ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ (Namma Metro) ನಿರ್ಮಾಣ ಕಾಮಗಾರಿ ವೇಳೆ ನಡೆದ ಅವಘಡಗಳಲ್ಲಿ ಈವರೆಗೆ 38 ಜನರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಾಳುಗಳ ಕುಟುಂಬಸ್ಥರಿಗೆ ಇದುವರೆಗೆ 3.15 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಜೆಡಿಎಸ್ ಎಂಎಲ್ಸಿ ಟಿ.ಎ.ಶರವಣ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ದುರಂತಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಬಿಎಂಆರ್ಸಿಎಲ್ನ ಮೂವರು ಎಂಜಿನಿಯರ್ಗಳನ್ನು ಅಮಾನತು ಮಾಡಲಾಗಿದೆ ಹಾಗೂ ಗುತ್ತಿಗೆದಾರರಿಗೆ 1.77 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮುಂದೆ ಕಾಮಗಾರಿ ಸ್ಥಳಗಳಲ್ಲಿ ಯಾವುದೇ ಅವಘಡಗಳು ನಡೆಯದಂತೆ ತಡೆಯಲು ಸುರಕ್ಷತೆ, ಆರೋಗ್ಯ ಹಾಗೂ ಪರಿಸರ ಕೈಪಿಡಿಯನ್ನು ರಚಿಸಲಾಗಿದೆ. ಅದರಂತೆ ಗುತ್ತಿಗೆದಾರರು ಕಾಮಗಾರಿ ನಡೆಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಇತ್ತೇಚೆಗೆ ನಾಗವಾರ ಸಮೀಪದ ರಿಂಗ್ ರೋಡ್ನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ಸಂಭವಿಸಿದ್ದ ದುರಂತದಲ್ಲಿ ತಾಯಿ, ಎರಡು ವರ್ಷದ ಮಗು ಮೃತಪಟ್ಟಿದ್ದರು. ಅವಘಡ ಕುರಿತ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರ ವರದಿಯಲ್ಲಿ ಪಿಲ್ಲರ್ ನಿರ್ಮಾಣದ ವೇಳೆ ಸರಿಯಾದ ಅಡಿಪಾಯ, ಸರಿಯಾದ ಸಪೋರ್ಟ್ ನೀಡದಿದ್ದರಿಂದ ಅವಘಡ ಸಂಭವಿಸಿದೆ ಮಾಹಿತಿ ನೀಡಲಾಗಿತ್ತು.
ಇದನ್ನೂ ಓದಿ | Karnataka Election: ಅಧಿಕಾರಿಗಳ ಮೇಲೆ ಭ್ರಷ್ಟಾಸುರ ಸರ್ಕಾರ ನಿಯಂತ್ರಣ ಕಳೆದುಕೊಂಡಿದೆ: ರಣದೀಪ್ ಸುರ್ಜೇವಾಲಾ