Site icon Vistara News

Chandrayaan 3 : ಚಂದ್ರಲೋಕದಲ್ಲಿ ಲ್ಯಾಂಡರ್‌ ಇಳಿಸಿದ ಸಾಹಸಿಗರ ಪಟ್ಟಿಯಲ್ಲಿ ಮುಂಡರ್ಗಿಯ ಮೇಸ್ತ್ರಿ ಮಗನೂ ಇದ್ರು!

Basavaraja ISRO

ಗದಗ: ಚಂದ್ರಯಾನ 3 (Chandrayaan 3) ಯಶಸ್ಸು ಇಡೀ ಜಗತ್ತೇ ಭಾರತದತ್ತ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದೆ. ವಿಕ್ರಂ ಲ್ಯಾಂಡರ್‌ನ್ನು (Vikram Lander) ಅತ್ಯಂತ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ (South pole) ಇಳಿಸುವ ಮೂಲಕ ಇಸ್ರೋ ವಿಜ್ಞಾನಿಗಳು (ISRO Scientist) ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ನಾಲ್ಕು ವರ್ಷಗಳ ಕಾಲ ನಡೆಸಿದ ಪರಿಶ್ರಮದ ಫಲವೇ ಈ ಚಂದ್ರಯಾನ 3 ಯಶಸ್ಸು. ಇದರ ಹಿಂದೆ ಅದೆಷ್ಟೋ ವಿಜ್ಞಾನಿಗಳ ಶ್ರಮ ಇದೆ, ಪ್ರತಿಭೆ ಇದೆ. ಮುದ್ರಣ ಕಾಶಿ ಗದಗದ ಅಗ್ರಹಾರದ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಸುಧೀಂದ್ರ ಬಿಂದಗಿ ಅವರು ಇಸ್ರೋ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಿಜವೆಂದರೆ ಚಂದ್ರಯಾನ 3 ಯಶಸ್ಸು ಕಾಣುವವರೆಗೆ ಈ ಭಾಗದಲ್ಲಿ ಸುಧೀಂದ್ರ ಅವರ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಗೊತ್ತಿದ್ದವರಿಗೂ ಇವರು ಇಷ್ಟೊಂದು ದೊಡ್ಡ ಸಾಹಸದ ಹಿಂದೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿರಲಿಲ್ಲ. ಚಂದ್ರಯಾನ ಯಶಸ್ವಿಯಾಗುತ್ತಲೇ ಸುಧೀಂದ್ರ ಬಿಂದಗಿ ಈ ಭಾಗದಲ್ಲಿ ಹೀರೋ ಆಗಿ ಮಿಂಚಿದರು. ಎಲ್ಲರ ವಾಟ್ಸ್‌ ಆಪ್‌ ಸ್ಟೇಟಸ್‌ನಲ್ಲೂ ಅವರೇ ಅವರೇ!

ಸುಧೀಂದ್ರ ಅವರ ಸಾಲಿನಲ್ಲಿ ಗದಗ ಜಿಲ್ಲೆಯ ಇನ್ನೊಬ್ಬ ಯುವ ಪ್ರತಿಭೆ ಕೂಡಾ ಮಿಂಚಿದ್ದಾರೆ. ಅವರೇ ಮುಂಡರಗಿ ಪಟ್ಟಣದ ಕಟ್ಟಡ ಕಟ್ಟುವ ಮೇಸ್ತ್ರಿ ಒಬ್ಬರ ಮಗ ಬಸವರಾಜ ವೆಂಕಣ್ಣ ಕಲ್ಲಕುಟಿಗರ.

ಮುಂಡರಗಿಯ ಯುವಕ ಬಸವರಾಜ ವೆಂಕಣ್ಣ ಕಲ್ಲಕುಟಿಗರ ಅವರು ಚಂದ್ರಯಾನ-3 ವಿಕ್ರಮ್ ಲ್ಯಾಡರ್ ಸಾಫ್ಟ್ ಲ್ಯಾಂಡಿಂಗ್ ಸಿಸ್ಟಂನ್ನು ಸಜ್ಜುಗೊಳಿಸುವಲ್ಲಿ ಕೆಲಸ ಮಾಡಿದ್ದರು. ಸಾಫ್ಟ್‌ ಲ್ಯಾಂಡಿಂಗ್‌ ಮಾಡಲು ಸಹಾಯ ಮಾಡುವ SAC’s Moon Crater hazard detection system (ಚಂದ್ರನ ಕುಳಿಗಳ ಅಪಾಯ ಪತ್ತೆ ವ್ಯವಸ್ಥೆ)ಯನ್ನು ನೋಡಿಕೊಂಡಿದ್ದರು. ಚಂದ್ರಯಾನ -2 ಆರ್ಬಿಟರ್‌ನಿಂದ ಸೆರೆಹಿಡಿಯಲಾದ ಹೆಚ್ಚಿನ ರೆಸಲ್ಯೂಶನ್ ಚಿತ್ರದ ಮಾದರಿಗಳ ಮೇಲೆ ಇಸ್ರೋ ಹಿರಿಯ ವಿಜ್ಞಾನಿಗಳ ತಂಡವು ವಿನ್ಯಾಸಗೊಳಿಸಿದ ಸ್ವಯಂಚಾಲಿತ ಲ್ಯಾಂಡಿಂಗ್ ಕಾರ್ಯವಿಧಾನ ತಂಡದಲ್ಲಿ ಬಸವರಾಜ್ ಅವರು ಕೆಲಸ ಮಾಡಿದ್ದಾರೆ.

ಬಸವರಾಜ ಅವರು ಬೆಂಗಳೂರಿನ ಯು. ಆರ್. ರಾವ್ ಸೆಟಲೈಟ್ ಸೆಂಟರ್, ಜಿಯೋ ಸೈನ್ಸ್ ಡಿಪಾರ್ಟ್‌ಮೆಂಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ವಿಜ್ಞಾನಿ ಈ – ಗ್ರೇಡ್ ಹುದ್ದೆ ತಲುಪಿರುವುದು ಇವರ ಪರಿಶ್ರಮಕ್ಕೆ ತಕ್ಕ ಫಲವಾಗಿದೆ.

ಬಸವರಾಜ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಂಡರಗಿ ಪಟ್ಟಣದ ಸರಕಾರಿ ಶಾಸಕರ ಮಾದರಿ ಶಾಲೆ, ಪ್ರೌಢ ಶಿಕ್ಷಣವನ್ನ ಜೆ.ಎ. ಹೈಸ್ಕೂಲ್,ಹಾಗೂ ಗದಗನ ಜೆ.ಟಿ.ಕಾಲೇಜ್ ನಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿ, ತುಮಕೂರಿನ V.T.U.ನಲ್ಲಿ ಇಂಜಿನಿಯರಿಂಗ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಆರು ವರ್ಷಗಳ ಹಿಂದೆ ಇಸ್ರೋದಲ್ಲಿ ಜೂನಿಯರ್ ಸೈಂಟಿಸ್ಟ್ ಆಗಿ ನೇಮಕಗೊಂಡ ಬಸವರಾಜ ಅವರು ಹಲವು ಪ್ರಾಜೆಕ್ಟ್ ಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.‌

ಇದನ್ನೂ ಓದಿ : Chandrayaan -3 : ರೋವರ್​ ಚಂದ್ರನ ಮೇಲೆ ಅನ್ವೇಷಣೆ ಮಾಡಲು ಹೊರಟ ವಿಡಿಯೊ ಬಿಡುಗಡೆ ಮಾಡಿದ ಇಸ್ರೊ

ಚಳ್ಳಕೆರೆಯಲ್ಲಿ ಲ್ಯಾಂಡಿಂಗ್‌ ಮಾಡಿದ ತಂಡದಲ್ಲೂ ಇದ್ದರು ಬಸವರಾಜ್‌

ಚಂದ್ರಯಾನ 3 ಪ್ರಾಜೆಕ್ಟ್ ಗೂ ಮುನ್ನ, ಚಿತ್ರದುರ್ಗದ ಚಳ್ಳಕೆರೆ ಸಮೀಪದ ಉಳ್ಳಾರ್ತಿಕಾವಲ್ ವೈಜ್ಞಾನಿಕ ಪ್ರದೇಶದಲ್ಲಿ ಚಂದ್ರಯಾನ -3 ಇಳಿಯುವ ನೌಕೆಯ ಪ್ರಾಯೋಗಿಕ ಪರೀಕ್ಷೆ ಕೈಕೊಳ್ಳಲಾಗಿತ್ತು.‌ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ -3 ವಿಕ್ರಮ ನೌಕೆ ಇಳಿಯುವ ಸ್ಥಳವನ್ನು ಬೆಂಗಳೂರಿನ ಯು.ಆರ್.ರಾವ್ ಸ್ಯಾಟ್ ಲೈಟ್ ಸೆಂಟರ್ ನ ತಂಡ ಗುರುತಿಸುವ ಕೆಲಸ ಮಾಡುವುದರ ಜೊತೆಗೆ ಚಂದ್ರಯಾನ -3 ಲ್ಯಾಂಡಿಂಗನ್ನು ಪ್ರಾಯೋಗಿಕವಾಗಿ ಇಳಿಸುವ ಕೆಲಸ ಮಾಡಿತ್ತು. ಈ ತಂಡದಲ್ಲಿ ಮುಂಡರಗಿ ಪಟ್ಟಣದ ಬಸವರಾಜ ಕಲ್ಲಕುಟಿಗರ ಕೂಡಾ ಒಬ್ಬರು. ಸದ್ಯ ಚಿಕ್ಕ ವಯಸ್ಸಿನಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಮೂಲಕ ಮಹತ್ವದ ಚಂದ್ರಯಾನ -3 ಪ್ರಾಜೆಕ್ಟ್ ನಲ್ಲಿ ಬಸವರಾಜ ಅವರ ಪಾತ್ರಕ್ಕಾಗಿ ಮುಂಡರಗಿ ಪಟ್ಟಣದ ಜನತೆ ಹೆಮ್ಮೆ ಪಡುತ್ತಿದೆ.

Exit mobile version