Site icon Vistara News

CM Siddaramaiah : ಗ್ರಾಮಲೆಕ್ಕಿಗರು ಊರು ಸುತ್ತುವಂತಿಲ್ಲ, ಪಂಚಾಯಿತಿಗಳಲ್ಲೇ ಇರಬೇಕು; ಸಿಎಂ ನೀಡಿದ 25 ಖಡಕ್‌ ಸೂಚನೆಗಳು

Village accountants

ಬೆಂಗಳೂರು: ಗ್ರಾಮ ಲೆಕ್ಕಿಗರು (village accountants) ಜನರ ಕೈಗೇ ಸಿಗುತ್ತಿಲ್ಲ. ಅವರು ಎಲ್ಲಿರುತ್ತಾರೆ ಎಂದು ಹುಡುಕಿಕೊಂಡು ಹೋಗುವುದೇ ಜನರಿಗೆ ಒಂದು ತಲೆ ನೋವಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಆದ್ದರಿಂದ ಗ್ರಾಮ‌ ಲೆಕ್ಕಿಗರು ಗ್ರಾಮ ಪಂಚಾಯ್ತಿಗಳಲ್ಲೇ ಕುಳಿತು ಕೆಲಸ ಮಾಡುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳ (District Commissioner) ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (Zilla panchayat CEOs) ಸಭೆಯಲ್ಲಿ ಈ ರೀತಿ ಸೂಚನೆ ನೀಡಿದರು. ಗ್ರಾಮ ಲೆಕ್ಕಿಗರನ್ನು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವಂತೆ ಮತ್ತು ಅವರಿಗೆ ಗ್ರಾಮ ಪಂಚಾಯ್ತಿಯಲ್ಲೇ ಒಂದು ಕೊಠಡಿ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಿದ್ದರಾಮಯ್ಯ ಖಡಕ್‌ ಸೂಚನೆಗಳು

ಸುದೀರ್ಘಾವಧಿಯಲ್ಲಿ ಪ್ರತಿಯೊಂದು ಇಲಾಖೆಯ ವಿಚಾರವನ್ನು ಗಮನವಿಟ್ಟು ಕೇಳಿ ಪ್ರತಿಯೊಂದಕ್ಕೂ ಸಲಹೆ ಸೂಚನೆಗಳನ್ನು ನೀಡಿದ ಸಿದ್ದರಾಮಯ್ಯ ಆಡಳಿತ ಮತ್ತು ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿ 25ಕ್ಕೂ ಅಧಿಕ ಸೂಚನೆಗಳನ್ನು ನೀಡಿದರು.

ಕಲುಷಿತ ನೀರಿನ ಸಮಸ್ಯೆ ಮರುಕಳಿಸದಿರಲಿ

1. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂರು ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿದ್ದಾರೆ, ಅಸ್ವಸ್ಥರಾಗಿದ್ದಾರೆ. ಚಿತ್ರದುರ್ಗದಲ್ಲಿ ಕಲುಷಿತ ನೀರು ಕುಡಿದು ಆರು ಜನ ಸತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು.

2.ಇತ್ತೀಚೆಗೆ ಡೆಂಗೆ ಜ್ವರ ಜಾಸ್ತಿ ಆಗಿದೆ. ವಿಶೇಷವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 4000ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಈ ಸಾಂಕ್ರಾಮಿಕ ತಡೆಗಟ್ಟಲು ಒತ್ತು ನೀಡಬೇಕು.

3.ಮತ್ತೆ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ಕೂಡಲೇ ಲಸಿಕೆ ಹಾಕುವ ಕೆಲಸ ಪ್ರಾರಂಭ ಮಾಡಬೇಕು. ಕಾಲುಬಾಯಿ ಜ್ವರ ರೋಗಕ್ಕೂ ಲಸಿಕೆ ಹಾಕಬೇಕು.

4. ಗೊಬ್ಬರವನ್ನು ಎಂ.ಆರ್.ಪಿ ದರಕ್ಕಿಂತ ಹೆಚ್ಚು ದರಕ್ಕೆ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು

ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ತುಂಬ ಮುಖ್ಯ

5. ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಈಗ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಐದನೇ ಗ್ಯಾರಂಟಿಯನ್ನು ಮುಂದಿನ ವರ್ಷ ಜನವರಿಯಿಂದ ಪ್ರಾರಂಭ ಮಾಡಲು ಉದ್ದೇಶಿಸಿದ್ದೇವೆ.ಗ್ಯಾರಂಟಿ ಯೋಜನೆಗಳಿಗೆ ಹಣದ ತೊಂದರೆ ಇಲ್ಲ. ಇದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು.

6.ಅಧಿಕಾರಿಗಳಿಗೆ ಅನಗತ್ಯವಾಗಿ ಶಿಕ್ಷೆ ನೀಡುವುದಿಲ್ಲ. ಆದರೆ ತಪ್ಪು ಮಾಡಿದರೆ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ: CM Siddaramaiah : ಅಧಿಕಾರಿಗಳಿಗೆ ವರ್ಕ್‌ ಫ್ರಂ ಹೋಮ್‌ ಇಲ್ಲ; ಕಚೇರಿಗೇ ಬರ್ಬೇಕು, ಪ್ರವಾಸ ಮಾಡ್ಬೇಕು; ಸಿಎಂ ಕಟ್ಟಾಜ್ಞೆ

ಗಣೇಶನ ಹಬ್ಬದ ವೇಳೆ ಕೋಮು ಸಾಮರಸ್ಯಕ್ಕೆ ಆದ್ಯತೆ

7.ಗಣೇಶ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಪರಿಸರ ಹಾನಿಯಾಗದಂತೆ ಹಬ್ಬ ಆಚರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಕೋಮುಶಕ್ತಿಗಳು ಕಾನೂನು ಸುವ್ಯವಸ್ಥೆ ಹಾಳು ಮಾಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು; ಯಾವ ಧರ್ಮದವರಿಗೂ ತೊಂದರೆಯಾಗಬಾರದು.

ಆನ್‌ಲೈನ್‌ ಕಡತಗಳು 10 ದಿನದಲ್ಲಿ ವಿಲೇವಾರಿ ಆಗಬೇಕು

8.ಸರ್ವೇಗೆ ಸಂಬಂಧಿಸಿದ ವ್ಯಾಜ್ಯಗಳು ಶೀಘ್ರ ವಿಲೇವಾರಿಗಾಗಿ ಕ್ರಮ ಕೈಗೊಳ್ಳಿ. ಭೂ ಮಾಪಕರಿಂದ ಸರ್ವೇ ಪ್ರಕರಣಗಳು ಬಾಕಿ ಉಳಿಯಬಾರದು. ರೈತರು ಸರ್ವೇ ವ್ಯಾಜ್ಯಗಳಿಗಾಗಿ ಕಚೇರಿಗೆ ಅಲೆಯುವುದನ್ನು ತಕ್ಷಣದಿಂದ ತಪ್ಪಿಸಿ ಕಂದಾಯ ಇಲಾಖೆಯಲ್ಲಿ ಕಡತಗಳು ಅನಲೈನ್‌ನಲ್ಲಿ 5-10 ದಿನದೊಳಗೆ ವಿಲೇವಾರಿ ಆಗಬೇಕು.

9.ಸರ್ವೇ mismatch ಗಳನ್ನು ಭೂ ಮಾಪಕರು, ಎಸಿ, ತಹಸೀಲ್ದಾರ್ ಗಳ ಸರ್ವೇ ಮಾಡುವ ಬಗ್ಗೆ ಪಟ್ಟಿ ಮಾಡಿ, ಬಾಕಿ ಇರುವ ಸರ್ವೇ ಕಾರ್ಯವನ್ನು ವಿಲೀವಾರಿ ಮಾಡಬೇಕು.

10.ನಿಗದಿತ ಅವಧಿಯೊಳಗೆ ಜೋಡಿ ಗ್ರಾಮಗಳ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು

11. ಬೆಂಗಳೂರು ನಗರ ಸುತ್ತುಮುತ್ತ green belt ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ ಸಹಕಾರ ನೀಡುತ್ತಿರುವ ಪಿಡಿಒ, ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು.

12.ಅನಧಿಕೃತ ಬಡಾವಣೆಗಳ ನಿರ್ಮಾಣ ವಿಷ ವರ್ತುಲವಿದ್ದಂತೆ. ಜಿಲ್ಲಾಧಿಕಾರಿಗಳು, ಸಿ ಇ ಓ ಗಳು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಂದಾಯ ಭೂಮಿಯಲ್ಲಿ ಅನಧಿಕೃತ ಬಡಾವಣೆಗಳ ಹಾವಳಿಯನ್ನು ತಡೆಗಟ್ಟಲು ಅಗತ್ಯ ಗಮನ ಹರಿಸಬೇಕು

13.ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಂತರ ಜಿಲ್ಲೆಯಲ್ಲಿ ಅನಧಿಕೃತ ಬಡಾವಣೆಗಳ ಹಾವಳಿಗೆ ಅಂತ್ಯ ಹಾಡಬೇಕಿದ್ದು, ಇದರ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಬೇಕು. ಕಂದಾಯ ಭೂಮಿಯಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡಲೆಬಾರದಂದು ಅಧಿಕಾರಿಗಳು ತೀರ್ಮಾನಿಸಬೇಕು.

14.ಬೆಂಗಳೂರು ಸುತ್ತಮುತ್ತ ಹಸಿರು ವಲಯದಲ್ಲಿ ಖಾಸಗಿ ವ್ಯಕ್ತಿಗಳು ಬಡಾವಣೆಗಳನ್ನು ಮಾಡಿ, ನಿವೇಶನಗಳನ್ನು ಹಂಚಿಕೆ ಮನೆ ಕಟ್ಟಿಕೊಂಡಿದ್ದಾರೆ. ಇದನ್ನು ಪಿಡಿಓ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳ ಸಹಕಾರ ಇಲ್ಲದ ಮಾಡಲು ಸಾಧ್ಯವಿಲ್ಲ. ಇದು ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸೂಚನೆ ನೀಡಿದರು

ಜಿಲ್ಲೆಗಳಲ್ಲಿ ರೆವೆನ್ಯೂ ಬಡಾವಣೆಗಳಿಗೆ ಅವಕಾಶ ಬೇಡ

15. ಜಿಲ್ಲೆಗಳಲ್ಲಿ ರೆವೆನ್ಯೂ ಬಡಾವಣೆಗಳಿಗೆ ಅವಕಾಶ ನೀಡಬಾರದು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಅಕ್ರಮ ಬಡಾವಣೆಗಳ ಸಮಸ್ಯೆ ಕುರಿತು ಪ್ರತ್ಯೇಕ ಸಭೆ ನಡೆಸುವ ಅಗತ್ಯವಿದೆ. ಇತರ ಜಿಲ್ಲೆಗಳಲ್ಲಿ ಇದಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ. ಅಧಿಕಾರಿಗಳು ಗಂಭೀರ ಸ್ವರೂಪದ ತಪ್ಪುಗಳನ್ನೆಸಗಿದಾಗ ಕ್ರಿಮಿನಲ್‌ ಪ್ರಕರಣಗಳನ್ನೇ ದಾಖಲಿಸಲು ಸೂಚಿಸಲಾಯಿತು

16. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಿದ್ದಾಗ, ಪೋಡಿಮುಕ್ತ ಗ್ರಾಮ ಅಭಿಯಾನ ನಡೆಸಿದ್ದರು. ಅದರ ಸ್ಥಿತಿಗತಿ ಏನು? 30.715 ಗ್ರಾಮಗಳಿವೆ. 175 ವಿಧಾನಸಭಾ ಕ್ಷೇತ್ರಗಳಲ್ಲಿ 16,850 ಗ್ರಾಮಗಳು ಪೋಡಿ ಮುಕ್ತ ಗ್ರಾಮಗಳಾಗಿವೆ. ಉಳಿದೆಡೆ ಕ್ರಮ ಆಗಬೇಕಿದೆ. 14,000 ಗ್ರಾಮಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಈ ಅಭಿಯಾನವನ್ನು ಮತ್ತೆ ಕೈಗೆತ್ತಿಕೊಳ್ಳಲು ಸೂಚಿಸಿದರು

17. 3292 ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ರೂಪಿಸುವ ನಿಟ್ಟಿನಲ್ಲಿ 812 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಲು ಇನ್ನೂ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಈ ಪ್ರಕ್ರಿಯೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಿದರು

ಫಸಲ್‌ ಬಿಮಾ ಯೋಜನೆಯ ಲಾಭ ಖಾಸಗಿ ಕಂಪನಿಗಳಿಂದ ಲೂಟಿ

18.ಫಸಲ್ ಬೀಮಾ ಯೋಜನೆಯ ಲಾಭವನ್ನು ಖಾಸಗಿ ಕಂಪನಿಗಳು ಲೂಟಿ ಹೊಡೆಯುತ್ತಿವೆ. ಆದ್ದರಿಂದ ಈ ಯೋಜನೆಯಡಿ ಸರ್ಕಾರಿ ವಿಮಾ ಕಂಪನಿಗಳನ್ನು ಸೇರಿಸಬೇಕು, ಇದರಿಂದ ರೈತರಿಗೂ ಲಾಭವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು

19.ಬೆಳೆ ಪರಿಹಾರಕ್ಕೆ ಮಾರ್ಗಸೂಚಿಗಳ ಪರಿಷ್ಕರಣೆ ಮಾಡಲು ಪರಿಣಿತರ ಸಮಿತಿಯನ್ನು ರಚಿಸಿ ವರದಿ ತರಿಸಿಕೊಳ್ಳಬೇಕು. ಒಟ್ಟಾರೆ ಉತ್ತಮ ಬೆಳೆ ಪರಿಹಾರ ನೀಡುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡುವುದು ಯೋಜನೆಯ ಉದ್ದೇಶ

20. ಕಬ್ಬು ಬೆಳೆಗಾರರಿಗೆ ಕಬ್ಬು ತೂಕ ಹಾಗೂ ಅರೆಸುವಿಕೆಗೆ ಅನುಕೂಲವಾಗುವಂತೆ ಕಾರ್ಖಾನೆಗಳಲ್ಲಿ ವೇ ಬ್ರಿಡ್ಜ್ ಸ್ಥಾಪಿಸಲು ಕ್ರಮ ಹಾಗೂ ಅವಧಿಗೂ ಮುನ್ನ ಕಬ್ಬು ಅರಿಸುವಿಕೆಯನ್ನು ತಡೆಗಟ್ಟಲು ಕಟಾವು ಅವಧಿಯನ್ನು ಸರ್ಕಾರ ನಿಗದಿಗೊಳಿಸಬೇಕು

ಜಲಜೀವನ್‌, ಪರಿಶಿಷ್ಟರ ಟೆಂಡರ್‌, ಉದ್ಯೋಗ ಖಾತ್ರಿ 100 ದಿನ ಕೆಲಸ ಕಡ್ಡಾಯ

21.ಜಲ ಜೀವನ್ ಮಿಷನ್ ಅಡಿ ಬಾಕಿ ಇರುವ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ತ್ವರಿತವಾಗಿ ಕೈಗೊಳ್ಳಬೇಕು. ಇದಕ್ಕಾಗಿ ಮೀಸಲು ಇರಿಸಿರುವ ಅನುದಾನವನ್ನು ನಿಗದಿತ ಅವಧಿಯೊಳಗೆ ಬಳಸಿಕೊಳ್ಳಬೇಕು

22.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಗುತ್ತಿಗೆದಾರರಿಗೆ 1 ಕೋಟಿವರೆಗೆ ಟೆಂಡರ್ ಕಾಮಗಾರಿ ಮಂಜೂರು ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು

23.ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಣೆ ಆಗುತ್ತಿಲ್ಲ. ಯೋಜನೆಗೆ ನೀರಿನ ಮೂಲ ಸರಿಯಿಲ್ಲದ ಕಡೆಗಳಲ್ಲಿ ನೀರಿನ ಮೂಲವನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಬೇಕು. ಯೋಜನೆ ಸರಿಯಾಗಿ ಅನುಷ್ಠಾನ ಗೊಳ್ಳದಿದ್ದರೆ ,ಯೋಜನೆಗೆ ಹಾಕಿದ ಹಣ ವ್ಯರ್ಥವಾಗುತ್ತದೆ

24.ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಎಲ್ಲ ಯೋಜನೆಗಳ ಕಾಮಗಾರಿಗಳಿಗೆ ಮುಂದಿನ ಮಾರ್ಚ್ 15ರೊಳಗೆ ಚಾಲನೆ ನೀಡಬೇಕು

25.ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗಳಿಗೆ ನೀಡಲಾಗುವ ಮಾನವ ದಿನಗಳ ಗುರಿಯನ್ನು ಸಾಧಿಸಲೇಬೇಕು. ವಿನಾಕಾರಣ ನೆಪಗಳನ್ನು ಅಧಿಕಾರಿಗಳು ಹೇಳಬಾರದು.

Exit mobile version