ಬೆಂಗಳೂರು: ರಾಜ್ಯದಲ್ಲಿ ಮತ್ತೆ ತಲೆ ಎತ್ತಿರುವ ಮರ್ಯಾದೆಗೇಡು ಹತ್ಯೆ (Honour Killing) ಪ್ರಕರಣಗಳ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಘಟನೆಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು (Strict action against Culprit) ಕೈಗೊಳ್ಳಲು ಸರ್ಕಾರ ಮುಂದಾಗಿದೆ, ಅದರ ಜತೆಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದಿದ್ದಾರೆ. ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರೂ.. ಜಾತಿಯ ಕಟ್ಟುಪಾಡುಗಳನ್ನು ಮೀರಲಾಗದೆ ಇರುವುದು ದುರಂತ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಹೇಳಿದ್ದೇನು?
- ಕಳೆದ ಕೆಲ ವಾರಗಳಲ್ಲಿ ರಾಜ್ಯದ ಎರಡು ಕಡೆಗಳಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ನಡೆದಿರುವ ಸುದ್ದಿ ನಮ್ಮೆಲ್ಲರ ಮನ ಕಲಕಿದೆ. ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ವ್ಯವಸ್ಥೆ, ಸಾಮಾಜಿಕ ಕಟ್ಟುಪಾಡುಗಳ ಹೀನ ಮನಸ್ಥಿತಿಯನ್ನು ಇಂತಹ ಘಟನೆಗಳು ಪ್ರತಿಫಲಿಸುತ್ತವೆ.
- ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳ ವಿಚಾರದಲ್ಲಿ ನಮ್ಮ ಸರ್ಕಾರವು ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಕರಣದ ತನಿಖೆ, ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಲಿದೆ.
- ಮರ್ಯಾದೆಗೇಡು ಹತ್ಯೆಗಳನ್ನು ಮಾಡುವಂತಹ ಮನಸ್ಥಿತಿಯನ್ನು ಸೃಷ್ಟಿಸಿರುವ ಜಾತಿಗ್ರಸ್ತ ಸಮಾಜದಲ್ಲಿ ಪರಿವರ್ತನೆ, ಜಾಗೃತಿಯನ್ನು ಮೂಡಿಸುವುದು ಅತ್ಯವಶ್ಯಕವಾಗಿದೆ. ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರೂ ದಲಿತರಿಗೆ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಕಾಲಿರಿಸಲು ಅವಕಾಶವನ್ನು ನೀಡದಂತಹ ಆಚರಣೆ, ಸಂಪ್ರದಾಯಗಳು ನಮ್ಮಲ್ಲಿವೆ.
- “ಜಾತಿ ಸಂರಚನೆಯ ಕಟ್ಟುಪಾಡುಗಳನ್ನು ಮೀರಲು ಮಾನವೀಯತೆ, ವಿಚಾರಪರತೆಯೇ ದಾರಿ; ಜಾಗೃತಿಯೇ ಅಸ್ತ್ರ”.
- ಸಮಾಜವನ್ನು ಜಾತಿ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ ಎಲ್ಲ ಸಮಾಜ ಸುಧಾರಕರ ಆಶಯಗಳನ್ನು ವ್ಯಾಪಕವಾಗಿ ಪ್ರಚುರಪಡಿಸುವುದು ಇಂದಿನ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಸರ್ಕಾರವು ರಚನಾತ್ಮಕ ಕಾರ್ಯಕ್ರಮಗಳಿಗೆ ಮುಂದಾಗಲಿದೆ.
ಇತ್ತೀಚೆಗಿನ ಮರ್ಯಾದಾ ಹತ್ಯೆ ಘಟನೆಗಳು ಇವು
- ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕೃಷ್ಣ ಮೂರ್ತಿ ಎಂಬವರು ತಮ್ಮ ಮಗಳು ಕೀರ್ತಿ (20) ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂಬುದನ್ನು ತಿಳಿದು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ಕೀರ್ತಿಯ ಕುಟುಂಬ ಗೊಲ್ಲ ಸಮುದಾಯಕ್ಕೆ ಸೇರಿದ್ದು. ಆಕೆ ಪ್ರೀತಿಸುತ್ತಿದ್ದುದು ಪರಿಶಿಷ್ಟ ಜಾತಿ ಸಮುದಾಯದ ಗಂಗಾಧರ್ (24)ನನ್ನು. ಕೃಷ್ಣಮೂರ್ತಿ ಅವರು ಮಗಳನ್ನು ಕೊಂದಿದ್ದನ್ನು ಗಮನಿಸಿದ ಗಂಗಾಧರ್ ಕೂಡಾ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿವರ ಓದಿ: Dishonour Killing: ಅಪ್ಪನಿಂದ ಮಗಳ ಮರ್ಯಾದಾ ಹತ್ಯೆ, ನೊಂದು ರೈಲಿನಡಿಗೆ ತಲೆ ಕೊಟ್ಟ ಪ್ರಿಯಕರ
2. ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ವೆಂಕಟೇಶ್ ಗೌಡ ಎಂಬವರು ತನ್ನ ಮಗಳು ರಮ್ಯ ಅನ್ಯ ಕೋಮಿನ ಯುವಕನನ್ನು ಪ್ರೀತಿ ಮಾಡುತ್ತಿದ್ದಾಳೆ ಎಂಬುದನ್ನು ತಿಳಿದು ಆಕೆಯನ್ನು ಕೊಂದು ಯಾರಿಗೂ ಗೊತ್ತಾಗದಂತೆ ಸಮಾಧಿಯನ್ನೂ ಮಾಡಿದ್ದರು. ರಮ್ಯಾ (19) ಮೃತ ಯುವತಿಯಾಗಿದ್ದಾಳೆ. ನರಸಾಪುರ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುವಾಗ ಅನ್ಯ ಕೋಮಿನ ಯುವಕನ ಜತೆ ಪ್ರೀತಿಯಾಗಿತ್ತು ಎನ್ನಲಾಗಿದೆ.
ಪೂರ್ಣ ವಿವರಕ್ಕೆ ಈ ವರದಿ ಓದಿ: Honour killing : ಕೋಲಾರದಲ್ಲಿ ಮರ್ಯಾದಾ ಹತ್ಯೆ; ಅನ್ಯಕೋಮಿನ ಯುವಕನ ಪ್ರೀತಿಸಿದ ಮಗಳನ್ನು ಹೂತುಹಾಕಿದರು!