ಕಳಪೆ ಬೀಜ ತಡೆಗಟ್ಟಲು (poor quality seed) ಹಾಗೂ ರಸಗೊಬ್ಬರ ಸಮರ್ಪಕವಾಗಿ ವಿತರಣೆ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರಿಗೆ ಬೆಳೆ ವಿಮೆ ಸರಿಯಾಗಿ ದೊರೆಯುವುದನ್ನು ಖಾತ್ರಿಪಡಿಸಲು ಬೆಳೆ ಕಟಾವು ಪ್ರಯೋಗವನ್ನು ಹೆಚ್ಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ (CM Meeting) ಸೂಚಿಸಿದ್ದಾರೆ.
ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 82.48 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಇದುವರೆಗೆ 50.91 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಇನ್ನೂ 32 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಬೇಕಾಗಿದ್ದು ಈ ಬಾರಿ ಎಲ್ಲಾ ಕಡೆ ಉತ್ತಮ ಮಳೆಯಾಗಿರುವ ಕಾರಣ ಬಿತ್ತನೆ ಗುರಿ ಸಾಧಿಸುವ ಭರವಸೆ ಹೊಂದಲಾಗಿದೆ.
ಬಿತ್ತನೆ ಬಳಿಕ ಮಳೆಯಾಗದೇ ಮೊಳಕೆಯಲ್ಲೇ ಹಾಳಾಗಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.
ಪ್ರಸ್ತುತ ಸಾಲಿನಲ್ಲಿ 291940 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು, ಬೀಜ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಬೀಜ ಮೊಳಕೆ ಬಾರದ ಬಗ್ಗೆ ಯಾವುದೇ ದೂರುಗಳು ಇದುವರೆಗೆ ಬಂದಿಲ್ಲ. ಆದರೂ ಕಳಪೆ ಬೀಜ (poor quality seed) ತಡೆಗಟ್ಟಲು ಎಲ್ಲಾ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದೇ ಅವಧಿಯಲ್ಲಿ 11,62,498 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟ ಮಾಡಲಾಗಿದ್ದು, ಇನ್ನೂ 1516007 ರಸಗೊಬ್ಬರ ದಾಸ್ತಾನು ಇದೆ. ರಸಗೊಬ್ಬರ ಸಮರ್ಪಕವಾಗಿ ವಿತರಣೆ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರಿಗೆ ಬೆಳೆ ವಿಮೆ ಸರಿಯಾಗಿ ದೊರೆಯುವುದನ್ನು ಖಾತ್ರಿಪಡಿಸಲು ಬೆಳೆ ಕಟಾವು ಪ್ರಯೋಗವನ್ನು ಹೆಚ್ಚಿಸಬೇಕು. ಈ ಸಂದರ್ಭದಲ್ಲಿ ರೈತ ಪ್ರತಿನಿಧಿ ಸಹ ಸ್ಥಳದಲ್ಲಿ ಹಾಜರಿರಬೇಕು ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಬೆಳೆವಿಮೆ ಯೋಜನೆಯಡಿ 24,52,393 ರೈತರು ನೋಂದಣಿ ಮಾಡಿದ್ದು, ಪ್ರಸ್ತುತ ಮುಂಗಾರಿನಲ್ಲಿ ಇದುವರೆಗೆ 5,08,550 ರೈತರು ನೋಂದಣಿ ಮಾಡಿದ್ದಾರೆ. ಇನ್ನೂ 1943843 ರೈತರು ನೋಂದಣಿ ಮಾಡಬೇಕಾಗಿದೆ. ಬೆಳೆ ವಿಮೆ ಲಾಭ ರೈತರಿಗೆ ಗರಿಷ್ಠ ಪ್ರಮಾಣದಲ್ಲಿ ದೊರೆಯುವುದನ್ನು ಖಾತ್ರಿಪಡಿಸಬೇಕು ಎಂದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಕೆಲವು ರಾಜ್ಯಗಳು ಹೊರ ಬಂದಿವೆ. ಬೆಳೆ ವಿಮೆ ಯೋಜನೆಯ ಸಮರ್ಪಕ ಅನುಷ್ಠಾನ ಕುರಿತು ಪರಿಶೀಲನೆ ನಡೆಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಹಿರಿಯ ಸಚಿವರ ಸಭೆಯನ್ನು ನಡೆಸಲಾಗುವುದು. ರೈತರಿಗೆ ಬೆಳೆವಿಮೆಯ ಲಾಭ ಪೂರ್ಣವಾಗಿ ದೊರೆಯುವಂತೆ ಮಾಡುವುದು ನಮ್ಮ ಗುರಿಯಾಗಬೇಕು ಎಂದರು.
ಬೆಳೆ ಸಮೀಕ್ಷೆ ಸಮರ್ಪಕವಾಗಿ ನಡೆಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೆಳೆ ಸಮೀಕ್ಷೆ ಶೇ.100ರಷ್ಟು ಕೈಗೊಳ್ಳಬೇಕು. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಲಭ್ಯವಿದ್ದು, ಇದರ ಪ್ರಯೋಜನ ಪಡೆಯಬೇಕು. ಈ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.
ಇದನ್ನೂ ಓದಿ | CM Siddaramaiah: ನಿಗಮ-ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ನೇಮಿಸಲು ಸಮಿತಿ ರಚಿಸಿದ ಸಿಎಂ
ಮೃತ ಜಾನುವಾರುಗಳಿಗೆ ತಕ್ಷಣ ಪರಿಹಾರ ನೀಡಿ
ಪಶುಸಂಗೋಪನೆ ಈ ವರ್ಷ ಜಾನುವಾರುಗಳ ಗಣತಿ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ರಾಜ್ಯದಲ್ಲಿ 2.4 ಕೋಟಿ ಲೀಟರ್ ಪ್ರತಿದಿನ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದನೆ ಹೆಚ್ಚಿಸಲು ಪೂರಕವಾಗಿ ಲಸಿಕಾ ಕಾರ್ಯಕ್ರಮವನ್ನು ಸಮಗ್ರವಾಗಿ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.
ರೈತ ಮಹಿಳೆಯರಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಶೇ.6ರ ಬಡ್ಡಿ ಸಹಾಯಧನ ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 2759 ವೈಯಕ್ತಿಕ ಫಲಾನುಭವಿಗಳಿಗೆ 1 ಕೋಟಿ ರೂ. ಅನುದಾನದಲ್ಲಿ ಸಹಾಯಧನ ಒದಗಿಸಲು ನಿಗದಿಪಡಿಸಲಾಗಿದ್ದು, ಜಿಲ್ಲಾಧಿಕಾರಿಗಳು ಅರ್ಹ ಮಹಿಳೆಯರಿಗೆ ಸಹಾಯಧನ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಜಾನುವಾರುಗಳ ಮರಣಕ್ಕೆ ಪರಿಹಾರವನ್ನು ತಕ್ಷಣ ಒದಗಿಸಬೇಕು. ಪ್ರಸ್ತುತ ಸಾಲಿನಲ್ಲಿ ಸಾವಿಗೀಡಾದ 10,800 ಜಾನುವಾರುಗಳಿಗೆ 5.83 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಈ ಹಿಂದೆ ಸಾವಿಗೀಡಾದ ಜಾನುವಾರುಗಳಿಗೆ ನೀಡಬೇಕಾದ ಪರಿಹಾರ ಬಾಕಿ ಕುರಿತು ಪರಿಶೀಲನೆ ನಡೆಸಬೇಕು ಎನ್ನುವ ಸೂಚನೆಯನ್ನು ಸಿಎಂ ನೀಡಿದರು
ಕಟ್ಟಡ ಕಾರ್ಮಿಕರ ಕಾರ್ಡ್ ದುರ್ಬಳಕೆ ತಡೆಗೆ ಕ್ರಮ ಕೈಗೊಳ್ಳಿ: ಸಿಎಂ ಸೂಚನೆ
ಕಟ್ಟಡ ಕಾರ್ಮಿಕರ ಕಾರ್ಡ್‌ಗಳ ದುರುಪಯೋಗ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸಿ, ಅರ್ಹರಿಗೆ ಮಾತ್ರ ಸೌಲಭ್ಯ ದೊರೆಯುವುದನ್ನು ಖಾತ್ರಿಪಡಿಸಬೇಕು ಎಂದು ಸೂಚಿಸಿದರು.
ಇನ್ನು ಪೊಲೀಸ್ ಕಾನ್ಸ್‌ಸ್ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ 2025 ಸಿಂಧುತ್ವ ಪ್ರಮಾಣ ಪತ್ರಗಳು ವಿಲೇವಾರಿಗೆ ಬಾಕಿಯಿದೆ. ಜಿಲ್ಲಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸಿಂಧುತ್ವ ಪ್ರಮಾಣ ಪತ್ರವನ್ನು ಆದಷ್ಟು ಬೇಗನೆ ನೀಡಬೇಕು. ಪೊಲೀಸ್ ಗೃಹ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಒದಗಿಸಬೇಕು ಎಂದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಸಂಬಂಧಿಸಿದಂತೆ ರೂ. 1252 ಕೋಟಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿದ್ದು, ಇದುವರೆಗೆ ಕೋಟಿ ರೂ. ವೆಚ್ಚವಾಗಿದೆ. ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಅನುಷ್ಠಾನಗೊಳಿಸುವ ಮೂಲಕ ಅನುದಾನ ವೆಚ್ಚ ಮಾಡಬೇಕು ಎಂದು ಸೂಚಿಸಿದರು.
ಇದನ್ನೂ ಓದಿ | Tourism Policy: ಹೊಸ ಪ್ರವಾಸೋದ್ಯಮ ನೀತಿ; ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲು ಸಿಎಂ ಸೂಚನೆ
ಬೆಂಗಳೂರಿನ 4 ಕಡೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ
ಯುವ ಸಬಲೀಕರಣ, ಕ್ರೀಡಾ ಇಲಾಖೆ ಸಂಬಂಧಿಸಿದ ಸಭೆಯಲ್ಲಿ ಸಿಎಂ ಮಾತನಾಡಿ, ಬೆಂಗಳೂರಿನಲ್ಲಿ ಯಲಹಂಕ ಬಳಿ 60 ಎಕರೆ ಪ್ರದೇಶದಲ್ಲಿ ಕ್ರೀಡಾ ನಗರ ನಿರ್ಮಾಣಕ್ಕೆ ಜಮೀನು ಒದಗಿಸುವ ಪ್ರಸ್ತಾವನೆಯನ್ನು ಸಂಪುಟದ ಮುಂದಿರಿಸಬೇಕು. ಇದೇ ರೀತಿ ಬೆಂಗಳೂರಿನಲ್ಲಿ ನಾಲ್ಕು ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ತಲಾ ಕನಿಷ್ಠ 2 ಎಕರೆ ಜಮೀನು ಗುರುತಿಸಬೇಕು. ಮೈಸೂರಿನಲ್ಲಿ ಸೈಕ್ಲಿಂಗ್ ವೆಲೋಡ್ರಾಂ ನಿರ್ಮಾಣಕ್ಕೆ 14 ಎಕರೆ ಜಮೀನು ಹಸ್ತಾಂತರಿಸುವ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಕ್ರೀಡಾಂಗಣ ಇಲ್ಲದ ತಾಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಿಸಲು ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.