇಯ ಭೇಟಿ, ರಾವಣನನ್ನು ಶಿಕ್ಷಿಸಲು ಸೈನ್ಯ ಕಟ್ಟಿದ್ದು ಕರ್ನಾಟಕದಲ್ಲಿ ಎಂದು ನೆನಪಿಸಿದರು.

ವಾಲ್ಮೀಕಿ ರಾಮಾಯಣದಷ್ಟೇ ಪ್ರಖ್ಯಾತಿ ಪಡೆದ ತೊರವೆ ರಾಮಾಯಣವನ್ನು ಬರೆದವರು ಕನ್ನಡದವರೇ ಆದ ನರಹರಿಯವರು. ಕುವೆಂಪು ಅವರ ರಾಮಾಯಣ ದರ್ಶನಂ ಸಾಹಿತ್ಯ ಲೋಕದ ಮೇರು ಕೃತಿ ಆಗಿದೆ ಎಂದು ಹೇಳಿದರು.

ರಾಮ ಮಂದಿರ ನಿರ್ಮಾಣ, ಅಯೋಧ್ಯಾ ಕಾರಿಡಾರ್‌ ಜತೆಗೇ ಉಜ್ಜಯಿನಿ ಕಾರಿಡಾರ್, ನಮಾಮಿ ಉಪಗಂಗೆ ಪುನರುಜ್ಜೀವನ ಗೊಳಿಸೋ ಕೆಲಸ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿತ್ವದಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ದ್ವಂದ್ವ ನಿಲುವಿನಲ್ಲಿದೆ ಎಂದು ಹೇಳಿದರು ಬಿವೈ ವಿಜಯೇಂದ್ರ.

ರಾಮಂದಿರ ನಿರ್ಮಾಣಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. 1992ರಲ್ಲಿ ನಡೆದ ಕರಸೇವೆಗೆ ಅತಿ ಹೆಚ್ಚು ಜನ ಹೋಗಿದ್ದೇ ಕರ್ನಾಟಕದಿಂದ. ಬಿ.ಎಸ್‌. ಯಡಿಯೂರಪ್ಪ ಅವರು, ರಾಮಚಂದ್ರೇ ಗೌಡ ಅವರು ಸಾರಥ್ಯ ವಹಿಸಿದ್ದರು. ರಾಮಜನ್ಮಭೂಮಿ ಉಸ್ತುವಾರಿ ತೆಗೆದುಕೊಂಡಿದ್ದವರೇ ಕರ್ನಾಟಕದವರು. ಉಡುಪಿಯ ಈಗಿನ ಪೇಜಾವರ ಶ್ರೀಗಳು ಟ್ರಸ್ಟಿಯಲ್ಲಿ ಒಬ್ಬರು.

ರಾಮನ ವಿಗ್ರಹಕ್ಕೆ ಕಲ್ಲು ಆಯ್ಕೆ ಆಗಿದ್ದೇ ಕರ್ನಾಟಕದಿಂದ, ಶಿಲ್ಪಿ ಅರುಣ್‌ ಯೋಗಿರಾಜ್ ಇಲ್ಲಿಯವರು. ಕಟ್ಟಡದ ಕೆಲಸದಲ್ಲಿ ಆರು ಶಿಲ್ಪಿಗಳು ಭಾಗಿಯಾಗಿದ್ದಾರೆ. ಪೂಜೆಗೆ ಇಲ್ಲಿನ ಶ್ರೀ ಗಂಧದ ಎಣ್ಣೆ ಬಳಸಲಾಗುತ್ತಿದೆ. ಸಾದರಹಳ್ಳಿಯ ಕಲ್ಲು ಬಳಕೆಯಾಗಿದೆ. ಇಡಗುಂಜಿಯ ಗಣೇಶ್ ಭಟ್ ಅವರೂ ಮೂರ್ತಿ ಕೆತ್ತನೆ ಮಾಡಿದ್ದಾರೆ.

ಅಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ವಿನಾಯಕನನ್ನು ಅರಳಿಸಿರುವುದು ಉ.ಕನ್ನಡದ ಕೆಕ್ಕೆರೆಯ ಶಿಲ್ಪಿ ವಿನಾಯಕ ಗೌಡ ಅವರು. ಕರ್ನಾಟಕದ ರಾಜೇಶ್ ಶೆಟ್ಟಿ ವಿದ್ಯುತ್ ಸಂಪರ್ಕ ಪೂರೈಸಿದ್ದಾರೆ. ಕೊಪ್ಪಳದ ರಾಮಮೂರ್ತಿ ಸ್ವಾಮಿ, ರಾಮ ಮಂದಿರದ ದ್ವಾರ ಕೆತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Ayodhya Rama Mandir : ರಾಮ ಶಿಲೆ ಸಿಕ್ಕ ಜಾಗದಲ್ಲೂ ಮಂದಿರ ನಿರ್ಮಾಣ; 22ರಂದೇ ಭೂಮಿ ಪೂಜೆ

ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರಿಗೆ ನೋವಾಗುವ ಭಯ

ದೇಶದಲ್ಲಿ ರಾಮ‌ ಜಪ ನಡೆಯುತ್ತಿದೆ. ಆದರೆ, ಕರ್ನಾಟಕದಲ್ಲಿ ಶ್ರೀಕಾಂತ್ ಪೂಜಾರಿ ಅವರನ್ನು ದುರುದ್ದೇಶಪೂರ್ವಕವಾಗಿ ಬಂಧನ ಮಾಡಲಾಗಿತ್ತು. ರಾಮ ಮಂದಿರ ಉದ್ಘಾಟನೆಯ ಆಹ್ವಾನವನ್ನು ಕೆಲವರು ತಿರಸ್ಕರಿಸುವ ಕೆಲಸ‌ ಮಾಡಲಾಗುತ್ತಿದೆ. ಎಲ್ಲದರಲ್ಲೂ ರಾಜಕಾರಣ ಹುಡುಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಯೋಧ್ಯೆಗೆ ಹೋದರೆ ಅಲ್ಪಸಂಖ್ಯಾತರ ಮನಸ್ಸಿಗೆ ನೋವಾಗುತ್ತೆ ಅನ್ನೋ ಭಾವನೆ ಕಾಂಗ್ರೆಸ್ ನವರದ್ದು ಎಂದು ಬಿವೈ ವಿಜಯೇಂದ್ರ ಹೇಳಿದರು.

ರಾಮಭಕ್ತರಿಗೆ ಯಾವುದೇ ಅಡ್ಡಿ, ಆತಂಕ ಆಗದಂತೆ ನೋಡಿಕೊಳ್ಳಬೇಕು ಎಂದು ನಾನು ರಾಜ್ಯ ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ಕೆಲವು ಕಾಂಗ್ರೆಸ್‌ ಮುಖಂಡರು ಅಪದ್ಧ ಹೇಳಿಕೆ ನೀಡುತ್ತಿದ್ದಾರೆ. ಕೋಲಾರದಲ್ಲಿ ಫ್ಲೆಕ್ಸ್ ಹರಿದುಹಾಕಲಾಗಿದೆ. ಇಂಥ ಘಟನೆಗಳು ಮರುಕಳಿಸಬಾರದು. ಯಾವುದೇ ಅಹಿತಕರ ಘಟನೆ ಆಗದಂತೆ ಕ್ರಮ‌ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ʻʻಕರ್ನಾಟಕದಲ್ಲಿ 160 ಪಿವಿಆರ್‌ಗಳಲ್ಲಿ ನೇರ ಪ್ರದರ್ಶನ ಇರಲಿದೆ. ಕನ್ನಡದ ನ್ಯೂಸ್ ಚಾನಲ್‌ಗಳು ನೇರ ಪ್ರಸಾರ ಮಾಡಲಿವೆʼʼ ಎಂದು ವಿವರಿಸಿದ ಅವರು, ಅದಕ್ಕಿಂತ ಮೊದಲು ಗ್ರಾಮದಲ್ಲಿರುವ ದೇವಸ್ಥಾನ ಸ್ವಚ್ಛಗೊಳಿಸುವಂತೆ ಮನವಿ ಮಾಡಿದರು. ಜ. 22ರಂದು ಸಂಜೆ ಐದು ದೀಪಗಳನ್ನು ಉತ್ತರಾಭಿಮುಖವಾಗಿ ಬೆಳಗಿಸುವಂತೆ ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅವರು ಸೆಲ್ಫಿ ವಿತ್ ನನ್ನ ರಾಮ ಪೋಸ್ಟರ್‌ಗೆ ಫೋಟೊ ತೆಗೆಸಿಕೊಂಡು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು. ʻʻಪರಿವರ್ತನಾ ಪಥ ರಾಮಮಂದಿರ ರಥʼ ಎಂಬ ಪುಸ್ತಕ ಬಿಡುಗಡೆ ಮಾಡಿದರು. ಜತೆಗೆ ರಾಮಮಂದಿರ ಫೋಟೋ ಹಾಗೂ ಅಕ್ಷತೆ ಹಂಚಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಶ್ರೀರಾಮ ಸಮಿತಿ ಸಂಚಾಲಕ ಜಗದೀಶ್ ಹಿರೇಮನಿ ಉಪಸ್ಥಿತರಿದ್ದರು.

Exit mobile version