ಬೆಂಗಳೂರು: ಮಕ್ಕಳ ವಿಚಾರದಲ್ಲಿ ಪೋಷಕರು ಎಷ್ಟೇ ಎಚ್ಚರವಾಗಿದ್ದರೂ ಸಾಲದು. ಮಕ್ಕಳನ್ನು ಆಟವಾಡಲು ಬಿಟ್ಟಾಗ (Child death) ಅವರ ಮೇಲೆ ಒಂದು ಕಣ್ಣು ಇಟ್ಟಿರಬೇಕು. ಇಲ್ಲದಿದ್ದರೆ ಅವಘಡಗಳು ಸಂಭವಿಸುತ್ತವೆ. ಸದ್ಯ ಆಟವಾಡುತ್ತಿದ್ದಾಗ ನೀರಿನ ಸಂಪ್‌ಗೆ ಬಿದ್ದು (Drowned in water) ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಆಯಿದಾ (5) ಮೃತ ಬಾಲಕಿ. ಬಾಡಿಗೆದಾರರು ನೀರಿನ ಸಂಪ್‌ನ ಕ್ಯಾಪ್ ಓಪನ್ ಮಾಡಿ ಒಳ ಹೋಗಿದ್ದರು. ಇದೇ ವೇಳೆ ಆಯಿದಾ ತಾಯಿ ಆಟವಾಡಲು ಬಿಟ್ಟು ಮನೆಯೊಳಗೆ ಹೋಗಿದ್ದಾಳೆ.
ಮನೆ ಮುಂದೆ ಆಟವಾಡುತ್ತಿದ್ದಾಗ ಆಯಿದಾ ಆಯತಪ್ಪಿ ಸಂಪ್‌ನಲ್ಲಿ ಬಿದ್ದಿದ್ದಾಳೆ. ಸಂಪ್‌ನಲ್ಲಿ ನೀರು ತುಂಬಿ ಇದ್ದಿದ್ದರಿಂದ ಆಯಿದಾ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ತುಂಬಾ ಸಮಯದವರೆಗೆ ಬಾಲಕಿ ಕಾಣದಿದ್ದಾಗ ಅನುಮಾನಗೊಂಡು ಸಂಪ್‌ನಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ.
ನಿಲ್ಲುತ್ತಿದೆ ಮಕ್ಕಳ ಹೃದಯ! ಹೆಚ್ಚಾಯ್ತು ಅಲ್ಪಾಯುಷ್ಯದ ಭಯ; ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ
ಉಡುಪಿ: 60 ವರ್ಷ ದಾಟಿದ ನಂತರ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗಳೆಲ್ಲವೂ ಚಿಕ್ಕ ವಯಸ್ಸಿಗೆ ಕಾಡುವಂತಾಗಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಅಫ್ಕಾರ್ (17) ಮೃತ ದುರ್ದೈವಿ.
ಅಫ್ಕಾರ್ ಕಲ್ಯಾಣಪುರ ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ಓದುತ್ತಿದ್ದ. ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಸೇಶನ್ ಆಫ್ ಇಂಡಿಯಾದ ಸಕ್ರಿಯ ಸದಸ್ಯನಾಗಿದ್ದ. ಅಫ್ಕಾರ್ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಡಿಸೆಂಬರ್ 6ರಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದ.
ಕಳೆದ 18ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದ ಅಫ್ಕಾರ್‌ಗೆ ಊರಿಗೆ ಹಿಂದಿರುಗಿದ ಸಂದರ್ಭ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಗೆ ಸಾಗಿಸುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದ.
ಕುಸಿದು ಬಿದ್ದವಳ ಹೃದಯ ಬಡಿತವೇ ನಿಂತಿತ್ತು!
ಚಿಕ್ಕಮಗಳೂರಿನಲ್ಲಿ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಳು. ಬುಧವಾರ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದಾಗ ಕುಸಿದು ಬಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿತ್ತು. 13 ವರ್ಷದ ಬಾಲಕಿ ಸೃಷ್ಟಿ ಮೃತಪಟ್ಟ ಬಾಲಕಿಯಾಗಿದ್ದಾಳೆ. ಮೂಡಿಗೆರೆ ತಾಲೂಕಿನ ಕೆಸವಳಲು ಜೋಗಣ್ಣನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.
ದಾರದಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಶಾಲೆಗೆ ತೆರಳುತ್ತಿದ್ದಾಗ ಹಠಾತ್ ಆಗಿ ಕುಸಿದು ಬಿದ್ದಿದ್ದಳು. ಹೀಗಾಗಿ ಸೃಷ್ಟಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಮೃತಪಟ್ಟಿದ್ದಾಳೆ. ಬಳಿಕ ಪರೀಕ್ಷೆ ನಡೆಸಿದ ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆ ವೈದ್ಯರು ಹೃದಯಾಘಾತವಾಗಿದೆ ಎಂದು ಘೋಷಿಸಿದ್ದಾರೆ.
ಪ್ರಾಥಮಿಕ ಆಸ್ಪತ್ರೆಯಲ್ಲಿ ಇಲ್ಲ ಮೂಲ ಸೌಕರ್ಯ
ದಾರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇರಲಿಲ್ಲ. ಅಲ್ಲದೆ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳು ಸಹ ಇಲ್ಲ. ಈ ಕಾರಣದಿಂದ ಬಾಲಕಿಯೊಬ್ಬಳು ಮೃತಪಟ್ಟಂತೆ ಆಗಿದೆ ಎಂದು ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಗ್ರಾಮದಲ್ಲೇ ಆಸ್ಪತ್ರೆಯಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮೂಡಿಗೆರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸೃಷ್ಟಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಗೋಳಿಡುತ್ತಿದ್ದಾರೆ.
ಸೃಷ್ಟಿಗೆ ಆಗಾಗ ಇತ್ತು ತಲೆ ಸುತ್ತುವ ಸಮಸ್ಯೆ
ಸೃಷ್ಟಿಗೆ ಆಗಾಗ ತಲೆ ಸುತ್ತುವ ಸಮಸ್ಯೆ ಇತ್ತು ಎನ್ನಲಾಗಿದೆ. ಆದರೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ವೈದ್ಯರು ಸಲಹೆ ನೀಡುವುದೇನೆಂದರೆ, ಚಿಕ್ಕ ಮಕ್ಕಳಿಗೆ ತಲೆ ಸುತ್ತುವ ಸಂದರ್ಭ ಇದ್ದರೆ ಅವರನ್ನು ಕೂಡಲೇ ತಜ್ಞ ವೈದ್ಯರಿಗೆ ತೋರಿಸಬೇಕು. ಇದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ