Site icon Vistara News

ಪ್ರತಿಯೊಬ್ಬರೂ ಐದು ಗಿಡ ಬೆಳೆಸಿ; ವನಮಹೋತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕರೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಪ್ರತಿಯೊಬ್ಬರೂ ಐದು ಗಿಡಗಳನ್ನು ಬೆಳೆಸಬೇಕು ಎಂದು ರಾಜ್ಯದ ಜನತೆಗೆ ಕರೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರ ಸಹಭಾಗಿತ್ವದಿಂದ ಮಾತ್ರ ಅರಣ್ಯೀಕರಣದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದಿದ್ದಾರೆ.

ಬೆಂಗಳೂರು ನಗರ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಇಂದಿನ ಎಲ್ಲ ಬಡಾವಣೆಗಳಲ್ಲಿ ಉದ್ಯಾನಗಳು, ಗಿಡಮರಗಳಿವೆ. ಬೆಂಗಳೂರು ಉದ್ಯಾನನಗರ ಎಂದು ಕರೆಯಲ್ಪಡುತ್ತದೆ. ಈಗ ನಾಗರಿಕತೆ ಹೆಚ್ಚಾಗಿದ್ದು, ಉದ್ಯಮಗಳು ಹೆಚ್ಚಾಗಿದೆ. ಅರಣ್ಯ ಇಲಾಖೆ ವತಿಯಿಂದ ಬೆಂಗಳೂರಿನ ಸುತ್ತಲೂ ಅರಣ್ಯ ಉದ್ಯಾನವನ ಬೆಳೆಸಲು ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವನಮಹೋತ್ಸವದ ಅಂಗವಾಗಿ ಅರಣ್ಯ ಇಲಾಖೆಯು ನಿರ್ಮಿಸಿರುವ ಮಾಚೋಹಳ್ಳಿ ಟ್ರೀ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಪರಿಸರ ಬಹಳ ಮುಖ್ಯ. ಗಿಡಮರಗಳಿಂದ ಶುದ್ಧ ಗಾಳಿ ಸಿಗುತ್ತದೆ. ಗಿಡಮರಗಳಿಂದ ಶುದ್ಧವಾದ ಆಮ್ಲಜನಕ ದೊರೆಯುತ್ತದೆ. ಪರಿಸರದಲ್ಲಿ ಕಾರ್ಬನ್ ಅಂಶ ಹೆಚ್ಚಾದರೆ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಹವಾಮಾನ ಬದಲಾವಣೆ ಆಗುತ್ತಿದೆ. ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಾಗಿ ಜನರಿಗೆ ತೊಂದರೆಯಾಗುವ ಜೊತೆಗೆ ಪ್ರವಾಹ ಭೀತಿಯೂ ಎದುರಾಗುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಅರಣ್ಯೀಕರಣ ಬಹಳ ಮುಖ್ಯ ಎಂದರು.

ಈ ಸಾಲಿನ ಆಯವ್ಯಯದಲ್ಲಿ ಹಸಿರು ಬಜೆಟ್‌ನ್ನು ರೂಪಿಸಿ 100 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಪರಿಸರ ಹಾನಿಯನ್ನು ಸರಿದೂಗಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು, ಕ್ರಿಯಾ ಯೋಜನೆ ಸಿದ್ಧವಾಗುತ್ತಿದೆ. ಪ್ರತಿ ವರ್ಷವೂ ಪರಿಸರದ ಹಾನಿಯಿಂದಾಗುವ ಕೊರತೆಯನ್ನು ನೀಗಿಸುವ ಯೋಜನೆಗಳನ್ನು ರೂಪಿಸಲು ಅರಣ್ಯ ಇಲಾಖೆಗೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಬೀಜೋತ್ಸವ ಕಾರ್ಯಕ್ರಮ
ಬೀಜೋತ್ಸವ ಕಾರ್ಯಕ್ರಮವನ್ನು ರೂಪಿಸಿ ಎರಡೂವರೆ ಕೋಟಿ ಬೀಜಗಳನ್ನು ಈ ವರ್ಷ ಬಿತ್ತಲಾಗುತ್ತಿದೆ. ಅರಣ್ಯವೆಂದು ಗುರುತಿಸಲ್ಪಡುವ ಪ್ರದೇಶಗಳಲ್ಲಿ ಬೀಜಗಳನ್ನು ಬಿತ್ತುವ ಹಾಗೂ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಮಾಡಲಾಗುವುದು ಎಂದರು.

ಹಳೇ ಬೇರು, ಹೊಸ ಚಿಗುರು ಒಂದಾದಾಗ ಮಾತ್ರ ಅರಣ್ಯೀಕರಣ ಯಶಸ್ವಿಯಾಗುತ್ತದೆ. ಮಕ್ಕಳು ನೆಡುವ ಗಿಡಗಳಿಗೆ ಒಂದು ಹೆಸರು ನೀಡಬೇಕು. ನಿಮ್ಮ ಪ್ರೀತಿಪಾತ್ರರ ಹೆಸರನ್ನು ನೀಡಿ, ಆಗ ಆ ಗಿಡದೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚುತ್ತದೆ ಎಂದು ಅವರು ಮಕ್ಕಳಿಗೆ ಕರೆ ನೀಡಿದ್ದಾರೆ.

ಮಕ್ಕಳಲ್ಲಿ ಗಿಡಮರಗಳನ್ನು ಆರೈಕೆಯಲ್ಲಿ ಆಸಕ್ತಿಯನ್ನು ಬೆಳೆಸಲು ಸರ್ಕಾರದೊಂದಿಗೆ ಸಾರ್ವಜನಿಕರು, ಸಂಘಸಂಸ್ಥೆಗಳೂ ಕೈಜೋಡಿಸಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಗಿಡಗಳನ್ನು ನೆಡಬೇಕು ಎಂದರು.

ರಾಜ್ಯದದಲ್ಲಿರುವ ಶೇ. 21 ರಷ್ಟಿರುವ ಅರಣ್ಯ ಪ್ರದೇಶವನ್ನು ಶೇ. 30 ಕ್ಕೆ ಏರಿಸಬೇಕು. ಈ ದಿಸೆಯಲ್ಲಿ ಅರಣ್ಯ ಇಲಾಖೆಗೆ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಜಾಗತಿಕ ಸ್ಟಾರ್ಟ್‌ಅಪ್‌ ಪರಿಸರ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಬೆಂಗಳೂರು: ಜಿಎಸ್‌ಇಆರ್‌ ಸಮೀಕ್ಷೆ

Exit mobile version