ಬೆಂಗಳೂರು: ಅತಿಸಾರ ಮತ್ತು ನಿರ್ಜಲೀಕರಣದಿಂದ ಅಸ್ವಸ್ಥಗೊಂಡು (Cholera Outbreak) ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಸ್ಟೆಲ್ ವಿದ್ಯಾರ್ಥಿಗಳು ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದರು. ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿಕ್ಟೋರಿಯಾ ಆಸ್ಪತ್ರೆ ಕಿಚನ್‌ನಿಂದ ತಿಂಡಿ, ಊಟ ಸರಬರಾಜು ಆಗುತ್ತಿತ್ತು. ವಿದ್ಯಾರ್ಥಿಗಳಲ್ಲಿ ಕಾಲರಾ ಪತ್ತೆಯಾದ (Cholera disease) ಹಿನ್ನೆಲೆಯಲ್ಲಿ ಹಾಸ್ಟೆಲ್ ಕಿಚನ್ ಬಂದ್ ಮಾಡಲಾಗಿದೆ. ಜತೆಗೆ ಹಾಸ್ಟೆಲ್ ವಾರ್ಡನ್ ಅಖಿಲಾಂಡೇಶ್ವರಿ ಅವರನ್ನು ಅಮಾನತುಗೊಳಿಸಲಾಗಿದೆ. ಅಮಾನತು ಮಾಡಿ ಬೆಂಗಳೂರು ಮೆಡಿಕಲ್ ಕಾಲೇಜು ಡೀನ್ ಡಾ.ರಮೇಶ್ ಕೃಷ್ಣ ಆದೇಶ ಹೊರಡಿಸಿದ್ದಾರೆ.
ಹಾಸ್ಟೆಲ್ ತೊರೆದ ವಿದ್ಯಾರ್ಥಿನಿಯರು
ಬೆಂಗಳೂರು ವೈದ್ಯಕೀಯ ಕಾಲೇಜು ಹಾಸ್ಟೆಲ್‌ನ ಕೆಲ ವಿದ್ಯಾರ್ಥಿಗಳಿಗೆ ಕಾಲರಾ ಪತ್ತೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದಿದ್ದಾರೆ. ಹಾಸ್ಟೆಲ್‌ನಲ್ಲಿ ಉಳಿದಿರುವ ಕೆಲ ವಿದ್ಯಾರ್ಥಿಗಳು ಬಾಟೆಲ್ ನೀರಿನ ಮೊರೆ ಹೋಗಿದ್ದಾರೆ. ಹೊರಗಿನಿಂದ ಬಾಟೆಲ್ ನೀರು ಖರೀದಿಸಿ ಬಳಸುವಂತಾಗಿದೆ. ಹಾಸ್ಟೆಲ್‌ನಲ್ಲಿ ಕಲುಷಿತ ನೀರು ಅಥವಾ ಕಲುಷಿತ ಆಹಾರದಿಂದ ಕಾಲರಾ ಬಂದಿರುವ ಶಂಕೆ ಇದೆ. ಈ ಹಿನ್ನೆಲೆ ಈಗಾಗಲೇ ಹಾಸ್ಟೆಲ್ ಆಹಾರ ಮತ್ತು ನೀರಿನ ಸ್ಯಾಂಪಲ್ ಅನ್ನು ಬಿಬಿಎಂಪಿ ಪರೀಕ್ಷೆಗೆ ಒಳಪಡಿಸಿದೆ. ಹಾಸ್ಟೆಲ್ ಆಹಾರ ಪದಾರ್ಥಗಳು ಹಾಗೂ ಜಲಮಂಡಳಿ ನೀರು, ಆರ್‌ಓ ವಾಟರ್ ಪರೀಕ್ಷೆಗೆ ಒಳಪಡಿಲಾಗಿದೆ.
21 ವೈದ್ಯಕೀಯ ವಿದ್ಯಾರ್ಥಿನಿಯರು ಡಿಸ್ಚಾರ್ಜ್
ಅತಿಸಾರ ಮತ್ತು ನಿರ್ಜಲೀಕರಣದರಿಂದ ಅಸ್ವಸ್ಥಗೊಂಡು (Cholera Outbreak) ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಸ್ಟೆಲ್‌ನ 21 ವಿದ್ಯಾರ್ಥಿನಿಯರು ಚೇತರಿಸಿಕೊಂಡು ಶನಿವಾರ ರಾತ್ರಿ ಡಿಸ್ಚಾರ್ಜ್ ಆಗಿದ್ದು, ಉಳಿದ 21 ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಮುಂದುವರಿದಿದೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ(Bangalore Medical College and Research Institute-BMCRI) ಹಾಸ್ಟೆಲ್‌ನಲ್ಲಿ ಅತಿಸಾರ ಮತ್ತು ನಿರ್ಜಲೀಕರಣದರಿಂದ ಅಸ್ವಸ್ಥಗೊಂಡಿದ್ದ 47 ವಿದ್ಯಾರ್ಥಿನಿಯರನ್ನು ಶುಕ್ರವಾರ (ಏ.5) ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಢಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿನಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗುತ್ತಿದೆ.
ಇನ್ನು ಶನಿವಾರ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡ 21 ವಿದ್ಯಾರ್ಥಿನಿಯರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದ 21 ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಕಾಲರಾ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆ
ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ 3, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 6 ಹಾಗೂ ರಾಮನಗರ ಜಿಲ್ಲೆಯಲ್ಲಿ 1 ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಕಾಲರಾ ಹರಡುವಿಕೆ ಹೇಗ?
ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಮಾನವರಿಗೆ ಹರಡುತ್ತದೆ. ಕಾಲರಾ ಕರುಳಿನ ಸೋಂಕು ಆಗಿದ್ದು, ತೀವ್ರವಾದ ಅತಿಸಾರ ಭೇದಿ, ವಾಂತಿ ಇದರ ಪ್ರಮುಖ ಲಕ್ಷಣವಾಗಿದೆ. ಉಳಿದಂತೆ ಈ ರೋಗ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಮುನ್ನೆಚ್ಚರಿಕಾ ಕ್ರಮಗಳೇನು?
-ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು.
-ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು.
-ದೇಹವು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು.
-ವಾಂತಿ, ಭೇದಿಯಿಂದ ದೇಹದೊಳಗಿನ ನೀರಿನ ಅಂಶ ಹೊರಬರುತ್ತದೆ. ಹೀಗಾಗಿ ನೀರಿಗೆ ಎಲೆಕ್ಟ್ರೋಲೈಟ್ ಬೆರಸಿ ಕುಡಿಯಿರಿ.
-ವಾಂತಿ, ಭೇದಿ ಕಾಣಿಸಿಕೊಂಡ ಕೂಡಲೇ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ
-ಕಾಲರಾ ಬ್ಯಾಕ್ಟಿರಿಯಾ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ