Site icon Vistara News

Chandrayaan 3 : ಇವನು ವಿಕ್ರಮ್‌, ಇವಳು ಪ್ರಜ್ಞಾನ್‌; ನವಜಾತ ಶಿಶುಗಳಿಗೆ ಈ ಹೆಸರಿಟ್ಟು ಸಂಭ್ರಮಿಸಿದ ಯಾದಗಿರಿ ಕುಟುಂಬ!

New born Babies

ಯಾದಗಿರಿ: ಭಾರತದ ಚಂದ್ರಯಾನ್‌ 3 (Chandrayaan 3) ಯಶಸ್ಸು ದೇಶದ ಪ್ರತಿಯೊಬ್ಬರನ್ನೂ ಪ್ರಭಾವಿಸಿದೆ. ಅದು ಪ್ರತಿಯೊಬ್ಬರ ಎದೆಯಲ್ಲಿ ಹೆಮ್ಮೆ ಮತ್ತು ಸಂಭ್ರಮವನ್ನು ತುಂಬಿದೆ ಅನ್ನುವುದನ್ನು ಪ್ರೂವ್‌ ಮಾಡುವುದಕ್ಕೆ ಈ ಒಂದೇ ಉದಾಹರಣೆ ಸಾಕು. ಯಾದಗಿರಿಯಲ್ಲಿ ಕುಟುಂಬವೊಂದು (Yadagiri family) ನವಜಾತ ಶಿಶುಗಳಿಗೆ (Newborn babies) ಚಂದ್ರಯಾನ ಸಂಬಂಧಿತ ಹೆಸರುಗಳನ್ನು ಇಟ್ಟು ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದೆ. ಚಂದಮಾಮನನ್ನು ನೋಡಿ ಬೆಳೆಯಬೇಕಾದ ಪುಟ್ಟ ಮಕ್ಕಳಲ್ಲಿ ಅವನು ವಿಕ್ರಮ್‌, ಇವಳು ಪ್ರಜ್ಞಾನ್!‌ (Newborn babies named as Vikram and Pragyaan)

ಹೌದು ಚಂದ್ರಯಾನವನ್ನು ಇಷ್ಟು ಹೃದಯಕ್ಕೆ ಆಪ್ತವಾಗಿ ಕಟ್ಟಿಕೊಂಡಿದೆ ಯಾದಗಿರಿಯ ಒಂದು ಕುಟುಂಬ. ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಒಂದೇ ಕುಟುಂಬದಲ್ಲಿ ಒಂದೇ ತಿಂಗಳಲ್ಲಿ ಎರಡು ಮಕ್ಕಳು ಹುಟ್ಟಿವೆ. ಚಂದ್ರಯಾನದ ಹಬ್ಬದ ಜೋರಾಗಿ ನಡೆದು ಎಲ್ಲರೂ ಅದರ ಬಗ್ಗೆಯೇ ಮಾತನಾಡಿಕೊಂಡಾಗ ಈ ಕುಟುಂಬ ಮಕ್ಕಳಿಗೆ ವಿಶೇಷ ರೀತಿಯ ನಾಮಕರಣ ಮಾಡಲು ಮುಂದಾಗಿದೆ. ಅದರ ಫಲವೇ ವಿಕ್ರಮ್‌ ಮತ್ತು ಪ್ರಜ್ಞಾನ್‌ ಎಂಬ ಮುದ್ದಾದ ಹೆಸರು.

Vikram Lander and Pragyaan Rover

ವಡಗೇರಾ ಪಟ್ಟಣದಲ್ಲಿ ವಾಸವಾಗಿರುವ ಬಾಲಪ್ಪ ಹಾಗೂ ನಾಗಮ್ಮ ದಂಪತಿಗೆ ಜುಲೈ 28ರಂದು ಮಗುವಾಗಿತ್ತು. ಅದಕ್ಕೆ ಈಗ ವಿಕ್ರಮ್‌ ಎಂದು ಹೆಸರಿಡಲಾಗಿದೆ. ನಿಂಗಪ್ಪ ಮತ್ತು ಶಿವಮ್ಮ ದಂಪತಿಗೆ ಹೆಣ್ಣು ಮಗು ಹುಟ್ಟಿದ್ದು ಆಗಸ್ಟ್‌ 18ರಂದು. ಈ ಮಗುವಿಗೆ ಇಟ್ಟ ಹೆಸರು ಪ್ರಜ್ಞಾನ್‌!

ಅಂದ ಹಾಗೆ ಬಾಲಪ್ಪ ಮತ್ತು ನಿಂಗಪ್ಪ ಸಹೋದರರು. ಅವರ ತಾಯಿ ಈ ಮಕ್ಕಳಿಗೆ ಮುದ್ದಾದ ಹೆಸರು ಇಟ್ಟಿದ್ದಾರೆ. ಈ ಮಕ್ಕಳ ನಾಮಕರಣ ನಡೆದಿರುವುದು ಆಗಸ್ಟ್‌ 24ರಂದು.

ಅಮ್ಮನ ಕೈಯಲ್ಲಿ ಮುದ್ದಾದ ಮಗು

ಸಾಮಾನ್ಯವಾಗಿ ಒಂದು ಮಗುವಿಗೆ ಹೆಸರಿಡಲು ಹಲವು ಸುತ್ತಿನ ಮಾತುಕತೆಗಳು ಆಗಿರುತ್ತವೆ. ನಕ್ಷತ್ರ ಆಧರಿತ ಅಕ್ಷರಗಳಿಂದ ಆರಂಭವಾಗುವ ಹೆಸರು, ಹೆತ್ತವರ ಹೆಸರಿಗೆ ಸರಿ ಹೊಂದಿಕೆಯಾಗುವ ಹೆಸರು, ಅಜ್ಜ, ಅಜ್ಜಿಗೆ ಹಿತವಾಗುವ ಹೆಸರು ಮತ್ತು ಲೇಟೆಸ್ಟ್‌, ಎಲ್ಲಿಯೂ ಇಲ್ಲದ ಹೆಸರು.. ಹೀಗೆ ಬಗೆ ಬಗೆಯಲ್ಲಿ ಹುಡುಕಾಟ ನಡೆದಿರುತ್ತದೆ.

ಇಲ್ಲೂ ಹಾಗೆಯೇ ಚರ್ಚೆಗಳು ನಡೆದಿವೆ. ಈ ನಡುವೆ ಆಗಸ್ಟ್‌ 23ರಂದು ಚಂದ್ರಯಾನ ತನ್ನ ತುರೀಯ ಅವಸ್ಥೆಯನ್ನು ತಲುಪಿದೆ. ದೇಶದೆಲ್ಲೆಡೆ ಒಂದೇ ಮಾತು ಕೇಳಿಬಂದಿದೆ. ಅದುವೇ ಚಂದ್ರಯಾನ್‌, ವಿಕ್ರಮ್‌ ಮತ್ತು ಪ್ರಜ್ಞಾನ್‌. ಅಷ್ಟು ಹೊತ್ತಿಗೆ ಈ ಮನೆಯವರಿಗೆ ಅಗಸ್ಟ್ 24ರಂದು ನಡೆಯುವ ನಾಮಕರಣದಲ್ಲಿ ತಮ್ಮ ಮಕ್ಕಳಿಗೆ ಇದೇ ಹೆಸರು ಇಟ್ಟರೆ ಹೇಗೆ ಅಂತ. ಮಾತುಕತೆ ನಡೆದಾಗ ಎಲ್ಲರೂ ಒಮ್ಮತದಿಂದ ಒಪ್ಪಿದ್ದಾರೆ.

ಪ್ರಜ್ಞಾನ್‌ ಮತ್ತು ವಿಕ್ರಮ್‌ ಅವರ ಹೆಮ್ಮೆಯ ಅಜ್ಜಿ

ಇದು ಮಕ್ಕಳಿಗೆ ಹೆಸರೂ ಆಯಿತು. ಚಂದ್ರಯಾನ-3 ಯಶಸ್ವಿಗೊಳಿಸಿದ ಇಸ್ರೋದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲೂ ಆಯಿತು ಎಂಬ ಕಾರಣಕ್ಕಾಗಿ ಈ ಹೆಸರನ್ನು ಇಡಲು ತೀರ್ಮಾನವಾಯಿತು ಎನ್ನುತ್ತಾರೆ ಈ ಮನೆ ಮಂದಿ.

ಇದು ಬಾಲಪ್ಪ ಮತ್ತು ನಿಂಗಪ್ಪ ಕುಟುಂಬ ವಾಸವಾಗಿರುವ ಮನೆ.

ವಿಕ್ರಮ್‌ ಮತ್ತು ಪ್ರಜ್ಞಾನ್‌ ಬಗ್ಗೆ..

ಎಲ್ಲರಿಗೂ ತಿಳಿದಿರುವಂತೆ ವಿಕ್ರಮ್‌ ಮತ್ತು ಪ್ರಜ್ಞಾನ್‌ ಎನ್ನುವುದು ಚಂದ್ರಯಾನದಲ್ಲಿ ಕೊನೆಯವರೆಗೂ ಉಳಿದು ಚಂದ್ರನ ನೆಲವನ್ನು ಚುಂಬಿಸಿ ನಿಂತ ಉಪಕರಣಗಳ ಹೆಸರು. ಲ್ಯಾಂಡಿಂಗ್‌ ಮ್ಯಾನುಅಲ್‌ನಲ್ಲಿ ಇದ್ದ ಜೋಡಿ ಜೀವಗಳು ಇವು. 1749 ಕೆಜಿ ತೂಕದ ವಿಕ್ರಮ್‌ ಲ್ಯಾಂಡರ್‌ನ ಒಳಗಡೆ 26 ಕೆಜಿ ತೂಕದ ಪ್ರಜ್ಞಾನ್‌ ಇತ್ತು.

ಇದನ್ನೂ ಓದಿ: PM Narendra Modi : ವಿಜ್ಞಾನಿಗಳ ಮುಂದೆ ನಿಂತ ಭಾವುಕ ಮೋದಿ, ಉತ್ಸಾಹದ ಬುಗ್ಗೆ ಮೋದಿ.. ಕ್ಷಣ ಕ್ಷಣದ ಚಿತ್ರ ಸಂಪುಟ ಇಲ್ಲಿದೆ

ಒಮ್ಮೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ಕೆಲವು ಗಂಟೆಗಳ ಬಳಿಕ ಪ್ರಜ್ಞಾನ್‌ ಒಂದು ಏಣಿಯ ಮೂಲಕ ಚಂದ್ರನನ್ನು ಸ್ಪರ್ಶಿಸಿದೆ. ಈ ಪ್ರಜ್ಞಾನ್‌ ಚಂದ್ರದಲ್ಲಿ ಸುಮಾರು 20 ಮೀಟರ್‌ ಪರಿಧಿಯಲ್ಲಿ ಓಡಾಡಿದ ಅಲ್ಲಿನ ಮಾಹಿತಿಗಳನ್ನು ಸಂಗ್ರಹಿಸಿ ವಿಕ್ರಮ್‌ಗೆ ತಲುಪಿಸುತ್ತದೆ. ಅದು ಬೆಂಗಳೂರಿನ ನಿಯಂತ್ರಣ ಕೇಂದ್ರಕ್ಕೆ ಅದನ್ನು ರವಾನಿಸುತ್ತದೆ.

Vikram Lander and Pragyaan Rover

ಈ ಎರಡೂ ಉಪಕರಣಗಳು ಕೆಲಸ ಮಾಡುವುದು ಆಗಸ್ಟ್‌ 23ರಿಂದ ಆರಂಭವಾಗಿ 14 ದಿನಗಳ ಕಾಲ. ಅಂದರೆ ಚಂದ್ರನ ಹಗಲಿನ ಅವಧಿ ಮಾತ್ರ. ಒಮ್ಮೆ ಚಂದ್ರನಲ್ಲಿ ಕತ್ತಲಾದಾಗ ಇದೂ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

ಅಂದ ಹಾಗೆ, ವಿಕ್ರಮ್‌ ಲ್ಯಾಂಡರ್‌ನ್ನು ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ವಿಕ್ರಮ್‌ ಸಾರಾಭಾಯಿ ಅವರ ನೆನಪಿನಲ್ಲಿ ಹೆಸರಿಸಲಾಗಿದ್ದರೆ, ಪ್ರಜ್ಞಾನ್‌ ಅಂದರೆ ಜ್ಞಾನ ಎಂದರ್ಥ.

ವಿಜ್ಞಾನದ ಒಂದು ಸಂಶೋಧನೆ, ಸಾಧನೆ ಅತ್ಯಂತ ತಳಮಟ್ಟದಲ್ಲೂ ಕುತೂಹಲ ಕೆರಳಿಸಿದ್ದು ಮತ್ತು ಜನರು ಅದಕ್ಕೆ ಪ್ರೀತಿಯಿಂದ ಸ್ಪಂದಿಸಿದ ರೀತಿ ನಿಜಕ್ಕೂ ಅದ್ಭುತವೇ ಸರಿ ಅಲ್ವೇ?

Exit mobile version