ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಮರ ವಿಜ್ಞಾನ ಸಂಸ್ಥೆಯ ವಸತಿ ಗೃಹಗಳ ಆವರಣದಲ್ಲಿ ಬುಧವಾರ ಬೆಳಗ್ಗೆ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಬಳಿಕ, ಉತ್ತರಾದಿ ಮಠಕ್ಕೆ ತೆರಳಿ ಭಗವಂತನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು, “ರಾಜ್ಯದಲ್ಲಿ ಬಿಜೆಪಿ ಕಳೆದ ಮೂರೂವರೆ ವರ್ಷಗಳಲ್ಲಿ ಅಭಿವೃದ್ಧಿಯ ಮನ್ವಂತರವನ್ನೇ ಸೃಷ್ಟಿಸಿದೆ. ಪ್ರಧಾನಿ ಮೋದಿ ಅವರ ದಕ್ಷ ನಾಯಕತ್ವದಲ್ಲಿ ಭಾರತ ಮತ್ತು ಕರ್ನಾಟಕ ಪ್ರಗತಿಯ ದಾಪುಗಾಲು ಇಡುತ್ತಿವೆ” ಎಂದರು.
ಕಾಂಗ್ರೆಸ್ ಪಕ್ಷ ಈಗಾಗಲೇ ನಿರ್ನಾಮವಾಗಿದೆ. ಅದು ಈಗ ತನ್ನ ಅಪಾಯಕಾರಿ ಪ್ರಣಾಳಿಕೆ ಮೂಲಕ ಸೆಲ್ಫ್ ಗೋಲ್ ಹೊಡೆದುಕೊಂಡು, ತಾನೇ ಕಾಂಗ್ರೆಸ್ ಮುಕ್ತ ವಾತಾವರಣ ಸೃಷ್ಟಿಸಿದೆ. ಈ ಬಾರಿಯ ಚುನಾವಣೆಯ ನಂತರ ಆ ಪಕ್ಷದ ಹೆಸರೂ ಉಳಿದುಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ | Modi in Karnataka: ಮೋದಿಗೆ ತಲೆ ಸವರಿ ಆಶೀರ್ವದಿಸಿದ ಪದ್ಮಶ್ರೀ ಪುರಸ್ಕೃತರು; ಸುಕ್ರಿ ಬೊಮ್ಮಗೌಡ ಹೇಳಿದ್ದೇನು?
ಕಾಂಗ್ರೆಸ್ ಪ್ರಣಾಳಿಕೆ ಜನರ ನಂಬಿಕೆಗಳಿಗೆ ಧಕ್ಕೆ ತರುವಂತಿದೆ. ಜನರು ಬಿಜೆಪಿ ಪರ ಒಲವು ಹೊಂದಿದ್ದು, ನಮಗೆ ಸ್ಪಷ್ಟ ಜನಾದೇಶ ಸಿಗಲಿದೆ. ಇದೇ 6ರಂದು ಮೋದಿಯವರು ಮಲ್ಲೇಶ್ವರದಲ್ಲಿ ಕೂಡ ರೋಡ್ ಶೋ ನಡೆಸಲಿದ್ದಾರೆ. ಇದರಲ್ಲಿ ಕ್ಷೇತ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.