ಬೆಂಗಳೂರು: ಅಧೀಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಘೋಷಣೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ನಗರ ಪ್ರದೇಶದಲ್ಲಿ ನಾಯಿಗಳ ರೂಮ್‌ನಲ್ಲಿ ಎಸಿಗೆ ಕರೆಂಟ್ ಇದ್ದರೆ ಅತ್ತ ರೈತನ ಪಂಪ್‌ಸೆಟ್‌ಗಳಿಗೆ ಕರೆಂಟ್ ಇಲ್ಲದೆ ಬವಣೆ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರವಿದೆಯಲ್ಲ ಮಾಡುತ್ತಾರೆಯೇ? ಜನರಿಗೆ ಟೋಪಿ ಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಹೋಗಿ ಕ್ಯಾಂಪೇನ್ ಮಾಡಿದರು, ಏನಾಯಿತು ಅಲ್ಲಿ? ಊರಿನಲ್ಲಿ ನಡೆದಿಲ್ಲ ಎಂದರೆ ಪರರ ಊರಲ್ಲಿ ನಡೆಯುತ್ತಾ?
ರೈತರಿಗೆ 8 ಗಂಟೆ 3 ಫೇಸ್ ಕರೆಂಟ್ ಕೊಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಬಗ್ಗೆ ಆ ಯಮ್ಮ ಮಾತನಾಡಿಲ್ಲ. ರೈತರ ಬಗ್ಗೆ ಅವರಿಗೆ ಗೊತ್ತೆ ಇಲ್ಲ. ಕನಿಷ್ಠ ರೈತರ ಕಷ್ಟದ ಬಗ್ಗೆ ಡಿ.ಕೆ. ಶಿವಕುಮಾರ್ ಆದರೂ ಹೇಳಿ ಕೊಡಬೇಕಿತ್ತು. ಸಿಟಿಯಲ್ಲಿರುವ ಮನೆಗೆ ಕರೆಂಟ್ ಕೊಟ್ಟರೆ ಸಾಕು, ರೈತರ ಮನೆಯಲ್ಲಿ ದೀಪ ಹಚ್ಚಬಾರದಾ? ಸಿಟಿಯಲ್ಲಿ ನಾಯಿ ಏರ್ ಕಂಡಿನಷ್ಡ್ ರೂಂಗೆ ಕರೆಂಟ್ ಇದೆ, ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಇಲ್ಲ.
ಜನರಿಗೆ ಉಡಾಫೆ ಘೋಷಣೆ ಕೊಡುತ್ತಿದ್ದಾರೆ ಎಂದರೆ, ಕಾಂಗ್ರೆಸ್‌ನವರು ಈಗಿನ 78 ರಿಂದ 50ಕ್ಕೆ ಹೋಗುತ್ತಾರೆ. ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಇದೇ ಘೋಷಣೆ ಜಾರಿ ಮಾಡಲಿ. ರಾಜ್ಯದಲ್ಲಿ ಕಾಂಗ್ರೆಸ್ ಇದ್ದರೂ ದರಿದ್ರ ಲಕ್ಷ್ಮಿನೆ, ಬಿಜೆಪಿ ಇದ್ರೂ ದರಿದ್ರ ಲಕ್ಷ್ಮಿನೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ಅಷ್ಟಲಕ್ಷ್ಮಿಯರು ಬರುತ್ತಾರೆ ಎಂದರು.
ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಪ್ರವಾಸ ಮಾಡುವ ಕುರಿತು ಪ್ರತಿಕ್ರಿಯಿಸಿ, ನಾವು ಮನೆಯವರು. ಹೊರಗಿನವರು ಬರುತ್ತಾರೆ, ಹೋಗುತ್ತಾರೆ. ಮನೆಯಲ್ಲಿದ್ದವರು ನಾವು, ದೇವೆಗೌಡರು. ನಮಗೆ ಯಾರೂ ಹೈಕಮಾಂಡ್ ಇಲ್ಲ. ನಾವು ಇಲ್ಲೇ ಇರುತ್ತೇವೆ, ಕೆರೆಯ ನೀರನ್ನು ಕೆರೆಗೆ ಚೆಲ್ಲುತ್ತೇವೆ ಎಂದರು.
ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯಿಸಿ, ದೇವರು ಹೇಳುವ ಮುನ್ನವೇ ನಾನು ಹೇಳಿದ್ದೆ. ಸಿದ್ದರಾಮಯ್ಯನವರಿಗೆ 20 ವರ್ಷದಿಂದ ಜಾತಕ ಹೇಳಿ ಬಾದಾಮಿಗೆ ನಾನು ಕರೆದುಕೊಂಡು ಹೋಗಿದ್ದೆ. ಚಿಕ್ಕಯ್ಯಮ್ಮನವರು ಹೇಳೋಕೆ ಮುಂಚೆನೇ ನಾನು ಹೇಳಿದ್ದೆ. ಕೋಲಾರದಲ್ಲಿ ಸಿದ್ದರಾಮಯ್ಯ ನಿಂತರೆ ಕಡಿಮೆ ಮತ ತೆಗೆದುಕೊಳ್ಳುತ್ತಾರೆ. ಅಲ್ಲಿ ಸಿದ್ದರಾಮಯ್ಯ ಅವರಿಗೆ ಎರಡನೇ ಸ್ಥಾನ. ವರ್ತೂರು ಪ್ರಕಾಶ್ ಅಲ್ಲಿ ಲೋಕಲ್. ವರ್ತೂರು ಪ್ರಕಾಶ್ 2ನೇ ಸ್ಥಾನ, ಸಿದ್ದರಾಮಯ್ಯ ಮೂರನೇ ಸ್ಥಾನ ಬರುತ್ತಾರೆ. ವರ್ತೂರು ಪ್ರಕಾಶ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಆಗುತ್ತದೆ. ವರ್ತೂರು ಪ್ರಕಾಶ್ ಭಂಡ, ಅವನು ಸಿದ್ದರಾಮಯ್ಯ ಅವರನ್ನು ಎದುರಿಸುತ್ತಾನೆ ಎಂದರು.
ಸ್ಯಾಂಟ್ರೊ ರವಿ ಪ್ರಕರಣದ ಕುರಿತು ಮಾತನಾಡಿ, ಯಾವ ಯಾವ ಅಧಿಕಾರಿ ವರ್ಗಾವಣೆ ಆಗಿದೆಯೋ ಅವರನ್ನು ಅಮಾನತು ಮಾಡಿ. ಮಂತ್ರಿಗಳಿಂದ ರಾಜೀನಾಮೆ ತೆಗೆದುಕೊಳ್ಳಿ. ಸಚಿವರು ಸ್ಟೇ ತೆಗೆದುಕೊಂಡಿರುವುದನ್ನು ವೆಕೆಟ್ ಮಾಡಿಸಿ. ಆ ಸಿಡಿ ರಹಸ್ಯ ಏನಿದೆ ಬಯಲು ಮಾಡಿ ಎಂದು ಉತ್ತರಿಸಿದರು.
ಕೋಲಾರದಲ್ಲಿ ಜೆಡಿಎಸ್ ಬಿಜೆಪಿ ಒಳಮೈತ್ರಿ ಎಂಬ ಚರ್ಚೆ ವಿಚಾರಕ್ಕೆ ಮಾತನಾಡಿ, ಲೆಹರ್ ಸಿಂಗ್ ಗೆಲ್ಲಿಸುವುದಕ್ಕೆ ಒಳ ಒಪ್ಪಂದ ಮಾಡಿಕೊಂಡವರು ಯಾರು? ಒಳ ಒಪ್ಪಂದ ಮಾಡಿಕೊಂಡು ಲೆಹರ್ ಸಿಂಗ್ ಗೆಲ್ಲಿಸಿದ್ದು ಯಾರು? ಒಬ್ಬ ಮಾರ್ವಾಡಿ ಗೆಲ್ಲಿಸುವುದಕ್ಕೆ ಕರ್ನಾಟಕದ ಕುಪೇಂದ್ರ ರೆಡ್ಡಿಯನ್ನು ಸೋಲಿಸಿದಿರಿ. ನಾವು ರೈತರ ಮಕ್ಕಳು ಒಪ್ಪಂದ ಮಾಡಿಕೊಂಡರೆ ಮಾಡಿಕೊಂಡಿದ್ದೇವೆ ಎಂದು ಹೇಳುತ್ತೇವೆ. ಗುಬ್ಬಿ ವಾಸು, ಕೋಲಾರದ ಶ್ರೀನಿವಾಸ್ ಗೌಡರಿಗೆ ಹಣ ಕೊಟ್ಟಿದ್ದು ಯಾರು? ಎಂದು ಮರುಪ್ರಶ್ನೆ ಮಾಡಿದರು.
ಇದನ್ನೂ ಓದಿ | ಕಾಸು ಕೊಡದಿದ್ರೆ ಜನ ವೋಟ್ ಮಾಡಲ್ಲ: ವರ್ತೂರು ಪ್ರಕಾಶ್ ವಿವಾದಾತ್ಮಕ ಹೇಳಿಕೆ