Site icon Vistara News

ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿ ತೆರವು, ಸರ್ವೆ ಕಾರ್ಯ ಮುಂದುವರಿಕೆ

ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ದಾಸರಹಳ್ಳಿ ವಲಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ ಮೂರೂಕಾಲು ಗುಂಟೆ ಜಾಗದಲ್ಲಿ ಒತ್ತುವರಿಯಾಗಿದ್ದ 11 ಸ್ಥಳಗಳ ಪೈಕಿ ಬಹುತೇಕ ಒತ್ತುವರಿ ಭಾಗವನ್ನು ತೆರವುಗೊಳಿಸಿದ್ದು, ಶುಕ್ರವಾರವೂ ಕಾರ್ಯಾಚರಣೆಯನ್ನು ಮುಂದುವರಿಸಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ಭಾಗದಲ್ಲಿ ಹಿಟಾಚಿಯ ಮೂಲಕ ತೆರವುಗೊಳಿಸಿದ್ದು, ಇನ್ನು ಕೆಲವೆಡೆ ಮನೆಯ ಕೆಲ ಭಾಗವನ್ನು ಮನೆಯ ಮಾಲೀಕರೇ ಸ್ವತಃ ತೆರವುಗೊಳಿಸುವುದಾಗಿ ತಿಳಿಸಿರುತ್ತಾರೆ. ಈ ಸಂಬಂಧ ಕೂಡಲೇ ಮಳೆ ನೀರುಗಾಲುವೆ ಮೇಲೆ ಇರುವ ಭಾಗವನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Rajakaluve Encroachment | ಯಲಹಂಕ ವಲಯದಲ್ಲಿ ಈವರೆಗೆ ಕೇವಲ 5 ಒತ್ತುವರಿ ಮಾತ್ರ ತೆರವು

ಯಲಹಂಕ ವಲಯದ ಕುವೆಂಪುನಗರ ವಾರ್ಡ್, ಸಿಂಗಾಪುರ ಲೇಔಟ್‌ನಲ್ಲಿ ಒತ್ತುವರಿಯಾಗಿದ್ದ ಜಾಗದ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ಲ್ಯಾಂಡ್ ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಅಲ್ಲದೆ ಸಿಂಗಾಪುರ ಲೇಔಟ್‌ನಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸ್ಥಳದಲ್ಲಿ ಜೆಸಿಬಿ ಮೂಲಕ ಮಳೆ ನೀರು ಕಾಲುವೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಹದೇವಪುರ ವಲಯ ಸರ್ವೇ ಕಾರ್ಯ ಚುರುಕು
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಭೂಮಾಪಕ ಇಲಾಖೆ ವತಿಯಿಂದ ಕಂದಾಯ ಇಲಾಖೆಯ ತಹಸೀಲ್ದಾರ್ ಅವರ ನೇತೃತ್ವದಲ್ಲಿ ವಾಗ್ದೇವಿ ಮುನ್ನೇಕೊಳಲು, ಕಸವನಹಳ್ಳಿ ಗ್ರಾಮ, ದೊಡ್ಡಕನ್ನಹಳ್ಳಿಯಲ್ಲಿ ಬರುವ ಎ.ಬಿ.ಕೆ ವಿಲೇಜ್, ಪ್ರೆಸ್ಟೀಜ್ ಟೆಕ್ ಪಾರ್ಕ್, ವಿಪ್ರೊ, ಸನ್ನೀ ಬ್ರೂಕ್ಸ್, ಬೆಳತ್ತೂರು ಗ್ರಾಮ, ಸಾದರಮಂಗಲ ಗ್ರಾಮ, ಬಿಲ್ಲಿನೇನಿ ಸಾಸ ಅಪಾರ್ಟ್ಮ್ಂಟ್‌ನ ಒಳ ಪ್ರದೇಶ, ಸಾಯಿ ಗಾರ್ಡನ್ ಬಡಾವಣೆ, ವರ್ತೂರಿನಿಂದ ಶೀಲವಂತನ ಕೆರೆ ಸೇರಿದಂತೆ ಇನ್ನಿತರ ಕಡೆ ಸರ್ವೇ ಕಾರ್ಯ ನಡೆಸಿ ಮಾರ್ಕಿಂಗ್ ಮಾಡಲಾಗುತ್ತಿದೆ ಎಂದು ಮಹದೇವಪುರ ವಲಯ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ತಿಳಿಸಿದ್ದಾರೆ.

ಸರ್ವೇ ಮಾಡಿ ಮಾರ್ಕ್ ಮಾಡಿದ ನಂತರ ಖಾಲಿ ಜಾಗ, ಕಾಂಪೌಂಡ್ ಇದ್ದ ಕೂಡಲೆ ತೆರವು ಕಾರ್ಯಾಚರಣೆ ನಡೆಸಲಾಗುವುದು. ರಾಜಕಾಲುವೆಗಳ ಮೇಲೆ ಜನರು ವಾಸಿಸುವ ಮನೆಗಳಿದ್ದಲ್ಲಿ ಸಂಬಂಧಪಟ್ಟವರಿಗೆ ಕಂದಾಯ ಇಲಾಖೆಯ ತಹಸೀಲ್ದಾರ್‌ರಿಂದ ನೋಟಿಸ್ ನೀಡಿ ಮೂರು ದಿನ ಕಾಲಾವಕಾಶ ನೀಡಲಾಗುತ್ತದೆ. ಅದಾದ ಬಳಿಕ ನಿಯಮಾನುಸಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Rajakaluve Encroachment | ರಾಜಧಾನಿ ಅಭಿವೃದ್ಧಿ ಹೊಣೆ ಹೊತ್ತಿರುವ ಬಿಡಿಎಯಿಂದಲೇ 23 ಕೆರೆ ಒತ್ತುವರಿ!

Exit mobile version