ಬೆಂಗಳೂರು: ಮಕ್ಕಳು ಶಾಲೆಯಲ್ಲಿ ವಿದ್ಯೆ ಕಲಿತು ಉತ್ತಮ ನಾಗರಿಕರಾಗಬೇಕೆ ವಿನಃ ಬಾಲಕಾರ್ಮಿಕರಾಗಬಾರದು. ಈ ಪಾಠವನ್ನು ಶಾಲೆಯಲ್ಲಿ ಬೋಧನೆ ಮಾಡಿದ್ದಷ್ಟೆ ಅಲ್ಲದೆ ಸಮಾಜದಲ್ಲೂ ಅದರ ಪಾಲನೆಗೆ ಮುಂದಾದ ಶಿಕ್ಷಕನನ್ನು ಪೆಟ್ರೋಲ್ ಬಂಕ್ ಮಾಲೀಕ ಹಾಗೂ ಆತನ ಗುಂಪು ಥಳಿಸಿದ ಘಟನೆ ನಡೆದಿದೆ.
ಬಾಲ ಕಾರ್ಮಿಕನ ಬಗ್ಗೆ ತಿಳಿದುಕೊಳ್ಳಲು ಹೋಗಿ ಶಿಕ್ಷಕರೊಬ್ಬರು ಹಲ್ಲೆಗೊಳಗಾಗಿದ್ದಾರೆ. ಜೈನ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿರುವ ಚಿಕ್ಕ ತಿಮ್ಮಯ್ಯ ಅವರೇ ಪೆಟ್ರೋಲ್ ಬಂಕ್‌ನಲ್ಲಿ ಹಲ್ಲೆಗೊಳಗಾದವರು.
ಚಿಕ್ಕತಿಮ್ಮಯ್ಯ ಅವರು ಬ್ಯಾಟರಾಯನಪುರದ ರಚನಾ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಲು ಹೋಗಿದ್ದರು. ಈ ವೇಳೆ ಚಿಕ್ಕ ಹುಡುಗನೊಬ್ಬ ಪೆಟ್ರೋಲ್ ಹಾಕುತ್ತಿದ್ದನ್ನು ಗಮನಿಸಿದರು. ಬಾಲಕಾರ್ಮಿಕನಂತೆ ಕಂಡ ಹಿನ್ನೆಲೆಯಲ್ಲಿ ಆತನನ್ನು ಮಾತನಾಡಿಸಿ ವಿವರ ಪಡೆದುಕೊಳ್ಳಲು ಯತ್ನಿಸಿದ್ದರು. ಈ ವಿಚಾರವನ್ನು ಪೆಟ್ರೋಲ್ ಬಂಕ್ ಮ್ಯಾನೇಜರ್ ಮಾದೇಶ್ ಗಮನಿಸಿದ್ದಾನೆ. ಮಾದೇಶ್ ಬಳಿ ತೆರಳೀದ ಶಿಕ್ಷಕ, ಬಾಲಕನ ಕುರಿತು ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ | ಆಸ್ತಿ ವಿಚಾರಕ್ಕೆ ಮಗನಿಗೇ ಬೆಂಕಿಯಿಟ್ಟ ಅಪ್ಪ: ವಾರ ನರಳಿ ಪ್ರಾಣ ಬಿಟ್ಟ ಪುತ್ರ
ಹುಡುಗನ ಮಾರ್ಕ್ಸ್ ಕಾರ್ಡ್ ಹಾಗೂ ವಯೋಮಿತಿಯ ಡಿಟೇಲ್ಸ್ ಕೊಡಿ ಎಂದು ತಿಳಿಸಿದ್ದಾರೆ. ಇದರಿಂದ ಕೆರಳಿದ ಮಾದೇಶ ಹಾಗೂ ಆತನ ಗುಂಪು, ಶಿಕ್ಷಕನ ಮೇಲೆ ಹಲ್ಲೆ ನಡೆಸಿದೆ. ಮಾಲೀಕ ದೇವರಾಜ್ ಬರುವವರೆಗೂ ಚಿಕ್ಕತಿಮ್ಮಯ್ಯ ಅವರ ಬೈಕ್ ನೀಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಬೈಕ್ ಕೀ ಕಿತ್ತುಕೊಂಡು ಇರಿಸಿಕೊಂಡಿದ್ದಾರೆ.
ನಂತರ ಮಾಲೀಕ ದೇವರಾಜ್ ಬಂದಿದ್ದಾನೆ. ಬಂದವನೇ ಶಿಕ್ಷಕನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಅವಿತು ಪೊಲೀಸರಿಗೆ ಕರೆ ಮಾಡಿದ್ದೇನೆ ಎಂದು ಶಿಕ್ಷಕರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | ದಿನವೂ ಸಾಯುವುದಕ್ಕಿಂತ ಒಮ್ಮೆಲೇ ಸಾಯೋದು ಒಳ್ಳೇದಲ್ವಾ? ಅಂತ ಸ್ಟೇಟಸ್ ಹಾಕಿದ್ದರು ಆ ಸಹೋದರಿಯರು