Site icon Vistara News

Cauvery Dispute : ನಾಳೆ ಇಲ್ಲಿ ಕರ್ನಾಟಕ ಬಂದ್‌, ಅಲ್ಲಿ ಕಾವೇರಿ ಪ್ರಾಧಿಕಾರ ಸಭೆ; ಸಿಗುತ್ತಾ ನ್ಯಾಯ?

Cauvery meeting and Bandh

ನವದೆಹಲಿ/ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery Dispute) ಪ್ರತಿಭಟಿಸಿ, ರಾಜ್ಯಕ್ಕೆ ನ್ಯಾಯ ಕೋರಿ ಕನ್ನಡಪರ ಸಂಘಟನೆಗಳ (Kannada Organizations) ಕರೆಯಂತೆ ಶುಕ್ರವಾರ (ಸೆ. 29) ಕರ್ನಾಟಕ ಬಂದ್‌ (Karnataka Bandh) ನಡೆಯಲಿದೆ. ರಾಜ್ಯದ ಜನರು ಇದನ್ನು ಭಾವನಾತ್ಮಕವಾಗಿ ಸ್ವೀಕರಿಸಿರುವುದರಿಂದ ಬಂದ್‌ ಯಶಸ್ವಿಯಾಗುವ ಸಾಧ್ಯತೆ ಇದೆ. ಇದೇ ವೇಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery water Management Authority-CWMA) ಅತ್ಯಂತ ಮಹತ್ವದ ಸಭೆಯೂ ನಾಳೆ ದಿಲ್ಲಿಯಲ್ಲಿ ನಡೆಯಲಿದೆ. ನಿಜವಾದ ಯಶಸ್ಸು ಸಿಗಬೇಕಾಗಿರುವುದು ಅಲ್ಲಿ.

ಕಾವೇರಿ ನೀರು ನಿಯಂತ್ರಣ ಸಮಿತಿ (Cauvery water regulation committe- CWRC) ಸೆ. 26ರಂದು ಪ್ರಕಟಿಸಿದ ಆದೇಶದಲ್ಲಿ ಸೆ. 28ರಿಂದ 18 ದಿನಗಳ ಕಾಲ ದಿನವೂ 3000 ಕ್ಯೂಸೆಕ್‌ ನೀರನ್ನು ಬಿಡುಗಡೆ ಮಾಡಲು ಆದೇಶ ನೀಡಿದೆ. ಈ ಆದೇಶಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬೆನ್ನಿಗೇ ಸೆ. 29ರಂದು ನಡೆಯುತ್ತಿರುವ ಪ್ರಾಧಿಕಾರದ ಸಭೆಯಲ್ಲಿ ಸಮಿತಿಯ ಈ ತೀರ್ಮಾನವನ್ನು ಪ್ರಶ್ನೆ ಮಾಡಬಹುದಾಗಿದೆ.

ಈ ಬಾರಿ ಅಧಿಕಾರಿಗಳು ನೇರ ಹಾಜರಿ

ಸೆ. 29ರಂದು ನಡೆಯುವ ಪ್ರಾಧಿಕಾರದ ಸಭೆಯಲ್ಲಿ ಸರ್ಕಾರವು ಕಾವೇರಿ ಸಮಿತಿಯ ನಿರ್ಣಯವನ್ನು ಪ್ರಶ್ನೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. “ನಾಳೆ ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಗೆ ಆನ್‌ಲೈನ್ ಬದಲಿಗೆ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

“ತಮಿಳುನಾಡಿನವರು 11,000 ಸಾವಿರ ಕ್ಯೂಸೆಕ್ಸ್ ನೀರು ಬೇಡಿಕೆ ಇಟ್ಟಿದ್ದು, ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ. ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಈಗ ಸಹಜವಾಗಿ 2,000 ಕ್ಯೂಸೆಕ್ಸ್ ನೀರು ಹೋಗುತ್ತಿರಬಹುದು” ಎಂದು ತಿಳಿಸಿದರು.

“ಹಿರಿಯ ಕೃಷಿ ತಜ್ಞರು, ನೀರಾವರಿ ತಂತ್ರಜ್ಞರ ಸಭೆ ಕರೆದಿದ್ದು ಅಲ್ಲಿ ಚರ್ಚೆ ಮಾಡಲಾಗುವುದು. ಯಾರು ಭಾಗವಹಿಸುತ್ತಾರೆ ಎಂದು ಹೆಸರು ಬಹಿರಂಗಪಡಿಸಲು ಆಗುವುದಿಲ್ಲ” ಎಂದು ಹೇಳಿದರು.

ನಾಳಿನ ಬೆಳವಣಿಗೆ ನೋಡಿಕೊಂಡು ನ್ಯಾಯಾಲಯಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ, “ಈಗಾಗಲೇ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ತಾಂತ್ರಿಕ ಸಮಿತಿಯವರು 3,000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಶಿಫಾರಸ್ಸು ಮಾಡಿದ್ದಾರೆ. ನಾಳೆ ಪ್ರಾಧಿಕಾರದವರು ಏನು ಸೂಚನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು” ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಪ್ರಾಧಿಕಾರ ಕರ್ನಾಟಕದ ವಾದವನ್ನು ಒಪ್ಪುತ್ತದಾ?

ಈಗ ಇರುವ ಪ್ರಶ್ನೆ ಏನೆಂದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕದ ವಾದವನ್ನು ಒಪ್ಪುತ್ತದಾ? ಯಾಕೆಂದರೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡುತ್ತಿರುವುದು ಇದು ಮೂರನೇ ಬಾರಿ. ಮೊದಲು ಆಗಸ್ಟ್‌ 26ರಂದು 5000 ಕ್ಯೂಸೆಕ್‌, ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ಮಾಡಿದ್ದ ಸಮಿತಿ ಇದೀಗ ಮೂರನೇ ಸಲ ಆದೇಶ ನೀಡಿದೆ. ಹಿಂದಿನ ಎರಡೂ ಸಂದರ್ಭದಲ್ಲೂ ಅದು ಕರ್ನಾಟಕದ ವಾದಗಳಿಗೆ ಮನ್ನಣೆ ನೀಡಿಲ್ಲ. ಬದಲಾಗಿ CWRC ಹೇಳಿದ್ದೇ ಸರಿ ಎಂದಿತ್ತು. ಸುಪ್ರೀಂಕೋರ್ಟ್‌ ಪ್ರಾಧಿಕಾರ ಹೇಳಿದ್ದು ಸರಿ ಇರುತ್ತದೆ ಎಂದಿತ್ತು. ಹೀಗಾಗಿ ಪ್ರಾಧಿಕಾರದ ಸಭೆಯ ಬಗ್ಗೆ ಕುತೂಹಲವಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬಂದ್‌, ನೀರಿಲ್ಲದ ಸ್ಥಿತಿಯನ್ನು ಪರಿಗಣಿಸಿ ತಡೆಯಾಜ್ಞೆ ನೀಡಿದರೆ ಕರ್ನಾಟಕಕ್ಕೆ ಯಶಸ್ಸು ಸಿಕ್ಕಂತೆ.

ಪ್ರಾಧಿಕಾರವೂ ಪ್ರತಿಕೂಲ ತೀರ್ಪನ್ನೇ ನೀಡಿದರೆ ಮತ್ತೆ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಲೂ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಕಾನೂನು ಮತ್ತು ನೀರಾವರಿ ತಜ್ಞರ ಸಭೆ ಕರೆದ ಸಿಎಂ

ಈ ಎಲ್ಲ ಬೆಳವಣಿಗೆಗಳ ನಡುವೆ ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ಜಲ ವಿವಾದ ವಿಚಾರದಲ್ಲಿ ಮಹತ್ವದ ಸಭೆ ಕರೆದಿದ್ದಾರೆ. ಇದರಲ್ಲಿ ಕಾನೂನು ಪಂಡಿತರು ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಅಡ್ವೋಕೇಟ್ ಜನರಲ್ ಮಾಹಿತಿ ಪಡೆದು ಮುಂದುವರಿಯುವುದಾಗಿ ಸಿಎಂ ಹಾಗೂ ಡಿಸಿಎಂ ತಿಳಿಸಿದ್ದು, ಸಭೆ ಬಳಿಕ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನವಾಗಲಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಈ ಸಭೆ ನಡೆಯಲಿದೆ.

Exit mobile version