ಬೆಂಗಳೂರು: ಆಸ್ತಿ ತೆರಿಗೆ (Property Tax) ಪಾವತಿಸಲು ಮಾಲೀಕರಿಗೆ ಬಿಬಿಎಂಪಿ ನೋಟಿಸ್ ಜಾರಿಗೊಳಿಸುತ್ತಿರುವ ಬಗ್ಗೆ ರಾಜ್ಯ ಸರ್ಕಾರದ ಸಚಿವರಿಂದಲೇ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಶಾಸಕರಿಂದಲೂ ಅಸಮಾಧಾನ ಸ್ಫೋಟವಾಗಿದೆ. ಈ ಸರ್ಕಾರ ಬಡವರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದು, ಬಡಪರ ಸರ್ಕಾರ ಅಂತ ಹೇಳಿ ಬಡವರ ಆಸ್ತಿ ಕಿತ್ತು ತಿನ್ನುತ್ತಿದ್ದಾರೆ ಎಂದು ದಾಸರಹಳ್ಳಿ ಕ್ಷೇತ್ರ ಶಾಸಕ ಎಸ್.ಮುನಿರಾಜು ಕಿಡಿಕಾರಿದ್ದಾರೆ.
ಆಸ್ತಿ ತೆರಿಗೆ ಪಾವತಿಗೆ ಬಿಬಿಎಂಪಿ ನೋಟಿಸ್ ನೀಡುತ್ತಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ಸರ್ಕಾರ ಬಂದು ವರ್ಷ ಕಳೆಯುತ್ತಾ ಬಂತು, ಆದರೆ ರಾಜ್ಯ ಅಭಿವೃದ್ಧಿ ಕಂಡಿಲ್ಲ. ಆಸ್ತಿ ತೆರಿಗೆಯಲ್ಲಿ 31 ಸಾವಿರ ರೂ. ಕಟ್ಟುವವರು 1 ಲಕ್ಷಕ್ಕಿಂತ ಹೆಚ್ಚು ಹಣ ಪಾವತಿಸುತ್ತಿದ್ದಾರೆ. ತೆರಿಗೆ ಕಟ್ಟದಿದ್ದರೆ ಬೀಗ ಹಾಕುತ್ತೇವೆ ಎಂದು ನೋಟಿಸ್ ಕೊಡುತ್ತಾರೆ ಎಂದು ಹೇಳಿದರು.
ಸದ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದ್ರೆ ಈ ಸರ್ಕಾರ ಸರ್ಕಾರ ಸರ್ಕ್ಯುಲರ್ ನೆಪ ಹೇಳಿಕೊಂಡು ಬಡವರ ಮೇಲೆ ಹೊರೆ ಹಾಕುತ್ತಿದೆ. ನನ್ನ ಕ್ಷೇತ್ರದಲ್ಲಿ 388 ಅಂಗಡಿ ಬೀಗ ಹಾಕಿದ್ದಾರೆ. ಚದರ ಅಡಿ 3 ಸಾವಿರ ರೂ. ಇರುವ ಜಾಗ 7 ಸಾವಿರಕ್ಕೆ ಏರಿಕೆ ಆಗಿದೆ. ಬಡವರ ಮೇಲೆ ದಬ್ಬಾಳಿಕೆ ಆಗುತ್ತಿರುವುದರಿಂದ ಸೈಟ್ ತೆಗೆದುಕೊಳ್ಳೋಕೆ ಆಗುತ್ತಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | BY Vijayendra: ಜಾಹೀರಾತು ಕೊಟ್ಟ ತಕ್ಷಣ ಗ್ಯಾರಂಟಿಗಳು ಜನರಿಗೆ ತಲುಪಿದೆ ಅಂತಲ್ಲ: ಬಿ.ವೈ. ವಿಜಯೇಂದ್ರ
ರಾಜ್ಯ ಸರ್ಕಾರ ವಿದ್ಯುತ್, ಹಾಲು, ಮದ್ಯ, ನೀರಿನ ದರ, ಆಸ್ತಿ ತೆರಿಗೆ ಹಣ ದುಪ್ಪಟ್ಟು ಮಾಡಿದೆ. ಬಡ ಜನರ ಹಣವನ್ನು ಕಾಂಗ್ರೆಸ್ ಸುಲಿಗೆ ಮಾಡುತ್ತಿದೆ. ನಾನು ಇದನ್ನು ತೀವ್ರವಾಗಿ ಖಂಡಿಸುವೆ. ನನ್ನ ಕ್ಷೇತ್ರದ 388 ಅಂಗಡಿ ಮಾಲೀಕರಿಗೆ ಮಳಿಗೆ ಓಪನ್ ಮಾಡೋದಕ್ಕೆ ಹೇಳಿದ್ದೀನಿ. ಯಾರು ಬಂದರೂ ನಾನು ನೋಡಿಕೊಳ್ಳುವೆ ಎಂಬ ಭರವಸೆ ಅವರಿಗೆ ನೀಡಿದ್ದೀನಿ. ನನ್ನ ಕ್ಷೇತ್ರದ ಜನರಿಗೆ ನ್ಯಾಯ ಕೊಡಿಸೋ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಬಡವರ ಸುಲಿಗೆ ಸರ್ಕಾರ, ಬಡವರ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಡಿಸಿಎಂ ಡಿಕೆಶಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ
ಬಿಬಿಎಂಪಿ ನಿಯಮಬಾಹಿರವಾಗಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿರುವುದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಸಮಾಧಾನ ಹೊರಹಾಕಿದ್ದಾರೆ. 7 ವರ್ಷಗಳ ಹಿಂದಿನ ತೆರಿಗೆ ವಸೂಲಿಗೆ ನೋಟಿಸ್ ನೀಡುತ್ತಿರುವುದಕ್ಕೆ ಸಚಿವರು ಕೆಂಡಾಮಂಡಲವಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದ್ದು, ಕಳೆದ 2016-17ನೇ ಸಾಲಿನಿಂದಲೇ ಪರಿಷ್ಕೃತ ದರವನ್ನು ಪಾವತಿಸುವಂತೆ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ. ಹೀಗಾಗಿ ಬಿಬಿಎಂಪಿಯ ಅವೈಜ್ಞಾನಿಕ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ವಾಪಸ್ ಪಡೆಯುವಂತೆ ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ರಾಮಲಿಂಗಾರೆಡ್ಡಿ ಅವರು ಪತ್ರ ಬರೆದಿದ್ದಾರೆ.
ರಾಮಲಿಂಗಾರೆಡ್ಡಿ ಪತ್ರದಲ್ಲಿ ಏನಿದೆ?
ಬಿಬಿಎಂಪಿ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದೆ 2016-17 ಸಾಲಿನಿಂದ ಏಳು ವರ್ಷಗಳಿಗೆ ಪರಿಷ್ಕರಣೆ ನೋಟಿಸ್ ಜಾರಿ ಮಾಡಿರುವುದು ಕಂಡುಬಂದಿದೆ. ಈ ರೀತಿ ಸಾರ್ವಜನಿಕರ ಮೇಲೆ ಒತ್ತಡ ತರುತ್ತಿರುವುದು ಉತ್ತಮವಲ್ಲ. ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ (ಕೆಎಂಸಿ)-1976 ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಯ್ದೆ-2020 ಅನ್ವಯ ಒಮ್ಮೆಲೇ 7 ವರ್ಷಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವುದು ನಿಯಮಬಾಹಿರವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Lok Sabha Election 2024: ಮೈಸೂರಿನಲ್ಲಿ ಮತ್ತೆ ಸ್ಪರ್ಧಿಸಲು ಕುಮಾರಸ್ವಾಮಿ ಬೆಂಬಲ ಕೋರಿದ ಸಂಸದ ಪ್ರತಾಪ್ ಸಿಂಹ
ಬಿಬಿಎಂಪಿ ವಿಧಿಸುತ್ತಿರುವ ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು. ಈ ಮೂಲಕ ಬೆಂಗಳೂರಿನ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸಂಬಂಧಿಸಿದವರಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ರಾಮಲಿಂಗರೆಡ್ಡಿ ಒತ್ತಾಯ ಮಾಡಿದ್ದಾರೆ.