Site icon Vistara News

Circular Train : ಮೆಟ್ರೋ ರೈಲಿನ ಬಳಿಕ ಬೆಂಗಳೂರಿಗೆ ಬರಲಿದೆ ಲೋಕಲ್‌ ಟ್ರೇನ್‌, ರೂಟ್‌ ಇಲ್ಲಿದೆ!

local train to be introduced in Bangalore soon

ಬೆಂಗಳೂರು: ಮೆಟ್ರೋ ರೈಲು ಸಂಚಾರ (Namma Metro) ಬೆಂಗಳೂರಿನ ಸಂಚಾರ ದಟ್ಟಣೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಶೀಘ್ರವೇ ಸಬರ್ಬನ್‌ ರೈಲು ಸೇವೆಗಳಿಗೆ (Suburban train service) ಹಳಿಗಳು ಅಣಿಯಾಗಲಿವೆ. ಅದರ ಬೆನ್ನಿಗೇ ಇನ್ನೊಂದು ದೊಡ್ಡ ಮಟ್ಟದ ಸೇವೆ ಬೆಂಗಳೂರಿಗೆ ದೊಡ್ಡ ಮಟ್ಟದ ಸಹಾಯವನ್ನು ಮಾಡಲಿದೆ. ಅದುವೇ ವೃತ್ತಾಕಾರದ ರೈಲು ಜಾಲ (Circular rail Network).

ಬೆಂಗಳೂರಿನ ಹೊರವಲಯದಲ್ಲಿ ಸುತ್ತುವ ವರ್ತುಲಾಕಾರದ ಈ ರೈಲುಜಾಲದ (Circular Train) ನಿರ್ಮಾಣಕ್ಕೆ ನೈಋತ್ಯ ರೈಲ್ವೇ ಅನುಮತಿಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸುವ ಕಾರ್ಯಾಚರಣೆ ಆರಂಭವಾಗಲಿದೆ. ಒಟ್ಟು 287 ಕಿ.ಮೀ. ಉದ್ದದ ವೃತ್ತಾಕಾರದ ಈ ರೈಲು ಮಾರ್ಗ ಬೆಂಗಳೂರಿನ ಪಾಲಿಗೆ ಲೋಕಲ್‌ ರೈಲು ಸೇವೆಯಾಗಲಿದೆ. ಈ ಮೂಲಕ ಈಗ ಇರುವ ರೈಲುಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.

ಈ ರೈಲು ಯೋಜನೆ ನಮ್ಮ ಮೆಟ್ರೋ ಮತ್ತು ಬೆಂಗಳೂರು ಸಬರ್ಬನ್‌ ರೈಲು ಸೇವೆಗಳಿಗೆ ಪೂರಕವಾಗಿ ಕೆಲಸ ಮಾಡಲಿದೆ. ವೃತ್ತಾಕಾರದ ರೈಲು ಜಾಲವು ಮೆಟ್ರೋ ನಿಲ್ದಾಣಗಳನ್ನು ಕೂಡಾ ಹಾದು ಹೋಗಲಿದ್ದು, ಒಂದು ಮೆಟ್ರೋ ನಿಲ್ದಾಣದಿಂದ ಆಸುಪಾಸಿನ ಬೇರೆ ಪ್ರದೇಶಗಳಿಗೆ ಹೋಗಲು ಅನುಕೂಲ ಕಲ್ಪಿಸಲಿದೆ. ಮತ್ತು ವೃತ್ತಾಕಾರದ ಪಥದಲ್ಲಿ ಬರುವ ಪ್ರದೇಶಗಳಿಂದ ಮೆಟ್ರೋ ನಿಲ್ದಾಣಗಳಿಗೂ ಸಂಪರ್ಕ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಸಂಸದರಾಗಿರುವ ಪಿ.ಸಿ. ಮೋಹನ್‌ ಅವರು ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದು, ಬೆಂಗಳೂರಿನ ಲೋಕಲ್‌ ರೈಲು ಸೇವೆಯಲ್ಲಿ ಕ್ರಾಂತಿಯೇ ಉಂಟಾಲಿದೆ ಎಂದಿದ್ದಾರೆ.

ವೃತ್ತಾಕಾರದ ರೈಲು ಓಡಾಡುವ ಜಾಗ ಯಾವುದು?

ಇದು ಹಾಸನ ರಸ್ತೆಯ ಸೋಲೂರು, ತುಮಕೂರು ರಸ್ತೆಯ ನಿಡುವಂಡ, ಗೌರಿಬಿದನೂರಿಗೆ ಹೋಗುವ ರಸ್ತೆಯಲ್ಲಿ ಬರುವ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ರಸ್ತೆಯ ದೇವನಹಳ್ಳಿ, ಬಂಗಾರ್‌ಪೇಟೆಗೆ ಹೋಗುವ ರಸ್ತೆಯಲ್ಲಿ ಬರುವ ಮಾಲೂರು, ಆನೇಕಲ್‌ ರೋಡ್‌ನ ಹೀಲಾಳಿಗೆ, ರಾಮನಗರ ರಸ್ತೆಯ ಹೆಜ್ಜಾಲ, ಅಲ್ಲಿಂದ ಮತ್ತೆ ಹಾಸನ ರಸ್ತೆಯ ಸೋಲೂರಿಗೆ ಸಂಪರ್ಕಿಸಿ ತನ್ನ ವೃತ್ತಾಕಾರದ ಪಥವನ್ನು ಪೂರ್ಣಗೊಳಿಸುತ್ತದೆ.

ಇದೀಗ ರೈಲ್ವೇ ಇಲಾಖೆಯು ಈ ಯೋಜನೆ ಸಾಗಬೇಕಾದ ದಾರಿಯನ್ನು ಗುರುತಿಸಲು ಸ್ಥಳ ಪರಿಶೀಲನೆಗಾಗಿ 72 ಕೋಟಿ ರೂ. ಬಿಡುಗಡೆ ಮಾಡಿದೆ. ಎಲ್ಲೆಲ್ಲಿ ನಿಲ್ದಾಣಗಳಿರಬೇಕು, ಟರ್ಮಿನಲ್ ಸೌಲಭ್ಯ, ಭೂಮಿ ಅವಶ್ಯಕತೆ, ಸೇತುವೆ ಮತ್ತಿತರ ಕಾಮಗಾರಿಗಳನ್ನು ಕುರಿತು ಸಮೀಕ್ಷೆ ನಡೆಯಲಿದೆ.

ಯಾರಿಗೆ ಹೆಚ್ಚು ಉಪಯೋಗ?

ಈ ಸರ್ಕ್ಯುಲರ್‌ ರೈಲು ಮಾರ್ಗವು ಸಬ್ ಅರ್ಬನ್ ಮತ್ತು ಮೆಟ್ರೋ ರೈಲಿಗೆ ಪೂರಕವಾಗಿ ಕೆಲಸ ಮಾಡಲಿದೆ. ಈ ನೆಟ್ ವರ್ಕ್ ಮಾರ್ಗವು ಪ್ರಮುಖ ಸ್ಥಳಗಳಾದ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ದೇವನಹಳ್ಳಿ, ಕೈಗಾರಿಕಾ ಪ್ರದೇಶಗಳು ಮತ್ತು ಉಪನಗರಗಳಿಗೆ ಸಮೀಪವಿರುವ ಹೀಲಳಿಗೆ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ಇತರ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದೆ. ಈ ಸೇವೆಯಿಂದ ಉಪನಗರಗಳಲ್ಲಿ ವಾಸವಿದ್ದು ಬೆಂಗಳೂರಿಗೆ ಹೋಗಿ ಬರುವವರಿಗೆ ಸಹಾಯವಾಗಲಿದೆ. ಈ ಮಾರ್ಗದಲ್ಲಿ ಮೆಮು ಮತ್ತು ಡೆಮು ರೈಲುಗಳನ್ನು ಓಡಿಸುವುದರಿಂದ ದೂರ ದೂರಕ್ಕೆ ಸಂಚರಿಸುವ ರೈಲುಗಳ ಸಮಯ ಉಳಿಯುತ್ತದೆ ಎನ್ನಲಾಗಿದೆ.

local train to be introduced in Bangalore soon

ಒಟ್ಟು 287 ಕಿ.ಮೀ. ಉದ್ದದ ರೈಲು ಮಾರ್ಗ

ನಿಡುವಂಡದಿಂದ ದೊಡ್ಡಬಳ್ಳಾಪುರವರೆಗೆ 40.9 ಕಿಮೀ
ದೊಡ್ಡಬಳ್ಳಾಪುರದಿಂದ ದೇವನಹಳ್ಳಿವರೆಗೆ 28.5 ಕಿಮೀ
ದೇವನಹಳ್ಳಿಯಿಂದ ಮಾಲೂರುವರೆಗೆ 46.5 ಕಿಮೀ
ಮಾಲೂರಿನಿಂದ ಹೀಲಾಳಿಗೆವರೆಗೆ 52 ಕಿಮೀ
ಹೀಲಾಳಿಗೆಯಿಂದ ಹೆಜ್ಜಾಲವರೆಗೆ 42 ಕಿಮೀ
ಹೆಜ್ಜಾಲದಿಂದ ಸೋಲೂರುವರೆಗೆ 43.5 ಕಿಮೀ
ಸೋಲೂರಿನಿಂದ ನಿಡುವಂಡವರೆಗೆ 34.2 ಕಿಮೀ

ವಿಶೇಷವೇನೆಂದರೆ ಲೋಕಲ್‌ ರೈಲು ಸಂಚರಿಸುವ ಮಾರ್ಗದಲ್ಲಿ ಬರುವ ಪ್ರಮುಖ ನಿಲ್ದಾಣಗಳಿಂದ ರೈಲು ನಿಲ್ದಾಣಕ್ಕೆ ಸಂಪರ್ಕವಿರುತ್ತದೆ. ಮೆಟ್ರೋಗೂ ಕನೆಕ್ಷನ್‌ ದೊರೆಯಲಿದೆ. ನಿಡುವಂಡದಿಂದ ಚಿಕ್ಕಬಾಣಾವಾರ ಮೂಲಕ ಬೆಂಗಳೂರಿಗೆ ಸಂಪರ್ಕ ಸಿಗಲಿದೆ. ಬೆಂಗಳೂರು ಕಂಟೋನ್ಮೆಂಟ್ ಮೂಲಕ ಮಾಲೂರಿಗೆ ಸಂಪರ್ಕವಿದೆ.

ಇದನ್ನೂ ಓದಿ : Namma Metro: ನಮ್ಮ ಮೆಟ್ರೋದಿಂದ ಕ್ಯೂಆರ್‌ ಗ್ರೂಪ್‌ ಟಿಕೆಟ್‌ ಪರಿಚಯ; ಎಷ್ಟು ಮಂದಿ ಪ್ರಯಾಣಿಸಬಹುದು?

ಈ ಯೋಜನೆ ಜಾರಿಗೆ ಬರುವುದು ಯಾವಾಗ?

ಈ ಯೋಜನೆಯ ಆರಂಭಿಕ ಕೆಲಸಗಳು ಈಗ ಆರಂಭವಾಗಿವೆ. ಮೊದಲು ಸಮೀಕ್ಷೆ ನಡೆದು ವರದಿ ನೀಡಬೇಕಾಗುತ್ತದೆ. ನಂತರ ಭೂಮಿ ಸ್ವಾಧೀನ ಅದರ ಬಳಿಕ ಕಾಮಗಾರಿ ಆರಂಭ. ಪೂರ್ಣವಾಗಿ ಹಳಿ ಮತ್ತು ರೈಲು ನಿಲ್ದಾಣಗಳ ನಿರ್ಮಾಣ ಆಗಬೇಕಾಗಿದೆ. ಹೀಗಾಗಿ ಇನ್ನು 10 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Exit mobile version