ನವದೆಹಲಿ: ಕಾವೇರಿ ಜಲ ಸಂಕಟಕ್ಕೆ (Cauvery Dispute) ಸಂಬಂಧಿಸಿ ರಾಜ್ಯದ ಎಲ್ಲ ಪಕ್ಷಗಳ ಸಂಸದರು ಮತ್ತು ಕೇಂದ್ರ ಸಚಿವರ ಜತೆಗೆ (All party MPs Meet) ಚರ್ಚೆ ನಡೆಸುವುದಕ್ಕಾಗಿ ನವ ದೆಹಲಿಗೆ ಬಂದಿರುವ ಸಿಎಂ ಸಿದ್ದರಾಮಯ್ಯ (CM Siddaramaiah), ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಟೀಮ್‌ಗೆ ಕೇಂದ್ರ ಜಲ ಶಕ್ತಿ ಸಚಿವರ (Central Water resource minister) ಜತೆಗೆ ಮಾತುಕತೆ ನಡೆಸಲು ಸೆಪ್ಟೆಂಬರ್ 21ಕ್ಕೆ ಸಮಯ ನಿಗದಿಯಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಬುಧವಾರ ಸಂಜೆಯೇ ಜಲಶಕ್ತಿ ಸಚಿವರ ಭೇಟಿಗೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಆದರೆ, ಅದು ಮುಂದೂಡಲ್ಪಟ್ಟು ಈಗ ಗುರುವಾರಕ್ಕೆ ನಿಗದಿಯಾಗಿದೆ. ಗುರುವಾರ ಬೆಳಗ್ಗೆ 10.30ಕ್ಕೆ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra singh Shekhawat) ಅವರ ಭೇಟಿಗೆ ಸಮಯ ನಿಗದಿಯಾಗಿದೆ ಎಂದು ಡಿಸಿಎಂ ಹಾಗೂ ರಾಜ್ಯದ ಜಲಸಂಪನ್ಮೂಲ ಖಾತೆ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಭೇಟಿ ನಾಳೆಗೆ ಮುಂದೂಡಿಕೆಯಾಗಿದೆ. ಗುರುವಾರ ಬೆಳಗ್ಗೆ 10:30 ಸಮಯ ನಿಗದಿಯಾಗಿದೆ ಎಂದು ತಿಳಿಸಿದ ಡಿ.ಕೆ. ಶಿವಕುಮಾರ್ ಅವರು, ನಮ್ಮನ್ನು ಮಧ್ಯರಾತ್ರಿ 1 ಗಂಟೆಗೆ ಸಮಯ ಕೊಟ್ಟು ಕರೆದರೂ ನಾವು ಹೋಗಲು ಸಿದ್ಧ ಎಂದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೂ ಭೇಟಿಗೆ ಅವಕಾಶ ಕೇಳಿದ್ದೇವೆ. ಆದರೆ, ಇನ್ನೂ ಸಮಯ ನಿಗದಿ ಆಗಿಲ್ಲ ಎಂದು ತಿಳಿಸಿದರು.
ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ
ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ಸೆ. 13ರಂದು ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿತ್ತು. ಮತ್ತು ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಇದೀಗ ಈ ಆದೇಶವನ್ನು ಮರುಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಆದೇಶವನ್ನು ಮರುಪರಿಶೀಲಿಸಲು ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ 9 ಪುಟಗಳ ಮನವಿಯನ್ನು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ. ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್‌ನ ಕಾವೇರಿ ಪೀಠದಲ್ಲಾದರೂ ರಾಜ್ಯಕ್ಕೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಇದೆ.
ಸಂಸದರ ಸಭೆಯಲ್ಲಿ ಏನಾಯಿತು?
ಬುಧವಾರ ಮುಂಜಾನೆ ನಡೆದ ರಾಜ್ಯದ ಸರ್ವ ಪಕ್ಷಗಳ ಸಂಸದರ ಸಭೆಯಲ್ಲಿ ಎಲ್ಲರೂ ಪಕ್ಷ ಬೇಧ ಮರೆತು ಹೋರಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆಲವು ಸಂಸದರು, ರಾಜ್ಯ ಸರ್ಕಾರ ಆರಂಭದಿಂದಲೇ ತಮಿಳುನಾಡಿಗೆ ನೀರು ಹರಿಸಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈಗ ಎಲ್ಲ ಮುಗಿದ ಮೇಲೆ ಚರ್ಚೆ ನಡೆಸುತ್ತಿರುವುದಕ್ಕೆ ಅರ್ಥವಿಲ್ಲ ಎಂದರು.
ಜಲ ವಿವಾದಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರೇ ಮಧ್ಯ ಪ್ರವೇಶ ಮಾಡಬೇಕು ಎಂಬ ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: Cauvery Dispute : ಮೋದಿ ಮಧ್ಯಪ್ರವೇಶಕ್ಕೆ ಮನವಿ, CWMA ಆದೇಶಕ್ಕೆ ತಡೆ ಕೋರಿ ಸುಪ್ರೀಂಗೆ ಅರ್ಜಿ; ಸಿಎಂ ಸಿದ್ದರಾಮಯ್ಯ
ಈಶ್ವರಪ್ಪ ಹೇಳಿಕೆಗೆ ಡಿ.ಕೆ.ಶಿವಕುಮಾರ್ ತಿರುಗೇಟು
ಈ ನಡುವೆ ದಿಲ್ಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡುವಾಗ ಡಿ.ಕೆ. ಶಿವಕುಮಾರ್ ನೀರು ಕಳ್ಳ ಎಂಬ ಕೆಎಸ್ ಈಶ್ವರಪ್ಪನವರ ಹೇಳಿಕೆಯ ಪ್ರಸ್ತಾಪವಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ʻʻನನ್ನ ಸುದ್ದಿಗೆ ಬಂದವರ, ನನ್ನ ವಿಚಾರಕ್ಕೆ ಬಂದವರ ಸೆಟ್ಲಮೆಂಟ್ ಆಗಿದೆ. ಈಶ್ವರಪ್ಪ ಎಲ್ಲಿದ್ದಾರೆ, ನಾನ್ ಎಲ್ಲಿದೀನಿ ಅಂತ ನೋಡ್ಕೊಳ್ಳಿ. ಅಸೆಂಬ್ಲಿಯಲ್ಲಿ ನನ್ನ ಅಪ್ಪನ ಮೀಟ್ ಮಾಡ್ತೀನಿ ಅಂದಿದ್ರು. ಈಗ ಎಲ್ಲಿದ್ದಾರೆ, ರೆಸ್ಟ್ ಮಾಡ್ಲಿ..!ʼʼ ಎಂದರು.