Site icon Vistara News

Cauvery Dispute : ಬಿಜೆಪಿ ರಾಜಕೀಯ ಬಿಟ್ಟು ಕೇಂದ್ರಕ್ಕೆ ಒತ್ತಡ ಹೇರಲಿ: ಡಿಕೆಶಿ, ದಾರಿ ತಪ್ಪಿಸೋದು ನಿಲ್ಲಿಸಲಿ: ಬೊಮ್ಮಾಯಿ

DK Shivakumar- Basavaraja Bommai cauvery

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery dispute) ಸಂಬಂಧಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ವಾಗ್ಯುದ್ಧ ನಡೆಸಿದ್ದಾರೆ. ಬಿಜೆಪಿಯವರು ರಾಜಕೀಯ ಮಾಡುವುದು ಬಿಟ್ಟು ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಡಿ.ಕೆ ಶಿವಕುಮಾರ್‌ ಹೇಳಿದ್ದರೆ, ಡಿ.ಕೆ.ಶಿವಕುಮಾರ್‌ ದಾರಿ ತಪ್ಪಿಸುವ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ಕೊಡಿಸಲಿ: ಡಿಕೆಶಿ ಸವಾಲು

“ಕಾವೇರಿ ವಿಚಾರವಾಗಿ ವಿರೋಧ ಪಕ್ಷ ಬಿಜೆಪಿ ಕೇವಲ ರಾಜಕೀಯ ಮಾಡುತ್ತಿದೆ. ಅವರಿಗೆ ರಾಜ್ಯದ ಹಿತದ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದಿಂದ ಮೇಕೆದಾಟು ಆಣೆಕಟ್ಟು (Mekedatu Dam) ನಿರ್ಮಾಣಕ್ಕೆ ಅನುಮತಿ ಕೊಡಿಸಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲೆಸೆದರು. ಕೆಪಿಸಿಸಿ ಕಚೇರಿ ಹಾಗೂ ವಿಧಾನಸೌಧದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಉತ್ತರಿಸಿದರು.

“ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಕರ್ನಾಟಕ ತನ್ನ ಜಾಗದಲ್ಲಿ ಆಣೆಕಟ್ಟುಕೊಳ್ಳಲು ಅಡ್ಡಿಪಡಿಬೇಡಿ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಬಿಜೆಪಿ ನಾಯಕರು ರಾಜಕೀಯ ಬಿಟ್ಟು ರಾಜ್ಯದ ಹಿತಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ. ಅವರಿಗೆ ರಾಜ್ಯದ ಹಿತ ಕಾಯುವ ಬದ್ಧತೆ ಇದ್ದರೆ ಕಾವೇರಿ, ಮಹಾದಾಯಿ ಹಾಗೂ ಕೃಷ್ಣಾ ನದಿ ವಿಚಾರವಾಗಿ ದೆಹಲಿಗೆ ಹೋಗಿ ಕೇಂದ್ರದ ಬಳಿ ಚರ್ಚೆ ಮಾಡಲಿ” ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಗಲಭೆ ಮಾಡಲು ಸರ್ಕಾರವೇ ಮುಕ್ತ ಅವಕಾಶ ನೀಡಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಕಾನೂನು ಕೈಗೆತ್ತಿಕೊಳ್ಳುವ ಯಾರೊಬ್ಬರನ್ನು ನಾವು ಸಹಿಸಿಕೊಳ್ಳುವುದಿಲ್ಲ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಆದ್ಯತೆ. ಈ ಘಟನೆ ಹಿಂದೆ ಯಾರೇ ಇದ್ದರೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಯಾರೊಬ್ಬರು ಪ್ರಚೋದನೆ ನೀಡುವ, ಕಲ್ಲು ತೂರಾಟ ಮಾಡಲು ಮುಂದಾಗಬಾರದು. ಇದಕ್ಕೆ ನಮ್ಮ ಸರ್ಕಾರ ಅವಕಾಶ ನೀಡವುದಿಲ್ಲ. ನಮ್ಮ ರಾಜ್ಯ ಶಾಂತಿಯ ತೋಟವಾಗಿರಬೇಕು. ಕಾನೂನು ಎಲ್ಲರಿಗೂ ಒಂದೇ” ಎಂದು ತಿಳಿಸಿದರು.

ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳ ಸಂಖ್ಯೆಯ ಪತ್ರ ಹರಿದಾಡುತ್ತಿರುವ ಬಗ್ಗೆ ಕೇಳಿದಾಗ, “ಯಾರೋ ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರ ಜೊತೆ ನಾವೆಲ್ಲ ಕೂತು ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ಡಿಕೆಶಿ ದಾರಿ ತಪ್ಪಿಸುತ್ತಿದ್ದಾರೆ : ಬಸವರಾಜ ಬೊಮ್ಮಾಯಿ

ಕಾವೇರಿ ನದಿಗೆ ಬರುತ್ತಿರುವ ಒಳ ಹರಿವಿನ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಡಿ.ಕೆ ಶಿವಕುಮಾರ್ ಅವರು ಅತಿ ಹೆಚ್ಚು ನೀರು ಬರುತ್ತಿದೆ ಅಂತ ಹೇಳಿದ್ದಾರೆ. ಆದರೆ, ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಸುಮಾರು 2000 ಕ್ಯೂಸೆಕ್ಸ್ ನೀರು ಬರುತ್ತಿದೆ ಅಂತ ಹೇಳಿದ್ದಾರೆ. ಡಿಕೆಶಿವಕುಮಾರ್ ಅವರು ಯಾಕೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಯಾಕೆ ಇಷ್ಟೊಂದು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಡಿಸಿಎಂ ಯಾವಾಗಲೂ ಬ್ರಾಂಡ್ ಬೆಂಗಳೂರು ಅಂತ ಭಾಷಣ ಮಾಡಿದರೆ ಸಾಲದು, ಬೆಂಗಳೂರಿಗೆ ಕಾವೇರಿ ನೀರು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಬ್ಯಾಡ್ ಬೆಂಗಳೂರು ಆಗುತ್ತದೆ ಎಂದರು.

ಸಂಕಷ್ಟ ಸೂತ್ರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2018 ಕ್ಕೂ ಮೊದಲು ಸಂಕಷ್ಟ ಸೂತ್ರ ಜಾರಿಗೊಳಿಸಲು ಈ ಪರಿಸ್ಥಿತಿ ಇರಲಿಲ್ಲ. ಸಿಡಬ್ಲುಎಂಎ ಬಂದ ಮೇಲೆ ನೀರಿನ ಸಮಸ್ಯೆ ಈಗ ಬಂದಿದೆ. ಹೀಗಾಗಿ ಸಂಕಷ್ಟ ಸೂತ್ರ ಜಾರಿ ಮಾಡುವುದು ಅಗತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ: DK Shivakumar : ಪೂಜನೀಯ ದೇವೇಗೌಡರೇ ನಿಮ್ಮ ಮಗನ್‌ ಕಥೆ ಏನು? ; ಮಿಸ್ಟರ್‌ ಡಿಕೆ‌ ಶಿವಕುಮಾರ್ ಹೇಳಿಕೆಗೆ ಕೌಂಟರ್!

Exit mobile version