Site icon Vistara News

Byatarayanapura: ಕೃಷ್ಣ ಭೈರೇಗೌಡ ವಿರುದ್ಧ ಗೆಲ್ಲಲು ಬಿಜೆಪಿ ರಣತಂತ್ರ: ಮೂವರು ಆಕಾಂಕ್ಷಿಗಳಿಂದ ಆಣೆ ಪ್ರಮಾಣ

byatarayanapura-BJP unitidedly resolves to fight against krishna byregowda

#image_title

ಬೆಂಗಳೂರು: ರಾಜ್ಯದ ಅತಿ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಬ್ಯಾಟರಾಯನಪುರದಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಸೆಣೆಸಲು ಬಿಜೆಪಿಯಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಸತ ಪ್ರಯತ್ನಿಸಿರುವ ಬಿಜೆಪಿ ಮುಖಂಡರು, ಮೂವರು ಆಕಾಂಕ್ಷಿಗಳ ನಡುವೆ ಸಂಧಾನ ನಡೆಸಿದ್ದಾರೆ.

ಕ್ಷೇತ್ರದಲ್ಲಿ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿ ಸೋಲುಂಡಿರುವ ಎ. ರವಿ ಈ ಬಾರಿಯೂ ಆಕಾಂಕ್ಷಿಯಾಗಿದ್ದಾರೆ. ಬಿಬಿಎಂಪಿ ಸದಸ್ಯರಾಗಿದ್ದ ಮುನೀಂದ್ರ ಕುಮಾರ್‌ ಈ ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎಬಿವಿಪಿ ಹಿನ್ನೆಲೆಯಿಂದ ಬಂದ ಹಾಗೂ ಕರ್ನಾಟಕ ವಿದ್ಯುತ್‌ ಕಂಪನಿ ಮಾಜಿ ಅಧ್ಯಕ್ಷ ತಮ್ಮೇಶ್‌ ಗೌಡ ಸಹ ಪ್ರಬಲ ಆಕಾಂಕ್ಷಿ.

ಎ. ರವಿ ಎಂದಿನಂತೆ ಕ್ಷೇತ್ರದಲ್ಲಿ ಸಂಚರಿಸಿ ಮತದಾರರ ಮನಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಮೂರು ಬಾರಿ ಸ್ಪರ್ಧಿಸಿ ಸೋಲುಂಡಿರುವ ಅನುಕಂಪದ ಆಧಾರದಲ್ಲಿ ಈ ಬಾರಿ ಜಯಗಳಿಸಲಿದ್ದು, ಈ ಬಾರಿ ಅವಕಾಶ ನೀಡಬೇಕು ಎಂದು ವರಿಷ್ಠರ ಮನವೊಲಿಸುವ ಪ್ರಯತ್ನದಲ್ಲಿದ್ದಾರೆ. ಆರ್‌. ಅಶೋಕ್‌ ಸೋದರ ಸಂಬಂಧಿಯೂ ಆಗಿರುವುದರಿಂದ ಟಿಕೆಟ್‌ ಸಿಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ.

ಬಿಬಿಎಂಪಿ ಸದಸ್ಯರಾಗಿದ್ದ ಮುನೀಂದ್ರ ಕುಮಾರ್‌ ಇತ್ತೀಚೆಗೆ ದಸರಾ ಸಂದರ್ಭದಲ್ಲಿ ಅದ್ಧೂರಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಆಹ್ವಾನಿಸಿ ಶಕ್ತಿ ಪ್ರದರ್ಶನ ಮಾಡಿದ್ದರು.

ತಮ್ಮೇಶ್‌ ಗೌಡ, ಕೇಸರಿ ಫೌಂಡೇಷನ್‌ ಮೂಲಕ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು, ಸುಮಾರು 50 ಸಾವಿರ ಜನರು ಸೇರಿದ್ದಂತಹ ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದಾರೆ. ಈ ಹಿಂದೆ ಎರಡು ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಕಾರಣರಾಗಿದ್ದ ಬಿ.ವೈ. ವಿಜಯೇಂದ್ರ ತಂಡದಲ್ಲಿದ್ದ ತಮ್ಮೇಶ್‌ ಗೌಡ, ಇತ್ತೀಚೆಗಷ್ಟೆ ನವದೆಹಲಿಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಮಾಡಿ ಬಂದಿದ್ದಾರೆ.

ಮೂವರೂ ಆಕಾಂಕ್ಷಿಗಳಿರುವ ಕಾರಣ ಕನಿಷ್ಠ ಇಬ್ಬರಿಗೆ ಟಿಕೆಟ್‌ ತಪ್ಪುವುದು ಖಾತ್ರಿ. ಈ ಸಂದರ್ಭದಲ್ಲಿ ಬಂಡಾಯದ ಗಾಳಿ ಬೀಸಿದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಭಾವಿಸಿ ಸಂಧಾನಕ್ಕೆ ವರಿಷ್ಠರು ಮುಂದಾಗಿದ್ದಾರೆ. ಕೊಡಿಗೇಹಳ್ಳಿ ಗೇಟ್ ಬಳಿಯ ಗುಂಡಾಂಜನೇಯ ಸ್ವಾಮಿ ದೇಗುಲದಲ್ಲಿ ಕಾರ್ಯಕ್ರಮವನ್ನು ಯಲಹಂಕ ಶಾಸಕ ಎಸ್‌.ಆರ್.‌ ವಿಶ್ವನಾಥ್‌ ಆಯೋಜಿಸಿದ್ದರು. ಸಂಸದ ಡಿ.ವಿ. ಸದಾನಂದಗೌಡರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮೂವರೂ ಆಕಾಂಕ್ಷಿಗಳನ್ನು ಒಟ್ಟಿಗೆ ನಿಲ್ಲಿಸಿ, ಈ ಬಾರಿ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದ್ರೂ ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ಎಲ್ಲರೂ ಪ್ರತಿಜ್ಞೆ ಮಾಡಿದರು.

ನಂತರ ಮಾತನಾಡಿದ ಎಸ್‌.ಆರ್‌. ವಿಶ್ವನಾಥ್‌, ಬ್ಯಾಟರಾಯನಪುರ ಕ್ಷೇತ್ರದಲ್ಲಿ ಯಾರಿಗೇ ಟಿಕೆಟ್ ಕೊಟ್ರೂ ಎಲ್ರೂ ಬೆಂಬಲಿಸಬೇಕು. ಇಲ್ಲಿ ಮೂರು ಜನ‌ ಪ್ರಭಾವಿಗಳು ಆಕಾಂಕ್ಷಿಗಳು, ಇವ್ರು ಮೂರು ಶಕ್ತಿಗಳು. ಬ್ರಹ್ಮ ವಿಷ್ಣು ಮಹೇಶ್ವರರೂ ಸಹ ಮೂರು ಶಕ್ತಿಗಳು. ಆದ್ರೆ ಮಹಿಷಾಸುರನನ್ನು ಸಂಹಾರ‌ ಮಾಡಲು ಆಗಲಿಲ್ಲ ಅವರಿಂದ.

ಈ ಮೂವರೂ ಒಂದಾಗಿ ಚಾಮುಂಡೇಶ್ವರಿಗೆ ತಮ್ಮ ಶಕ್ತಿ ಧಾರೆ ಎರೆದು ಮಹುಷಾಸುರನ‌ ಹತ ಮಾಡಿದರು. ಇಲ್ಲಿ ನಾವೂ ಕೂಡಾ ಒಂದಾಗಿ ಕಾಂಗ್ರೆಸ್ ಅನ್ನು ಹತ ಮಾಡಬೇಕು. ಹತ ಅಂದ್ರೆ ಬೇರೆ ಅರ್ಥ ಬೇಡ, ಕಾಂಗ್ರೆಸ್ ನ ಸೋಲಿಸಬೇಕು, ಬಿಜೆಪಿ ಗೆಲ್ಲಿಸಬೇಕು ಅಂತರ್ಥ.

ಬ್ಯಾಟರಾಯನಪುರ ಪುರದಲ್ಲಿ ಬಿಜೆಪಿ ಶಾಸಕರು ಇಲ್ಲ. ಲೋಕಸಭೆಯಲ್ಲಿ ಹೆಚ್ಚು ಮತ ಪಡೆಯುತ್ತೇವೆ, ಆದರೆ ವಿಧಾನಸಭೆ ಚುನಾವಣೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗ್ತಿದೆ. ಹತ್ತಿರ ಹತ್ತಿರ ಬಂದು ನಾವು ಸೋಲುತ್ತಿದ್ದೇವೆ. ಮೊದಲು ಇಲ್ಲಿ ಕರೆದು ಟಿಕೆಟ್ ಕೊಟ್ಟರು ಬೇಡ ಅಂತಿದ್ರು, ಈಗ ಹಾಗಲ್ಲ. ಆಕಾಂಕ್ಷಿಗಳು ಇರೋದು ತಪ್ಪಲ್ಲ ಆದರೆ ಒಗ್ಗಟ್ಟು ಇರಬೇಕು. ಎಲ್ಲಾರೂ ಒಂದಾಗಿ ಬಿಜೆಪಿಗೆ ಕೆಲಸ ಮಾಡಿ, ನಮ್ಮದೇ ಸರ್ಕಾರ ಬರುತ್ತದೆ.

ಇದನ್ನೂ ಓದಿ: Srinivasa Kalyanotsava : ಬ್ಯಾಟರಾಯನಪುರದಲ್ಲಿ ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ; ತಮ್ಮೇಶ್ ಗೌಡ ನೇತೃತ್ವ

ಕಾಂಗ್ರೆಸ್ ತಿಂಗಳಿಗೆ ಎರಡು ಸಾವಿರ ಕೊಡ್ತಾರಂತೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಏನ್ ಮಾಡಿದ್ರು? ಆ ಪಾಂಪ್ಲೆಂಟ್ ಹಂಚೋನಿಗೆ ಇವರು ಐದುನೂರು ಕೊಟ್ಟಿದ್ದಾರೊ ಇಲ್ಲವೋ ಗೊತ್ತಿಲ್ಲ. ಇವರು ಜನರಿಗೆ ಎರಡು ಸಾವಿರ ನೀಡ್ತಾರಾ? ಎಂದರು.

ಸಂಸದ ಡಿ.ವಿ. ಸದಾನಂದಗೌಡ ಮಾತನಾಡಿ, ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಒಳ್ಳೆಯ ಬೆಂಬಲ ಸಿಕ್ತಿದೆ. ಈ ಸಲ ನಾವು ಗೆದ್ದು ಅಧಿಕಾರ ಹಿಡೀತೇವೆ. ಕೇಂದ್ರದ ವರಿಷ್ಠರು ಅಭ್ಯರ್ಥಿ ನಿರ್ಧಾರ ಮಾಡ್ತಾರೆ. ಎರಡು ಹಂತದ ಸರ್ವೆ ಕಾರ್ಯ ಮುಗಿದಿದೆ. ಮೂರನೇ ಸರ್ವೆ ಮಾಡ್ತಿದಾರೆ. ಕೋರ್ ಕಮಿಟಿ ಸದಸ್ಯರಾದ ನಮಗೆ ವರಿಷ್ಠರಿಂದ ಸೂಚನೆ ಇದೆ, ನಾವ್ಯಾರೂ ಅಭ್ಯರ್ಥಿ ಹೆಸರು ಹೇಳುವಂತಿಲ್ಲ. ಯಾರು ಗೆಲ್ತಾರೆ ಅಂತ ಸರ್ವೆ ಹೇಳುತ್ತೋ ಅವರೇ ಅಭ್ಯರ್ಥಿ ಎಂದರು.

ಮೂವರು ಆಕಾಂಕ್ಷಿಗಳೂ ಮಾತನಾಡಿ, ತಾವು ಒಗ್ಗಟ್ಟಿನಿಂದ ಸೆಣೆಸುತ್ತೇವೆ ಎಂದರು. ಈ ಬಾರಿ ಬಿಜೆಪಿಯ ಶಾಸಕರೊಬ್ಬರು ಬ್ಯಾಟರಾಯನಪುರದಿಂದ ವಿಧಾನಸೌಧಕ್ಕೆ ತೆರಳಬೇಕು ಎನ್ನುವುದೇ ಎಲ್ಲರ ಗುರಿ ಎಂದರು.

Exit mobile version