ನವದೆಹಲಿ: ಕಾವೇರಿ ಜಲ ವಿವಾದದಲ್ಲಿ (Cauvery Dispute) ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ಕಳೆದ ಆಗಸ್ಟ್ 26ರಿಂದ ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water regulation Committee) ಪ್ರತಿ ಬಾರಿಯೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡುತ್ತಿದೆ. ಗುರುವಾರ (ನವೆಂಬರ್ 23)ರಂದು ನಡೆದ ಸಭೆಯಲ್ಲೂ ಇದೇ ಚಾಳಿಯನ್ನು ಮುಂದುವರಿಸಲಾಗಿದೆ. ಈ ಬಾರಿ ಪ್ರತಿ ದಿನ 2700 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ.
ಅಕ್ಟೋಬರ್ 30ರಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ನವೆಂಬರ್ 1ರಿಂದ 15ರವರೆಗೆ ಪ್ರತಿ ದಿನ 2600 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಲಾಗಿತ್ತು. ಬಳಿಕ ನಡೆದ ಕಾವೇರಿ ನೀರು ನಿರ್ವಹಣಾ ಆಯೋಗ (Cauvery Water Management Authority) ಈ ಆದೇಶವನ್ನು ಎತ್ತಿ ಹಿಡಿದುದಲ್ಲದೆ, ಅದನ್ನು ನವೆಂಬರ್ 23ರವರೆಗೂ ವಿಸ್ತರಿಸಿತ್ತು.
ನವೆಂಬರ್ 23ರಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯು ನವೆಂಬರ್ ತಿಂಗಳ ಉಳಿದ ಅವಧಿಗೆ ಪ್ರತಿ ದಿನ 2600 ಕ್ಯೂಸೆಕ್ ಮತ್ತು ಡಿಸೆಂಬರ್ ತಿಂಗಳ ಪೂರ್ತಿ 2700 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೂಚಿಸಿತು. ಈ ಆದೇಶವನ್ನು ಮುಂದೆ ಕಾವೇರಿ ನೀರು ಪ್ರಾಧಿಕಾರ ದೃಢೀಕರಿಸಬೇಕಾಗಿದೆ.
ಗುರುವಾರ ನಡೆದ ಸಭೆಯಲ್ಲಿ ಏನೇನಾಯಿತು?
ನವೆಂಬರ್ 23ರಂದು ನಡೆದದ್ದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯ 90ನೇ ಸಭೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಭೆಯಲ್ಲಿ ಕರ್ನಾಟಕ ಕೆಲವು ಅಂಶಗಳನ್ನು ಪ್ರಸ್ತಾಪಿಸಿತು.
ಕರ್ನಾಟಕ ಹೇಳಿದ್ದೇನು?
1) 22.11.2023 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು 52.24% ಇರುತ್ತದೆ. 2) IMD ಪುಕಾರ, ಅಕ್ಟೋಬರ್ 1 ರಿಂದ ತಮಿಳುನಾಡಿನಲ್ಲಿ ಮಳೆಯು ಸಾಮಾನ್ಯವಾಗಿದೆ, ಆದ್ದರಿಂದ ಈಶಾನ್ಯ ಮಾನ್ಸೂನ್ ಸಮಯದಲ್ಲಿ ಕಾವೇರಿ ಡಲ್ಮಾ ಪುದೇಶದಲ್ಲಿ ಮತ್ತು ಮೆಟ್ಟೂರಿನ ಕೆಳಗಿನ ಪುದೇಶಗಳಲ್ಲಿ ತೃಪ್ತಿಕರ ಮಳೆಯ ಪರಿಸ್ಥಿತಿ ಲಭ್ಯವಿರುತ್ತದೆ ಎಂಬ ಸೂಚನೆಗಳಿವೆ.
3) ತಮಿಳುನಾಡಿನ ಕುರುವಾಯಿ ಬೆಳೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಟಾವಿಗೆ ಬಂದಿದ್ದು, ಈ ಬೆಳೆಗೆ ನೀರಿನ ಅವಶ್ಯಕತೆ ಇರುವುದಿಲ್ಲ ಮತ್ತು ಸಾಂಬಾ ಬೆಳ ಕೊಯ್ತು. ಹಂತವನ್ನು ತಲುಪಿದ್ದು, ಡಿಸೆಂಬರ್ 1 ನೇ ವಾರದಲ್ಲಿ ಕೊನೆಗೊಳ್ಳಲಿದೆ.
4) ಕರ್ನಾಟಕದ 4 ಜಲಾಶಯಗಳಿಗೆ ಒಳಹರಿವು ಸ್ಥಗಿತಗೊಂಡಿದೆ ಮತ್ತು 21.11.2023 ರಂತೆ ಕರ್ನಾಟಕದ 4 ಜಲಾಶಯಗಳಲ್ಲಿ ಪ್ರಸ್ತುತ ಸಂಗ್ರಹಣೆಯು ನೀರಾವರಿ, ಕುಡಿಯುವ ಮತ್ತು ಇತರ ಅಗತ್ಯಗಳ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವುದಿಲ್ಲ.
5) ಅನಿಯಂತ್ರಿತ ಜಲಾನಯನ ಪ್ರದೇಶದಿಂದ ಉಂಟಾಗುವ ಕೊಡುಗೆಯನ್ನು ಬಿಳಿಗುಂಡ್ಲು ಹೊರತುಪಡಿಸಿ ತಲುಪಲು ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ.
6) ಕರ್ನಾಟಕದ ಜಲಾಶಯದಿಂದ ಯಾವುದೇ ನೀರು ಬಿಡುಗಡೆಗ ನಿರ್ದೇಶನವನ್ನು ನೀಡಬಾರದು.
ತಮಿಳುನಾಡಿನ ವಾದವೇನಾಗಿತ್ತು?
ಮುಂದಿನ 30 ದಿನಗಳ ಕಾಲ ಕರ್ನಾಟಕವು 5000 ಕ್ಯೂಸೆಕ್ ನೀರು ಬಿಡಬೇಕು ಎಂದು ತಮಿಳುನಾಡು ಒತ್ತಾಯಿಸಿತು.
ನಿರ್ವಹಣಾ ಸಮಿತಿಯ ಅಂತಿಮ ಆದೇಶವೇನು?
ಅಂತಿಮವಾಗಿ, ನವೆಂಬರ್ 2023 ರ ಉಳಿದ ಅವಧಿಗೆ ಕರ್ನಾಟಕವು 2600 ಕ್ಯೂಸೆಕ್ಸ್ ನೀರು ಹರಿವಿನ ಖಚಿತಪಡಿಸಿಕೊಳ್ಳಬೇಕು ಮತ್ತು 2023 ರ ಡಿಸೆಂಬರ್ ತಿಂಗಳಿಗೆ ಗೌರವಾನ್ವಿತ ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ CWDT ಯ ಆದೇಶದ ಪ್ರಕಾರ ನಿಗದಿತ ಪುಮಾಣದ ಹರಿವಿನನ್ನು ಖಚಿತಪಡಿಸಿಕೊಳ್ಳಬೇಕೆಂದು CWRC ಯು ಶಿಫಾರಸು ಮಾಡಿದ (ಇದು 2700 ಕ್ಯೂಸೆಕ್ಸ್ ಡಿಸೆಂಬರ್ 2023 ರ ಅವಧಿಗೆ ಅನ್ವಯಿಸುತ್ತದೆ) ಎಂದು ತಿಳಿಸಲಾಯಿತು.
ಇದನ್ನೂ ಓದಿ : Cauvery Dispute : ರಾಜ್ಯಕ್ಕೆ ಮತ್ತೆ ಕಾವೇರಿ ಜಲಾಘಾತ; ಇನ್ನು 20 ದಿನ ನಿರಂತರ ನೀರು ಹರಿಸಲು ಪ್ರಾಧಿಕಾರ ಸೂಚನೆ
ಆಗಸ್ಟ್ 26ರಿಂದ ನಿರಂತರ ಆದೇಶ
ಕಾವೇರಿ ನೀರು ನಿಯಂತ್ರಣ ಸಮಿತಿಯು ಆಗಸ್ಟ್ 26ರಂದು ನೀಡಿದ ಅದೇಶದಲ್ಲಿ ಆಗಸ್ಟ್ 29ರಿಂದ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಬಿಡಲು ಸೂಚಿಸಿತ್ತು. ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಿತ್ತು. ಸೆಪ್ಟೆಂಬರ್ 26ರಂದು ಇದೇ ಆದೇಶವನ್ನು ರಿಪೀಟ್ ಮಾಡಿತ್ತು. ಅಕ್ಟೋಬರ್ 12ರಂದು ನೀಡಿದ ಆದೇಶದಲ್ಲಿ ಈ ಪ್ರಮಾಣವನ್ನು 3000ಕ್ಕೆ ಇಳಿಸಿತ್ತು. ಐದನೇ ಮೀಟಿಂಗ್ನಲ್ಲಿ ಹರಿಸಬೇಕಾದ ನೀರಿನ ಪ್ರಮಾಣವನ್ನು 2600 ಕ್ಯೂಸೆಕ್ಗೆ ಇಳಿಸಿತ್ತು. ಮುಂದೆ ಅಕ್ಟೋಬರ್ 30ರಂದು ನಡೆದ ಸಭೆ ಮತ್ತು ಪ್ರಾಧಿಕಾರದ ಸಭೆಯಲ್ಲಿ ನವೆಂಬರ್ 23ರವರೆಗೆ 2600 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಸೂಚಿಸಲಾಗಿತ್ತು. ಇದೀಗ ನವೆಂಬರ್ 23ರಂದು ನಡೆದ ಸಿಡಬ್ಲ್ಯುಆರ್ಸಿ ಸಭೆಯಲ್ಲಿ ಡಿಸೆಂಬರ್ ಕೊನೆಯವರೆಗೂ 2700 ಕ್ಯೂಸೆಕ್ ನೀರು ಬಿಡುಗಡೆಗೆ ಸೂಚಿಸಲಾಗಿದೆ.