ಬೆಂಗಳೂರು: ನೂರಾರು ಜನರ ಸಮ್ಮುಖದಲ್ಲಿ ವಿವಾದಿತ ಚಾಮರಾಜಪೇಟೆ ಆಟದ ಮೈದಾನ ಪಕ್ಕವೇ ಕೂರಿಸಿದ್ದ ಗಣೇಶನ ವಿಸರ್ಜನೆಯ ಮೆರವಣಿಗೆ ಶಾಂತಿಯುತವಾಗಿ ನೆರವೇರಿದೆ. ಚಾಮರಾಜಪೇಟೆಯ ಗಣೇಶನ ಜತೆ ಜೆಜೆನಗರ, ಪಾದರಾಯನಪುರದ 20ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.
ಚಾಮರಾಜಪೇಟೆ ಆಟದ ಮೈದಾನ ಪಕ್ಕದ ಅಯ್ಯಪ್ಪ ದೇಗುಲ ಬಳಿ 7 ದಿನಗಳ ಗಣೇಶೋತ್ಸವ ನಡೆಸಿದ್ದು, ಮೈದಾನದಿಂದ ಹೊರಟ ಮೆರವಣಿಗೆ ಚಾಮರಾಜಪೇಟೆಯ ಮುಖ್ಯ ರಸ್ತೆ, ಸಿರ್ಸಿ ಸರ್ಕಲ್, ಮೈಸೂರು ಫ್ಲೈ ಓವರ್ ಹಾಗೂ ಸಿಸಿಬಿ ಸರ್ಕಲ್ ಮೂಲಕ, ಟೌನ್ ಹಾಲ್‌ಗೆ ತಲುಪಿತು. ಟೌನ್ ಹಾಲ್‌ನಿಂದ ಮುಂದೆ ಮೆರವಣಿಗೆಗೆ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಅಲ್ಲಿಂದ ಹಲಸೂರು ಕೆರೆಗೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ತೆಗೆದುಕೊಂಡು ಹೋಗಲಾಯಿತು.
ಇದನ್ನೂ ಓದಿ | ಧಾರವಾಡ | ಗಣೇಶ ಮೆರವಣಿಗೆಯಲ್ಲಿ ಯುವಕನ ಮೇಲೆ ಹಲ್ಲೆ, ಹುಬ್ಬಿನೊಳಗೆ ಹೊಕ್ಕ ಚಾಕು
ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಜನ ಕೇಸರಿ ಶಾಲು ಧರಿಸಿ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು, ಮೆರವಣಿಗೆಗೆ ವಿವಿಧ ಕಲಾ ತಂಡಗಳು ಮೆರುಗು ನೀಡಿದವು. ಚಾಮರಾಜಪೇಟೆಯ ಗಣೇಶನ ಮೆರವಣಿಗೆಯಲ್ಲಿ ಶಿವಾಜಿನಗರದಲ್ಲಿ ಕೊಲೆಯಾಗಿದ್ದ ರುದ್ರೇಶ್, ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಹಾಗೂ ಕರಾವಳಿಯಲ್ಲಿ ದುಷ್ಕರ್ಮಿಗಳಿಗೆ ಬಲಿಯಾಗಿದ್ದ ಪ್ರವೀಣ್ ನೆಟ್ಟಾರು ಫೋಟೋಗಳು ರಾರಾಜಿಸಿದವು. ಪ್ರಮುಖವಾಗಿ ಸ್ವಾತಂತ್ರ್ಯ ವೀರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಬ್ಯಾನರ್‌ಗಳು ಗಮನಸೆಳೆದವು.
ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ ಖಾಕಿ ಭದ್ರಕೋಟೆಯೇ ಇತ್ತು. ಮೂಲೆ ಮೂಲೆಗೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸ್ ಹಿರಿಯ ಅಧಿಕಾರಿಗಳು ಸೇರಿದಂತೆ ನೂರಾರು ಪೊಲೀಸರು, ಎಲ್ಲೂ ಗೊಂದಲ ಗಲಾಟೆಗಳಾಗದಂತೆ ಕರ್ತವ್ಯ ನಿರ್ವಹಿಸಿದರು. 1500 ಪೊಲೀಸ್ ಸಿಬ್ಬಂದಿಯನ್ನು ಮೈದಾನದ ಆಯಕಟ್ಟಿನ ಭಾಗದಲ್ಲಿ ನಿಯೋಜನೆ ಮಾಡಲಾಗಿತ್ತು. ಮೆರವಣಿಗೆ ಸಾಗುವ ಪ್ರತಿ ಪಾಯಿಂಟ್‌ನಲ್ಲೂ 25ರಿಂದ 30 ಜನ ಪೊಲೀಸರನ್ನು ನಿಯೋಜಿಸಲಾಗಿತ್ತು. ಚಾಮರಾಜಪೇಟೆಯಿಂದ ಸಾಗಿದ ಗಣೇಶನ ಮುಂದೆಯೂ ಪೊಲೀಸರ ರೂಟ್ ಮಾರ್ಚ್ ಇತ್ತು.
ಇದನ್ನೂ ಓದಿ | ಭರ್ಜರಿ 18 ಗಂಟೆಗಳ ಮೆರವಣಿಗೆ ಬಳಿಕ ಶಿವಮೊಗ್ಗ ಗಣಪತಿ ವಿಸರ್ಜನೆ