Site icon Vistara News

Cauvery Dispute : KRS ಒಳಹರಿವು ಶೂನ್ಯಕ್ಕೆ ತಲುಪಿದೆ, ನೀರು ಬಿಡುವ ಶಕ್ತಿ ಇಲ್ಲ ಎಂದ ಡಿಕೆಶಿ

DK Shivakumar at bus fire site

ಬೆಂಗಳೂರು: “ಕೆಆರ್‌ಎಸ್ ಅಣೆಕಟ್ಟಿನ (KRS Dam) ಒಳಹರಿವು ಶೂನ್ಯಕ್ಕೆ ತಲುಪಿದೆ. ನಮ್ಮ ಹತ್ತಿರ ತಮಿಳುನಾಡಿಗೆ ಹರಿಸಲು ನೀರಿಲ್ಲ, ನೀರು ಬಿಡುವ ಶಕ್ತಿಯೂ ನಮ್ಮಲ್ಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ನವೆಂಬರ್‌ 1ರಿಂದ 15ರವರೆಗೆ ಪ್ರತಿ ದಿನವೂ ತಮಿಳುನಾಡಿಗೆ 2600 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು (Cauvery Dispute) ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee-CWRC) ಶಿಫಾರಸಿಗೆ ಅವರು ಪ್ರತಿಕ್ರಿಯಿಸಿದರು.

ಗಿರಿನಗರದ ವೀರಭದ್ರನಗರದಲ್ಲಿ ಸಂಭವಿಸಿದ ಅಗ್ನಿ ಅನಾಹುತದಿಂದ ಬಸ್ ಗಳು ಸುಟ್ಟುಹೋದ ಸ್ಥಳಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

“ಕೆಆರ್‌ಎಸ್‌ ಅಣೆಕಟ್ಟೆಗೆ ಕಾವೇರಿ ನೀರಿನ ಒಳಹರಿವು ಶೂನ್ಯಕ್ಕೆ ತಲುಪಿದೆ. ಕೆಆರ್‌ಎಸ್, ಕಬಿನಿಯಿಂದ ನೈಸರ್ಗಿಕವಾಗಿ 815 ಕ್ಯೂಸೆಕ್ ನೀರು ಹರಿದು ಹೋಗುತ್ತಿದ್ದು, ರಾಜ್ಯದ ಕಾವೇರಿ ಕೊಳ್ಳದಲ್ಲಿ 51 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕುಡಿಯುವ ನೀರನ್ನು ಉಳಿಸಿಕೊಳ್ಳಬೇಕು. ದೇವರ ಮೊರೆ ಹೋಗೋಣ, ಮಳೆ ಬೀಳಲಿ, ನೀರು ಕೆಳಗಡೆಗೆ ಹರಿಯಲಿ. ಈಗ ನಮ್ಮ ಬಳಿಯಂತೂ ನೀರಿಲ್ಲʼʼ ಎಂದರು.

ಕಾವೇರಿ ನೀರಿನ ವಿಚಾರವಾಗಿ 89 ನೇ ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC), ನ.1 ರಿಂದ ಮುಂದಿನ 15 ದಿನಗಳ ಕಾಲ 2,600 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಶಿಫಾರಸ್ಸು ಮಾಡಿದೆ.

ಅಗ್ನಿ ದುರಂತದಲ್ಲಿ ಪ್ರಾಣಹಾನಿ ಸಂಭವಿಸಿಲ್ಲ

ಬಸ್ ಅಗ್ನಿ ದುರಂತದ ಬಗ್ಗೆ ಮಾತನಾಡಿ, “ವೆಲ್ಡಿಂಗ್ ಮಾಡುವ ವೇಳೆ ಕಿಡಿ ಹಾರಿ ಒಂದು ಬಸ್‌ಗೆ ಬೆಂಕಿ ಬಿದ್ದು, ಅದು ಹರಡಿಕೊಂಡಿದೆ. ಇಷ್ಟು ದೊಡ್ಡ ಅನಾಹುತ ನಡೆದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲದಿರುವುದು ಒಳ್ಳೆಯ ಸುದ್ದಿ. ಅಗ್ನಿಶಾಮಕ ದಳದವರು ಅತ್ಯಂತ ಶೀಘ್ರವಾಗಿ ಬೆಂಕಿ ನಂದಿಸಿದ್ದಾರೆ. ಪೊಲೀಸ್ ಮತ್ತು ಅಗ್ನಿಶಾಮಕದಳದ ಉನ್ನತ ಅಧಿಕಾರಿಗಳಿಗೆ ಈ ವಿಚಾರವಾಗಿ ಪ್ರತ್ಯೇಕ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.

“ದುರಂತ ನಡೆದ ಸ್ಥಳ ಖಾಸಗಿಯವರಿಗೆ ಸೇರಿದ್ದು, ಇವರು ಸಹ ಸಣ್ಣ ಪ್ರಮಾಣದ ಅಗ್ನಿ ನಿಯಂತ್ರಣ ವ್ಯವಸ್ಥೆ ಇಟ್ಟುಕೊಂಡಿದ್ದಾರೆ. ಆದರೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದೇನೆ‌. ಇಂತಹ ಸೂಕ್ಷ್ಮ ಕೆಲಸಗಳು ನಡೆಯುವ ಜಾಗಗಳಲ್ಲಿ ಕಟ್ಟೆಚ್ಚರ ಅಗತ್ಯ ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ” ಎಂದರು.

ಹೊರಗೆ ಹೋಗಲು ಒಂದೇ ಕಡೆ ಜಾಗ ಇದ್ದ ಕಾರಣ ಮತ್ತು ಮುಂಜಾಗ್ರತಾ ಕ್ರಮಗಳು ಇಲ್ಲದ ಕಾರಣ ಅನಾಹುತ ಸಂಭವಿಸಿತೆ ಎಂದು ಕೇಳಿದಾಗ “ತಾಂತ್ರಿಕ ಅಂಶ,‌ ದೋಷಗಳನ್ನು ನಾನು ಈಗಲೇ ಹೇಳಲು ಆಗುವುದಿಲ್ಲ, ವರದಿ ಬರಲಿ ಆನಂತರ ಹೇಳುತ್ತೇನೆ” ಎಂದು ತಿಳಿಸಿದರು.

ಇದನ್ನೂ ಓದಿ: Fire Accident : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ; ಸುಟ್ಟು ಕರಕಲಾದ ಎಸಿ ಬಸ್‌ಗಳು

ಸರ್ಕಾರ ಬಂದ ನಂತರ ಈಗಾಗಲೇ ಮೂರು ದೊಡ್ಡ ಬೆಂಕಿ ಅವಘಡಗಳು ನಡೆದಿವೆ, ಸರ್ಕಾರ ಕ್ರಮ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವೇ ಎಂದು ಕೇಳಿದಾಗ “ಪಟಾಕಿ ದುರಂತ ನಡೆದ ನಂತರ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಇಂತಹ ಸೂಕ್ಷ್ಮ ವಲಯಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ” ಎಂದು ಹೇಳಿದರು.

Exit mobile version