Site icon Vistara News

CM Siddaramaiah : ಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ಉಪಾಯ ಹೇಳಿದ ಸಿದ್ದರಾಮಯ್ಯ!

Human- Animal Conflict

ಬೆಂಗಳೂರು: ರಾಜ್ಯದಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ (Human-animal Conflict) ದಿನೇದಿನೇ ಹೆಚ್ಚುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ (Forest Department) ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಜತೆಗೆ ಇದನ್ನು ಹೇಗೆ ತಡೆಯಬಹುದು ಎಂಬ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಅರಣ್ಯ ಪ್ರದೇಶಗಳಿಂದ ಪ್ರಾಣಿಗಳು ಬಾರದಂತೆ ಬ್ಯಾರಿಕೇಡ್ ನಿರ್ಮಿಸಲು (Barricade Construction) ಹೆಚ್ಚಿನ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಅದಕ್ಕಿಂತಲೂ ಹೆಚ್ಚಾಗಿ ಕಾಡು ಪ್ರಾಣಿಗಳಿಗೆ ಮೇವು, ಕುಡಿಯುವ ನೀರನ್ನು ಅರಣ್ಯ ಪ್ರದೇಶದೊಳಗೆ ಲಭ್ಯವಾಗಿಸುವ ಮೂಲಕ ಅವರು ನಾಡಿಗೆ ಬರದಂತೆ ತಡೆಯುವುದು ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಶುಕ್ರವಾರ ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿರುವ ʻಮುಖ್ಯಮಂತ್ರಿಗಳ ಪದಕ ಪ್ರದಾನʼ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೆಚ್ಚಿನ ಸಸಿಗಳನ್ನು ನೆಡುವ ಮೂಲಕ ಕಾಡು ಬೆಳೆಸುವ ಕೆಲಸವಾಗಬೇಕು. ಅರಣ್ಯ ಪ್ರದೇಶದ ವಿಸ್ತೀರ್ಣಗೊಂಡರೆ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ ಕಾಡುಗಳಲ್ಲಿ ಹುಲಿ, ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವುದು ಸಂತೋಷದ ವಿಷಯ ಎಂದರು. ಆದರೆ ಕಾಡುಪ್ರಾಣಿಗಳು ಜನರಿರುವ ಪ್ರದೇಶಕ್ಕೆ ಬರುತ್ತಿದ್ದು, ಅರಣ್ಯ ಇಲಾಖೆಯವರು ಹಾಗೂ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಅರಣ್ಯ ಪ್ರದೇಶ ಹೆಚ್ಚಳದಿಂದ ಹವಾಮಾನ ವೈಪರೀತ್ಯಗಳಿಗೆ ತಡೆ

ʻʻಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಜವಾಬ್ದಾರಿ. ಅರಣ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದ ಭೂ ಪ್ರದೇಶದಲ್ಲಿ ಶೇ. 20 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ಕನಿಷ್ಠ ಶೇ. 33 ಕ್ಕೆ ಅರಣ್ಯ ಪ್ರದೇಶದ ವಿಸ್ತರಣೆಯಾಗಬೇಕಿದೆ. ಆಗ ಮಾತ್ರ ಹವಾಮಾನ ವೈಪರೀತ್ಯಗಳನ್ನು ತಡೆಯಲು ಸಾಧ್ಯʼʼ ಎಂದು ಸಿದ್ದರಾಮಯ್ಯ ಹೇಳಿದರು.

ʻʻಈ ವರ್ಷ ಮಳೆಯಿಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕಾವೇರಿ ನೀರು, ಬರಗಾಲ, ಆಹಾರ ಉತ್ಪತ್ತಿ ಕೊರತೆಗಳನ್ನು ತಲೆದೋರುತ್ತದೆ. ಈ ಪರಿಸ್ಥಿತಿ ರಾಜ್ಯದ ಜಿಡಿಪಿ, ತಲಾವಾರು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ. 50ರಷ್ಟು ಬೆಳೆ ಹಾನಿಯಾಗಿದೆ. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಇಂತಹ ಬರಗಾಲ ಪರಿಸ್ಥಿತಿ ಎದುರಾಗುತ್ತಿದ್ದು, ಅರಣ್ಯ ಪ್ರದೇಶ ಹೆಚ್ಚಿದರೆ ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಸಾಧ್ಯವಿದೆʼʼ ಎಂದು ಅಭಿಪ್ರಾಯಪಟ್ಟರು.

ಪ್ರತಿ ವರ್ಷವೂ ಮುಖ್ಯಮಂತ್ರಿಗಳ ಪದಕ ಪ್ರದಾನ

ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರು ಅತ್ಯಂತ ಕ್ಲಿಷ್ಟ ಪರಿಸ್ಥಿತಿ ಯಲ್ಲಿ ಕಾರ್ಯನಿರ್ವಹಿಸುತ್ತಾ ಅರಣ್ಯ ಸಂರಕ್ಷಣೆ ಮಾಡುತ್ತಾರೆ. ವನ್ಯಜೀವಿಗಳನ್ನು ರಕ್ಷಣೆ ಮಾಡುವುದಲ್ಲದೆ ಕಾಡು ಬೆಳೆಸುವ ಕೆಲಸವನ್ನೂ ಮಾಡುತ್ತಾರೆ. ಅಸಾಧಾರಣ ಸೇವೆ ಮಾಡಿದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಉತ್ತೇಜಿಸುವ ಕೆಲಸವನ್ನು 2017 ರಿಂದ ಮಾಡಲಾಗುತ್ತಿದೆ. 2017, 2018, 2019 ರಲ್ಲಿ ನೀಡಲಾಗಿದೆ. ಎರಡು ವರ್ಷಗಳಿಂದ ಪದಕ ವಿತರಣಾ ಸಮಾರಂಭ ನಡೆದಿರಲಿಲ್ಲ. 2020 ಹಾಗೂ 21ನೇ ಸಾಲಿನ ಪದಕ ವಿತರಣೆಯನ್ನು ಅರಣ್ಯ ಇಲಾಖೆ ವತಿಯಿಂದ 50 ಪದಕಗಳನ್ನು ವಿತರಣೆ ಮಾಡಿದೆ.

2- 3 ವರ್ಷಗಳ ಪದಕಗಳನ್ನು ಒಟ್ಟಿಗೆ ನೀಡುವ ಪರಿಪಾಠ ಇರಬಾರದು. ಪ್ರಶಸ್ತಿ ವಿಜೇತರ ಆಯ್ಕೆಯ ನಂತರ ಎರಡು ಮೂರು ವರ್ಷ ಕಾಯುವ ಅಗತ್ಯವಿಲ್ಲ. ಪ್ರತಿ ವರ್ಷವೂ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಬೇಕೆಂದು ಅರಣ್ಯ ಸಚಿವರಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಚಿವ ಪ್ರಿಯಾಂಕ ಖರ್ಗೆ, ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ , ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version