ಬೆಂಗಳೂರು: ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನವೂ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು (Cauvery Dispute) ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery water regulation Committee) ಆದೇಶವನ್ನೂ ಈ ಹಿಂದಿನಂತೆ ರಾಜ್ಯ ಸರ್ಕಾರ (Karnataka Government) ಪಾಲನೆ ಮಾಡುತ್ತದಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕಾವೇರಿ ನಿಗಮ ಇದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ (Cauvery water Management Authority) ಪ್ರಶ್ನಿಸಲಾಗುವುದು ಎಂದು ಹೇಳಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕಾನೂನಾತ್ಮಕ ವಿಚಾರಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸಮಿತಿ ಆದೇಶವನ್ನು ಪ್ರಾಧಿಕಾರದಲ್ಲಿ ಪ್ರಶ್ನೆ: ಕಾವೇರಿ ನೀರು ನಿಗಮ
ಕರ್ನಾಟಕ ತಾನು ಎದುರಿಸುತ್ತಿರುವ ಪರಿಸ್ಥಿತಿಯನ್ನು ವಿವರಿಸಿದರೂ ಸಮಿತಿ ನೀರು ಬಿಡಲೇಬೇಕು ಎಂದು ಪಟ್ಟು ಹಿಡಿದು ಆದೇಶ ನೀಡಿರುವುದನ್ನು ಪ್ರಾಧಿಕಾರದ ಮುಂದೆ ಪ್ರಶ್ನೆ ಮಾಡಲಿದ್ದೇವೆ ಎಂದು ಕಾವೇರಿ ನೀರು ನಿಗಮದ ವ್ಯವಸ್ಥಾಪನಾ ನಿರ್ದೇಶಕ ಮಹೇಶ ಅವರು ಹೇಳಿದ್ದಾರೆ.
ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದೆವು. ಆದರೂ ನೀರು ಹರಿಸಲು ಸೂಚನೆ ನೀಡಿದ್ದಾರೆ. ಹೀಗಾಗಿ ನಾವು ಆದೇಶವನ್ನು ಪ್ರಶ್ನೆ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಕಾವೇರಿ ನೀರು ನಿಯಂತ್ರಣ ಮಂಡಳಿಯು ಸೆ. 13ರಂದು ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತ್ತು. ಮುಂದಿನ ಪ್ರಾಧಿಕಾರ ಸಭೆ ಮತ್ತು ಸುಪ್ರೀಂಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಇದನ್ನು ಎತ್ತಿಹಿಡಿಯಲಾಗಿತ್ತು. ಈ ಆದೇಶ ಸೆ. 28ರವರೆಗೆ ಅನ್ವಯವಾಗಿತ್ತು.
ಈ ನಡುವೆ, ರಾಜ್ಯದಿಂದ ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಬೆಂಗಳೂರು ಬಂದ್ ಮತ್ತು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅದರ ನಡುವೆಯೇ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯು ಮತ್ತೆ 18 ದಿನಗಳ ಕಾಲ ಪ್ರತಿ ದಿನ 3000 ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶಿಸಿದೆ.
ಇದನ್ನೂ ಓದಿ: Bangalore Bandh: ಸು.ಕೋರ್ಟ್ ಗಮನ ಸೆಳೆಯಲು ಬೀದಿ ಹೋರಾಟವೇ ಬೇಕು; ಬಂದ್ ಸಮರ್ಥಿಸಿದ ಬೊಮ್ಮಾಯಿ
ಕರ್ನಾಟಕವು ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವುದು, 195 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಕಾವೇರಿ ಕೊಳ್ಳದ ಬಹುತೇಕ ತಾಲೂಕುಗಳು ಬರ ಎದುರಿಸುತ್ತಿರುವುದು, ನೀರಿನ ಒಳಹರಿವು ಕಡಿಮೆಯಾಗುತ್ತಿರುವುದು ಮೊದಲಾದ ಎಲ್ಲ ಸಂಗತಿಗಳನ್ನು ವಿವರಿಸಿತ್ತು. ಆದರೂ ಸಮಿತಿ ನೀರು ಬಿಡುಗಡೆ ಮಾಡಲೇಬೇಕು ಎಂದು ತಿಳಿಸಿರುವುದರಿಂದ ಅದನ್ನು ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡಲಾಗುತ್ತದೆ ಎಂದು ಮಹೇಶ್ ತಿಳಿಸಿದರು.
ಕಾನೂನಾತ್ಮಕ ಕ್ರಮಗಳ ಬಗ್ಗೆ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ನಡುವೆ, ತಮಿಳುನಾಡಿಗೆ 300 ಕ್ಯೂಸೆಕ್ಸ್ ನೀರು ಹರಿಸುವ ಕುರಿತು ಸಮಿತಿ ಯ ತೀರ್ಪಿನ ಕುರಿತು ನಮ್ಮ ಕಾನೂನು ತಂಡದ ತಜ್ಞರೊಂದಿಗೆ ಕಾನೂನಾತ್ಮಕವಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಮೈಸೂರಿನಲ್ಲಿ ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಕಾವೇರಿ ನೀರು ನಿಯಂತ್ರಣ ಸಮಿತಿಯು 15 ದಿನಗಳವರೆಗೆ ಪುನಃ 3000 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಆದೇಶ ಮಾಡಿದ್ದು, ಸೆಪ್ಟೆಂಬರ್ 27 ರವರೆಗೆ ಆದೇಶ ಜಾರಿಯಲಿದೆ. ಚರ್ಚಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಕೆಗೆ ಸಲಹೆ
ಈ ನಡುವೆ, ಬಿಜೆಪಿ ಮತ್ತು ಜಾತ್ಯತೀತ ಜನತಾದಳಗಳು ಈ ಆದೇಶವನ್ನು ಒಪ್ಪಬಾರದು, ಸಮಿತಿ ಅಸಂಬದ್ಧ ಆದೇಶಗಳ ವಿರುದ್ಧ ನಾವೇ ಮೊದಲಾಗಿ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ದಾವೆಯನ್ನು ಸಲ್ಲಿಸಬೇಕು. ಆಗ ನಮ್ಮ ಅಂಶಗಳನ್ನು ಸ್ಪಷ್ಟವಾಗಿ ವಾದ ಮಾಡಲು ಅವಕಾಶವಾಗುತ್ತದೆ ಎಂದು ಹೇಳಿವೆ.