Site icon Vistara News

Cauvery Dispute : ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಸರ್ವ ಸಿದ್ಧತೆ; ಡಿ.ಕೆ. ಶಿವಕುಮಾರ್‌

DK Shivakumar at Mekedatu

ಬೆಂಗಳೂರು: ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು (Cauvery Dispute) ಎಂಬ ಆದೇಶವನ್ನು ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (Cauvery Water Management Authority- CWMA) ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ತಿಳಿಸಿದ್ದಾರೆ. ಇದೇ ವೇಳೆ, ಮೇಕೆದಾಟು ಯೋಜನೆ ಜಾರಿಗೆ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದೂ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ ಹೇಳಿದರು.

ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ರಾಜ್ಯ ಸರ್ಕಾರ ಕರ್ನಾಟಕ ಭಾಗದ ಬೆಳೆಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನೊಂದೆರಡು ದಿನದಲ್ಲಿ ಮಳೆ ಬಂದು ಪರಿಸ್ಥಿತಿ ಸುಧಾರಿಸಬಹುದು ಎಂದು ಆಶಯ ವ್ಯಕ್ತಪಡಿಸಿದ ಅವರು, ʻʻ3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಾಧಿಕಾರದ ಮುಂದೆ ಸಲ್ಲಿಸಿದ ಮೇಲ್ಮನವಿಯಲ್ಲಿ ತಿಳಿಸಿದ್ದೇವೆ. ಇದರ ವಿಚಾರಣೆ ಯಾವಾಗ ನಡೆಯುತ್ತದೆ ಎನ್ನುವುದು ಗೊತ್ತಿಲ್ಲ. ಇದೇ ವೇಳೆ ನಾವು ಮೇಕೆದಾಟು ಯೋಜನೆಗೆ ಸಂಬಂಧಿಸಿ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದೇವೆ. ಇದಕ್ಕೆ ಏನೆಲ್ಲ ಕಾನೂನು ಸಿದ್ಧತೆಗಳು ಬೇಕೋ ಅದನ್ನು ಮಾಡುತ್ತಿದ್ದೇವೆʼʼ ಎಂದು ಅವರು ತಿಳಿಸಿದರು.

ನೀರು ಬಿಡುಗಡೆಗೆ ಸಾಧ್ಯವಾಗುತ್ತಿಲ್ಲ ಎಂಬ ಅಂಶವನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡುವುದಿಲ್ಲವೇ ಎಂದು ಕೇಳಿದಾಗ, ʻʻನಾವು ಹಂತ ಹಂತವಾಗಿ ಹೋಗುತ್ತೇವೆ. ಹಾಗೆ ಮಾಡದೆ ಹೋದರೆ ಕೋರ್ಟ್‌ ನಮ್ಮ ದಾವೆಯನ್ನು ಸ್ವೀಕರಿಸುವುದಿಲ್ಲ. ಈಗ ಪ್ರಾಧಿಕಾರ ಆದೇಶ ಮಾಡಿದೆ. ಅದನ್ನು ಅಲ್ಲೇ ಪ್ರಶ್ನಿಸುತ್ತೇವೆ. ಅಲ್ಲಿ ನ್ಯಾಯ ಸಿಗದೆ ಹೋದರೆ ಸುಪ್ರೀಂಕೋರ್ಟ್‌ಗೆ ಹೋಗುವುದು ಕ್ರಮʼʼ ಎಂದರು. ಇಷ್ಟೆಲ್ಲ ಸಂಕಷ್ಟ ಇರುವಾಗ, ಮಳೆಯೇ ಇಲ್ಲದಿರುವಾಗ ಯಾಕೆ ಸಂಕಷ್ಟ ಸೂತ್ರ ರಚನೆ ಮಾಡಬಾರದು ಎಂದು ಕೇಳಿದಾಗ, ʻʻಈ ವರ್ಷ ಒಂದು ಕಳೆದುಹೋಗಲಿ. ಮುಂದಿನ ವರ್ಷ ನೋಡೋಣʼʼ ಎಂದರು. ಈ ಬಗ್ಗೆ ನೀವು ಬಿಜೆಪಿ ಎಂಪಿಗಳನ್ನೂ ಕೇಳಬೇಕು ಎಂದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದಾಗಲೂ ಕಳೆದ ಸೆ. 29ರಂದು ಸಭೆ ನಡೆಸಿದ ಪ್ರಾಧಿಕಾರವು ಅಕ್ಟೋಬರ್‌ 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery water regulation Committee-CWRC) ಆದೇಶವನ್ನು ಎತ್ತಿ ಹಿಡಿದಿತ್ತು.

ಮತ್ತೆ ಒಳಹರಿವು ಕುಸಿತ

ಈ ನಡುವೆ ರಾಜ್ಯ ಕೆಲವು ಭಾಗಗಳಲ್ಲಿ ಸಣ್ಣದಾಗಿ ಮಳೆಯಾಗಿದ್ದರಿಂದ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿತ್ತು. ಆದರೆ, ದಿನ ಕಳೆದಂತೆ ಅದು ಕೂಡಾ ಕಡಿಮೆಯಾಗಿದೆ ಎಂದು ಡಿಸಿಎಂ ವಿವರಿಸಿದರು.

ಅಕ್ಟೋಬರ್‌ 1ರಂದು ನೀರಿನ ಒಳಹರಿವು 13000 ಕ್ಯೂಸೆಕ್‌ ಇದ್ದರೆ ಅಕ್ಟೋಬರ್‌ 2ಕ್ಕೆ ಅದು 23 ಸಾವಿರಕ್ಕೆ ಏರಿತ್ತು. ಮುಂದೆ ಅಕ್ಟೋಬರ್‌ 3ಕ್ಕೆ 20 ಸಾವಿರಕ್ಕೆ ಇಳಿದಿದೆ. ಅಕ್ಟೋಬರ್‌ 4ರಂದು ಅದು 15000 ಕ್ಯೂಸೆಕ್‌ಗೆ ಬಂದಿತ್ತು. ಅಕ್ಟೋಬರ್‌ 5ರಂದು ಅದು 10 ಸಾವಿರ ಕ್ಯೂಸೆಕ್‌ ಗೆ ಇಳಿದು ಕಷ್ಟದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಅವರು ವಿವರಿಸಿದರು.

ಮೇಕೆದಾಟು ಯೋಜನೆಯೇ ಪರಿಹಾರ ಎನ್ನುತ್ತಿರುವ ಕರ್ನಾಟಕ

ಬರ ಪರಿಸ್ಥಿತಿ ನಿರ್ಮಾಣವಾದಾಗ ಪರಿಸ್ಥಿತಿಯನ್ನು ನಿಭಾಯಿಸಬೇಕಾದರೆ, ಅಂತಾರಾಜ್ಯ ನದಿ ನೀರು ವಿವಾದ ಪರಿಹರಿಸಬೇಕಾದರೆ ಮೇಕೆದಾಟು ಅಣೆಕಟ್ಟು ನಿರ್ಮಾಣವೇ ಪರಿಹಾರ ಎಂಬ ಅಭಿಪ್ರಾಯವನ್ನು ರಾಜ್ಯ ಸರ್ಕಾರ ಹೊಂದಿದೆ. ಹೀಗಾಗಿ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಅಣೆಕಟ್ಟು ಕಟ್ಟುವ ಪ್ರಸ್ತಾಪವನ್ನು ಸರ್ಕಾರ ಮುಂದಿಟ್ಟಿದೆ. ಆದರೆ, ತಮಿಳುನಾಡು ಸರ್ಕಾರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ತನ್ನ ಹಿತಾಸಕ್ತಿಗೆ, ತನ್ನ ರೈತರಿಗೆ ಇದರಿಂದ ಧಕ್ಕೆಯಾಗಬಹುದು ಎಂಬ ಆತಂಕವನ್ನು ಅದು ವ್ಯಕ್ತಪಡಿಸಿದೆ. ಆದರೆ, ಇದರಿಂದ ಎರಡೂ ರಾಜ್ಯಗಳಿಗೆ ಲಾಭವಿದೆ ಎಂಬ ಅಂಶವನ್ನು ಕರ್ನಾಟಕ ಪ್ರತಿಪಾದಿಸಿದೆ.

ಇದನ್ನೂ ಓದಿ: Cauvery Dispute : ಕಾವೇರಿಗಾಗಿ ವಾಟಾಳ್‌ ನೇತೃತ್ವದಲ್ಲಿ ಮಂಡ್ಯಕ್ಕೆ ಬೃಹತ್‌ ರ‍್ಯಾಲಿ ; KRS ಮುತ್ತಿಗೆ ಯತ್ನ ವಿಫಲ

ಕಳೆದ ಸೆಪ್ಟೆಂಬರ್‌ 21ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಕೂಡಾ ಮೇಕೆದಾಟು ಯೋಜನೆಯ ಪ್ರಸ್ತಾಪವನ್ನು ಮಾಡಿತ್ತು. ಹೀಗಾಗಿ ಕರ್ನಾಟಕಕ್ಕೆ ಈಗ ಬಲ ಬಂದಂತಾಗಿದೆ.

Exit mobile version